ಬ್ಯಾಟರಿ ಗ್ಯಾಂಗ್ ಗೆ ಖಾಕಿ ಹೆಡೆಮೂರಿ; ಸುಳಿವು ನೀಡಿದ ಸಿಸಿಟಿವಿ ಕ್ಯಾಮೆರಾ ದೃಶ್ಯ

ಚಿತ್ರದುರ್ಗನ್ಯೂಸ್.ಕಾಂ

ಮೊಬೈಲ್ ಟವರ್ ಗಳ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಅನ್ನು ನಾಯಕನಹಟ್ಟಿ ಪೊಲೀಸರು ಬಂಧಿಸಿ ಹೆಡೆಮೂರಿ ಕಟ್ಟಿದ್ದಾರೆ. ಈ ಕಾರ್ಯಾಚರಣೆಗೆ ಜಾಡು ಸಿಕ್ಕಿದ್ದು ರಸ್ತೆಯ ಪಕ್ಕದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಎಂಬುದು ಕುತೂಹಲಕಾರಿ ಅಂಶ.

ನಾಯಕನಹಟ್ಟಿ ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿ ಮತ್ತು ಮಲ್ಲೂರಹಳ್ಳಿ ಗ್ರಾಮಗಳಲ್ಲಿರುವ ಮೊಬೈಲ್‌ ಟವರ್‌ನ ಬ್ಯಾಟರಿ ಕಳ್ಳತನ ಪ್ರಕರಣ ಎರಡು ತಿಂಗಳನಿಂದ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು.

ಕಳೆದ 2 ತಿಂಗಳ ಹಿಂದೆ ನಾಯಕನಹಟ್ಟಿ ಹೋಬಳಿಯ ತೊರೆಕೋಲಮ್ಮನಹಳ್ಳಿ ಮತ್ತು ಮಲ್ಲೂರಹಳ್ಳಿ ಗ್ರಾಮದಲ್ಲಿರುವ ಖಾಸಗಿ ಮೊಬೈಲ್‌ ಟವರ್‌ಗಳ ವಿದ್ಯುತ್ ಸರಬರಾಜಿಗಾಗಿ ಅಳವಡಿಸಿದ್ದ ಬ್ಯಾಟರಿಗಳು ಕಳುವಾಗಿವೆ ಎಂದು ಟವರ್ ಅಧಿಕಾರಿಗಳು ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಗ್ಯಾಂಗ್ ಪತ್ತೆಗೆ ನೆರವಾಗಿದ್ದು ಅಬ್ಬೇನಹಳ್ಳಿ ರಸ್ತೆಯ ಪಕ್ಕದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ.

ಈ ದೃಶ್ಯಾವಳಿಯ ಜಾಡು ಹಿಡಿದು ಹೊರಟ ನಾಯಕನಹಟ್ಟಿ ಪೊಲೀಸರು ಚಳ್ಳಕೆರೆ, ಹಿರಿಯೂರು, ಬೆಂಗಳೂರಿನವರೆಗೂ ಇರುವ ಎಲ್ಲ ಟೋಲ್‌ ಪ್ಲಾಜಾಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಕಳ್ಳರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ತಳಕು ಹೋಬಳಿ ಗುಡಿಹಳ್ಳಿ ಮತ್ತು ದೊಡ್ಡಉಳ್ಳಾರ್ತಿ ಗ್ರಾಮದ ವೆಂಕಟೇಶ, ಹನುಮಂತರಾಯ, ಬ್ರಹ್ಮೇಂದ್ರ, ಮಂಜುನಾಥ್, ತಿಪ್ಪೇಶಿ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ ಮೊಬೈಲ್‌ ಟವರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈಚೆಗೆ ಕೆಲಸ ಬಿಟ್ಟು, 6 ಜನರ ತಂಡ ಕಟ್ಟಿಕೊಂಡು ಕಳ್ಳತನ ಮುಂದುವರಿಸಿದ್ದರು.

ರಾಜ್ಯದ ಹಾವೇರಿ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲಿ ಮೊಬೈಲ್‌ ಟವರ್ ಬ್ಯಾಟರಿಗಳನ್ನು ಕದ್ದು ಬೊಲೆರೋ ಸರಕು ವಾಹನದಲ್ಲಿ ತುಂಬಿ ಬೆಂಗಳೂರಿನ ದಾಸನಪುರ ವ್ಯಾಪ್ತಿಯ ಗುಜರಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದರು. ತಮಿಳುನಾಡು ಮೂಲದ ದೊರೈಮಧು ಎಂಬ ವ್ಯಕ್ತಿಯು ಬ್ಯಾಟರಿಗಳನ್ನು ಖರೀದಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಳವು ಮಾಡಿದ್ದ 40 ಬ್ಯಾಟರಿ, ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನ, 4 ಮೊಬೈಲ್ ಫೋನ್‌ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ₹2 ಲಕ್ಷ ಮೌಲ್ಯದ ಬ್ಯಾಟರಿಗಳು, ₹7 ಲಕ್ಷ ಮೌಲ್ಯದ ಬೊಲೆರೋ ವಾಹನ ಸೇರಿ  ಅಂದಾಜು ₹9 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ 5 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರಿಸಿಕೊಂಡಿರುವ ಇನ್ನಿಬ್ಬರಿಗಾಗಿ ಪೊಲೀಸರ ತಂಡ ಹುಡುಕಾಟ ಮುಂದುವರಿಸಿದೆ.

ಡಿವೈಎಸ್‌ಪಿ ರಾಜಣ್ಣ, ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕೆ.ಶಿವಕುಮಾರ್, ಸಿಬ್ಬಂದಿ ಶ್ರೀಹರಿ, ನಾರಾಯಣ, ಅಂಜಿನಪ್ಪ, ವೀರೇಶ್, ಅಣ್ಣಪ್ಪನಾಯ್ಕ್, ಜಿಲ್ಲಾ ತಾಂತ್ರಿಕ ಸಿಬ್ಬಂದಿ ರಘು, ಸತೀಶ್ ಅವರು ಆರೋಪಿಗಳನ್ನು ಪತ್ತೆಹಚ್ಚಲು ಶ್ರಮಿಸಿದ್ದಾರೆ ಎಂದು ಪಿಎಸ್‌ಐ ದೇವರಾಜ್ ಹೇಳಿದರು.

ಅಂಗಡಿ, ಹೋಟೆಲ್, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ನಿಯಮವಿದೆ. ಇದನ್ನು ಠಾಣಾ ವ್ಯಾಪ್ತಿಯ ಅಂಗಡಿ ಮಾಲೀಕರು ಪಾಲಿಸಬೇಕು. ಇದರಿಂದ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಸಹಕಾರಿಯಾಗುತ್ತದೆ.

| ದೇವರಾಜ್, ಪಿಎಸ್‌ಐ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version