ಅಡಕೆ ಧಾರಣೆ
ಅಡಿಕೆ ಬೆಳೆಗೆ ಹನಿ ನೀರಾವರಿ, ನರೇಗಾ ಸೌಲಭ್ಯಕ್ಕೆ ಸಚಿವರ ಒಪ್ಪಿಗೆ | ಸರ್ಕಾರದ ಆದೇಶ ಬಾಕಿ | ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಮಾಹಿತಿ
CHITRADURGA NEWS | 16 JANUARY 2024
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಹನಿ ನೀರಾವರಿ ಸಬ್ಸೀಡಿ ಹಾಗೂ ನರೇಗಾ ಯೋಜನೆಯಡಿ ಸಹಾಯಧನ ಕಲ್ಪಿಸಲು ತೋಟಗಾರಿಕೆ ಇಲಾಖೆ ಸಚಿವರು ಒಪ್ಪಿಗೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ 2023 ನವೆಂಬರ್ 29 ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದರು.
ಸಚಿವರು, ಸರ್ಕಾರದ ಮಟ್ಟದಲ್ಲಿ ಆದೇಶ ಮಾಡಿಸಲು ಅಗತ್ಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಇದನ್ನು ಸಂಪುಟದಲ್ಲಿ ಚರ್ಚಿಸಿ ಅನಮೋದಿಸಿ, ಸೌಲಭ್ಯ ಕಲ್ಪಿಸುವ ಆದೇಶ ಹೊರಬರುವ ಭರವಸೆ ಇದೆ ಎಂದು ಸಭೆಗೆ ಸವಿತಾ ಅವರು ಮಾಹಿತಿ ನೀಡಿದರು.
ಈಗಾಗಲೇ ಮಲೆನಾಡು, ಕರಾವಳಿ ಹಾಗೆಯೇ ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ಸೌಲಭ್ಯ ಇದೆ. ಆದರೆ, ಚಿತ್ರದುರ್ಗ ಜಿಲ್ಲೆಗೆ ಈ ಸೌಲಭ್ಯ ಸಿಗುತ್ತಿಲ್ಲ ಎನ್ನುವ ಅಸಮಧಾನ ಹಲವು ದಿನಗಳಿಂದ ವ್ಯಕ್ತವಾಗುತ್ತಿತ್ತು.
ಇದನ್ನೂ ಓದಿ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ
ಸಾಂಪ್ರದಾಯಿಕ ಅಲ್ಲದ ಪ್ರದೇಶಗಳಲ್ಲಿ ಅಡಿಕೆ ಬೆಳೆಯುವ ರೈತರಿಗೆ ನೀರಿನ ಮಿತಿ ಬಳಕೆ ದೃಷ್ಟಿಯಿಂದ ಹನಿ ನೀರಾವರಿ ಸಬ್ಸೀಡಿ ಹಾಗೂ ಅಡಿಕೆ ಸಸಿಗಳನ್ನು ನಾಟಿ ಮಾಡಲು ನರೇಗಾ ಯೋಜನೆ ಅಡಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲೆಯ ರೈತರು ಒತ್ತಾಯ ಮಾಡುತ್ತಿದ್ದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಕರ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಯ, ಜಿಲ್ಲಾಧಿಕಾರಿ ದಿವ್ಯಪ್ರಭು ಇದ್ದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪರಿಶ್ರಮ:
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ 2023 ಜೂನ್ 23 ರಂದು ನಡೆದಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಡಿಕೆಗೆ ಪ್ರೋತ್ಸಾಹಧನ ಮಂಜೂರಾತಿಗೆ ಒತ್ತಾಯ ಮಾಡಿದ್ದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರೈತರು ಅಡಿಕೆ ಬೆಳೆಯಲು ಉತ್ಸುಕತೆ ತೋರಿಸುತ್ತಿದ್ದಾರೆ. ಹಾಗಾಗಿ ಹಾಗಾಗಿ ಈವರೆಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ರಘುಮೂರ್ತಿ ನಿರಂತರವಾಗಿ ಒತ್ತಡ ಹಾಕುತ್ತಾ ಬಂದಿದ್ದರು.
ತೋಟಗಾರಿಕೆ ಇಲಾಖೆ ಸಚಿವರು ಜಿಲ್ಲೆಯ ರೈತರಿಗೆ ಹನಿ ನೀರಾವರಿ ಸಬ್ಸೀಡಿ ಹಾಗೂ ನರೇಗಾದಡಿ ಅವಕಾಶ ಕಲ್ಪಿಸಲು ಒಪ್ಪಿಗೆ ನೀಡಿದ ಮಾಹಿತಿಯನ್ನು ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಹೇಳುತ್ತಿದ್ದಂತೆ, ಜಿಲ್ಲಾ ಪಂಚಾಯತಿ ಸಿಇಒ ಎಸ್.ಜೆ.ಸೋಮಶೇಖರ್ ಶಾಸಕ ರಘುಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದರು.