ಮುಖ್ಯ ಸುದ್ದಿ
ರೈತರಿಗೆ ಶುಭ ಸುದ್ದಿ | ವಾಡಿಕೆಗಿಂತ ಅಧಿಕ ಸುರಿಯಲಿದೆ ಮುಂಗಾರು | ಭಾರತೀಯ ಹವಾಮಾನ ಇಲಾಖೆ ಮಾಹಿತಿ
CHITRADURGA NEWS | 16 APRIL 2024
ಚಿತ್ರದುರ್ಗ: ತೀವ್ರ ಬರದಿಂದ ಹನಿ ನೀರಿಗೂ ಸಂಕಷ್ಟ ಎದುರಾಗಿರುವ ಸಮಯದಲ್ಲಿ ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುಂಗಾರು ಮಳೆ ವರದಿ ಕೊಂಚ ನೆಮ್ಮದಿ ತಂದಿದೆ.
ಈ ಬಾರಿ ಲಾ ನಿನಾ ಪರಿಸ್ಥಿತಿಯು ಅನುಕೂಲಕರ ಆಗಿರುವುದರಿಂದ ದೇಶದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಅಧಿಕವಾಗಲಿದೆ. ಮಳೆಯು ದೀರ್ಘಾವಧಿ ಸರಾಸರಿಯಾದ 87 ಸೆಂಟಿ ಮೀಟರ್‌ಗಿಂತ ಹೆಚ್ಚಿರಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್ ತಿಳಿಸಿದ್ದಾರೆ.
1951ರಿಂದ 2023ರ ನಡುವಣ ಅವಧಿಯಲ್ಲಿ, ಎಲ್ ನಿನೊ ಪರಿಸ್ಥಿತಿಯ ನಂತರ ಲಾ ನಿನಾ ಪರಿಸ್ಥಿತಿ ನಿರ್ಮಾಣ ಆದ ಒಂಬತ್ತು ಸಂದರ್ಭ ಗಳಲ್ಲಿ ದೇಶದಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ. ಭಾರತದಲ್ಲಿ ಆಗುವ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 87 ಸೆಂ.ಮೀ. ಐವತ್ತು ವರ್ಷಗಳ ಸರಾಸರಿಯನ್ನು ಇದು ಆಧರಿಸಿದೆ.
ಕ್ಲಿಕ್ ಮಾಡಿ ಓದಿ: ಬಬ್ಬೂರು ಫಾರ್ಮ್ ಕಾಮಗಾರಿ | ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ
ದೇಶದ ಕೃಷಿ ಚಟುವಟಿಕೆಗಳಿಗೆ ಮುಂಗಾರು ಮಳೆಯು ಬಹಳ ಮಹತ್ವದ್ದು. ದೇಶದಲ್ಲಿ ಕೃಷಿ ಚಟುವಟಿಕೆಗಳು ನಡೆಯುವ ಒಟ್ಟು ಜಮೀನಿನ ಪೈಕಿ 52ರಷ್ಟು ಭಾಗವು ಮುಂಗಾರು ಮಳೆಯನ್ನೇ ನೆಚ್ಚಿಕೊಂಡಿದೆ. ಹೀಗಾಗಿ, ಮುಂಗಾರು ಈ ಬಾರಿ ವಾಡಿಕೆಗಿಂತ ಚೆನ್ನಾಗಿ ಆಗಲಿದೆ ಎಂಬ ಅಂದಾಜು ದೇಶದ ಎಲ್ಲ ವಲಯಗಳ ಪಾಲಿಗೆ ಶುಭಸುದ್ದಿಯಂತೆ ಬಂದಿದೆ.
ದೇಶದ ಹಲವು ಭಾಗಗಳಲ್ಲಿ ಈಗ ತೀವ್ರ ಸೆಕೆಯ ವಾತಾವರಣ ಇದೆ. ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಬಿಸಿಗಾಳಿಯ ದಿನಗಳು ಗಣನೀಯವಾಗಿ ಹೆಚ್ಚಿರಲಿವೆ ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆ ಮಳೆಯ ಪ್ರಮಾಣವು ವಾಡಿಕೆಗಿಂತ ಹೆಚ್ಚು ಇರಲಿದೆ.
ಸದ್ಯ ಎಲ್ ನಿನೊ ಪರಿಸ್ಥಿತಿ ಇದೆ.
ಮುಂಗಾರು ಅವಧಿಯ ಮೊದಲಾರ್ಧದಲ್ಲಿ ಎನ್ಸೊ-ತಟಸ್ಥ ಸ್ಥಿತಿ (ಎಲ್ ನಿನೊ ಹಾಗೂ ಲಾ ನಿನಾ ಎರಡೂ ಇಲ್ಲದ ಸ್ಥಿತಿ) ನಿರ್ಮಾಣ ಆಗುವ ನಿರೀಕ್ಷೆ ಇದೆ. ಅದಾದ ನಂತರದಲ್ಲಿ, ಆಗಸ್ಟ್–ಸೆಪ್ಟೆಂಬರ್ ವೇಳೆಗೆ ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗಬಹುದು.
ಕ್ಲಿಕ್ ಮಾಡಿ ಓದಿ: ಆಟೊ ಅಪಘಾತ; ಚಾಲಕ ಮೃತ | ಆರು ಜನರಿಗೆ ಗಾಯ
ಪೆಸಿಫಿಕ್ ಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಆಗುವ ಏರಿಕೆಯು ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತದೆ. ಈ ವಿದ್ಯಮಾನವನ್ನು ಎಲ್‌ನಿನೊ ಎಂದು ಗುರುತಿಸಲಾಗಿದೆ. ಲಾ ನಿನೊ ಪರಿಸ್ಥಿತಿ ಇದ್ದಾಗ ಪೂರ್ವ ಪೆಸಿಫಿಕ್ ಸಾಗರದಲ್ಲಿ ಉಷ್ಣಾಂಶವು ವಾಡಿಕೆಗಿಂತ ಕಡಿಮೆ ಆಗುತ್ತದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ತಾಪಮಾನ ಹೆಚ್ಚಿರುತ್ತದೆ. ಭಾರತದಲ್ಲಿ ಮುಂಗಾರು ಚೆನ್ನಾಗಿ ಆಗುತ್ತದೆ.