ಮುಖ್ಯ ಸುದ್ದಿ
ಕವಾಡಿಗರಹಟ್ಟಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಪರಿಶೀಲನೆ
ಚಿತ್ರದುರ್ಗ ನ್ಯೂಸ್.ಕಾಂ
ಚಿತ್ರದುರ್ಗ: ಕವಾಡಿಗರಹಟ್ಟಿಯ ಮೂಲಸೌಕರ್ಯ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆಯಿಂದ 3 ಕೋಟಿ ರೂ. ಅನುದಾನ ಬಿಡುಗಡೆಗೆ ಜಿಲ್ಲಾಡಳಿತ ಪ್ರಸಾವನೆ ಸಲ್ಲಿಸಿದೆ. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 1.3 ಕೋಟಿ ಅನುದಾನ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.
ಸೋಮವಾರ ಕಲುಷಿತ ನೀರು ಸೇವಿಸಿ ಸಾವು-ನೋವು ಅನುಭವಿಸಿ ಸಂಕಷ್ಟಕ್ಕೆ ಸಿಲುಕಿರುವ ಕವಾಡಿಗರಹಟ್ಟಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಪ್ರಯೋಗಾಲಯದ ವರದಿ ಪ್ರಕಾರ ಕಲುಷಿತ ನೀರು ಸೇವನೆ ಕಾರಣಕ್ಕೆ ಅಮೂಲ್ಯವಾದ 7 ಜೀವಗಳನ್ನು ಕಳೆದುಕೊಂಡಿದ್ದೇವೆ. ಶುಚಿತ್ವ, ಕಲುಷಿತ ನೀರಿನ ಬಳಕೆ, ಸ್ಥಳೀಯ ಸಂಸ್ಥೆಗಳ ವಿಫಲತೆ ಇಲ್ಲಿ ಎದ್ದು ಕಾಣುತ್ತಿದೆ. ಘಟನೆ ಸಂಭವಿಸಿದ ತಕ್ಷಣ ಸಮಾಜ ಕಲ್ಯಾಣ ಆಯುಕ್ತರಿಗೆ ಸ್ಥಳಕ್ಕೆ ತೆರಳಿ ಅಗತ್ಯ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು,. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮೇಲ್ನೋಟಕ್ಕೆ ಶುಚಿತ್ವ ಹಾಗೂ ಶುದ್ದ ನೀರು ಪೂರೈಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿರುವುದು ಎದ್ದು ಕಾಣಿಸುತ್ತಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಕಾಲರಾದಿಂದ ಮೃತಪಟ್ಟ ಕುರಿತು ತಿಳಿದು ಬಂದಿದೆ. ಕುಡಿಯುವ ನೀರಿನಪೈಪ್ ಹಾಗೂ ಕಲುಷಿತ ನೀರಿನ ಪೈಪ್ ಹೊಡೆದು ನೀರು ಸೇರಿ ನೀರು ಕಲುಷಿತಗೊಂಡಿರುವ ಸಾಧ್ಯತೆ ಇದೆ. ಘಟನೆಯನಂತರ ಎಚ್ಚೆತ್ತು ಚರಂಡಿ ಹಾಗೂ ಪೈಪ್ ಲೈನ್‍ಗಳ ದುರಸ್ತಿ ಮಾಡಲಾಗಿದೆ ಎಂದರು.
ಕವಾಡಿಗರಹಟ್ಟಿಯ ಮೂಲ ಸೌಕರ್ಯ, ಜನರ ಜೀವನೋಪಾಯ, ವಸತಿ ಸೇರಿದಂತೆ ಪ್ರಮುಖ 9 ಬೇಡಿಕೆಗಳನ್ನು ಜನರು ಸಲ್ಲಿಸಿದ್ದಾರೆ. ಕಂದಾಯ ಇಲಾಖೆ ಜಾಗದಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿರುವ ಜನರಿಗೆ ಆ ಜಾಗದ ಹಕ್ಕುಪತ್ರ ನೀಡಬೇಕು. ಇದರಿಂದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಮನೆ ತೆರವುಗೊಂಡರೆ ಪರಿಹಾರ ಲಭಿಸಲಿದೆ. ಹಾಗಾಗಿ ಅಕ್ರಮ ಸಕ್ರಮ ಯೋಜನೆಯಡಿ ಮನೆ ನಿರ್ಮಿಸಿಕೊಂಡವರಿಗೆ ಜಾಗದ ಹಕ್ಕು ನೀಡುವಂತೆ ಕೋರಿದ್ದಾರೆ. ಈ ಕುರಿತು ನಗರಸಭೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಪರಿಶೀಲಿಸುವಂತೆ ತಿಳಿಸಿದ್ದೇನೆ ಎಂದು ತಿಳಿಸಿದರು.
ಜನರ ಬೇಡಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ವಸತಿ ರಹಿತರಿಗೆ ಸೂಕ್ತ ವಸತಿ ಸೌಲಭ್ಯ ನೀಡಲು ಜಾಗ ಗುರುತಿಸಲಾಗುತ್ತಿದೆ. ಈಗಾಗಲೇ 3 ಎಕರೆ ಜಾಗ ಲಭ್ಯ ಇರುವ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿ 150 ಮನೆಗಳನ್ನು ನಿರ್ಮಿಸಬಹುದಾಗಿದೆ. ಅಕ್ರಮ ಸಕ್ರಮದ ಬೇಡಿಕೆ ಸರ್ಕಾರ ಮಟ್ಟದಲ್ಲಿ ನಿರ್ಧಾರವಾಗಬೇಕಾದ ವಿಷಯವಾಗಿದೆ. ಸರ್ಕಾರ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು. ವಿಳಂಬವಾಗದಂತೆ ಶೀಘ್ರವಾಗಿ ಇಲ್ಲಿನ ಜನರ ಸಮಸ್ಯೆ ಪರಿಹರಿಸಲಾಗುವುದು ಎಂದು ಸಚಿವರು ಉತ್ತರಿಸಿದರು.
ಶಾಸಕರಾದ ಕೆ.ಸಿ.ವೀರೇಂದ್ರ(ಪಪ್ಪಿ), ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ತಹಶೀಲ್ದಾರ್ ಡಾ.ನಾಗವೇಣಿ, ಡಿಎಚ್‍ಒ ಡಾ.ಆರ್.ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ನಗರಸಭೆ ಪೌರಾಯುಕ್ತೆ ರೇಣುಕಾ ಮತ್ತಿತರರಿದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)