Connect with us

Mallikarjuna Murugarajendra Swamiji: ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ | ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಿಶೇಷ ಲೇಖನ

Mallikarjuna Murugarajendra Swamiji

ಮುಖ್ಯ ಸುದ್ದಿ

Mallikarjuna Murugarajendra Swamiji: ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ | ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಿಶೇಷ ಲೇಖನ

CHITRADURGA NEWS | 08 AUGUST 2024
ಚಿತ್ರದುರ್ಗ: ಹೊಳಲ್ಕೆರೆ ಪಟ್ಟಣದ ಹೊರವಲಯದಲ್ಲಿರುವ ಒಂಟಿಕಂಬದ ಮಠದ ಆವರಣ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರ 30ನೇ ವರ್ಷದ ಸ್ಮರಣೋತ್ಸವಕ್ಕೆ ಸಾಕ್ಷಿಯಾಗಿದೆ.

1994ರಲ್ಲಿ ಚಿತ್ರದುರ್ಗದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಇಲ್ಲಿಗೆ ಬಂದು ಐಕ್ಯವಾದರು. ಅಲ್ಲಿಯವರೆಗೆ ಎಲೆಮರೆಯ ಕಾಯಿಯಂತಿದ್ದ ಮಠ ಸ್ವಾಮೀಜಿ ಅವರ ಸಮಾಧಿಯ ನಂತರ ಹೆಚ್ಚು ಪ್ರಚಾರ ಪಡೆಯಿತು. ಮಠದ ಆವರಣದಲ್ಲಿ ಸುಂದರ ಐಕ್ಯಮಂಟಪ ನಿರ್ಮಿಸಲಾಗಿದೆ. ರಾಜಸ್ಥಾನಿ ಶಿಲೆಗಳನ್ನು ಬಳಸಿ ವಿಶಿಷ್ಟ ವಿನ್ಯಾಸದಲ್ಲಿ ನಿರ್ಮಿಸಿರುವ ಐಕ್ಯಮಂಟಪವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರ 30ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಬರೆದ ವಿಶೇಷ ಲೇಖನ ಚಿತ್ರದುರ್ಗನ್ಯೂಸ್‌ ಓದುಗರಿಗೆ.

ಮೂರೂವರೆ ಶತಮಾನಕ್ಕೂ ಹೆಚ್ಚು ಪರಂಪರೆಯುಳ್ಳ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಅನೇಕ ದಾರ್ಶನಿಕರು ಆಗಿಹೋಗಿದ್ದಾರೆ. ಚಿತ್ರದುರ್ಗ ಕೇಂದ್ರಸ್ಥಾನದಲ್ಲಿ ಪಾಳೆಯಗಾರರ ಆಳ್ವಿಕೆಯಲ್ಲಿ ಸ್ಥಾಪನೆಗೊಂಡ ಮುರುಘಾ ಪರಂಪರೆಯ ಪೀಠ ಅಲ್ಲಮಪ್ರಭುಗಳ ‘ಶೂನ್ಯಪೀಠ’ವೆಂಬ ಘನತೆಯನ್ನು ಪಡೆದುಕೊಂಡಿದೆ.

ಇದನ್ನು ಓದಿ: ಸಿರಿಗೆರೆ ತರಳಬಾಳು ಮಠಕ್ಕೆ ಬೈಲಾ ಇಲ್ಲ | ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ರಾಷ್ಟ್ರದಲ್ಲಿ ಶೂನ್ಯಪೀಠ ಪರಂಪರೆಯನ್ನು ಹೊಂದಿರುವ ಏಕೈಕ ಪೀಠವೆಂದರೆ ಅದು ಮುರುಘಾ ಪರಂಪರೆಯ ಚಿತ್ರದುರ್ಗದ ಚಿನ್ಮೂಲಾದ್ರಿ ಬೃಹನ್ಮಠ ಮಾತ್ರವಾಗಿದೆ. ಈ ಪೀಠದ ಘನತೆಯನ್ನು ಎತ್ತಿಹಿಡಿದ ಯತಿವರ್ಯರಲ್ಲಿ ಶ್ರೀ ಮ.ನಿ.ಪ್ರ. ಜಗದ್ಗುರು ಶ್ರೀಶ್ರೀಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಒಬ್ಬರು. ಅವರು ಕಾಲವಾಗಿ ಇಂದಿಗೆ (08–08–2024) ಮೂವತ್ತು ವರ್ಷಗಳು.

ಶ್ರೀಗಳು ಲಿಂಗೈಕ್ಯರಾಗಿ ಮೂರು ದಶಕಗಳು ಕಳೆದರೂ ಇಂದಿಗೂ ಅವರ ಅಪಾರ ಭಕ್ತವೃಂದ ನಿತ್ಯ ಸ್ಮರಣೆಯನ್ನು ಬಿಟ್ಟಿಲ್ಲ. ಅದಕ್ಕೆ ಶ್ರೀಗಳು ಹಾಕಿಕೊಟ್ಟ ತತ್ವಾದರ್ಶಗಳು ಮತ್ತು ಭಕ್ತಿ ಪರಂಪರೆ, ಶ್ರೀಗಳು ತಮ್ಮ ವಿದ್ವತ್‌ ಪಾಂಡಿತ್ಯದಿಂದಲೇ ಲಕ್ಷಾಂತರ ಭಕ್ತರ ಪ್ರೀತಿ ಗಳಿಸಿದ್ದರು. ಅವರ ಆಶೀರ್ವಚನ ಆರಂಭವಾಯಿತೆಂದರೆ ಎಷ್ಟೇ ಸಾವಿರ ಸಾವಿರ ಭಕ್ತರಿದ್ದರೂ ಸಭಾಂಗಣ ನಿಶ್ಯಬ್ಧವಾಗುತ್ತಿತ್ತು. ಅವರ ಧ್ವನಿ ಕಂಚಿನ ಕಂಠ, ಸಂಸ್ಕೃತ ಶ್ಲೋಕಗಳಿಂದಲೇ ಆರಂಭವಾದ ಆಶೀರ್ವಚನ ಗಂಟೆಗೂ ಹೆಚ್ಚು ಕಾಲ ನಿರರ್ಗಳವಾಗಿ ಮುಂದುವರೆಯುತ್ತಿತ್ತು.

ಬೃಹನ್ಮಠಕ್ಕೆ ಅಲ್ಲಿಯವರೆಗೆ ಬಂದಂತಹ ಎಲ್ಲಾ ಪೀಠಾಧಿಪತಿಗಳು ಭಾಷಾ ಪಾಂಡಿತ್ಯರು, ಸಂಸ್ಕೃತ ವಿದ್ವಾಂಸರೆ ಆಗಿದ್ದಾರೆ. ಅದೇ ರೀತಿ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಕೂಡ ಕಾಶಿಯಲ್ಲಿ ಸಂಸ್ಕೃತ ಪಾಂಡಿತ್ಯವನ್ನು ಪಡೆದು 1964 ಕ್ಕೆ ಬೃಹನ್ಮಠದ ಪೀಠವನ್ನು ಅಲಂಕರಿಸಿದವರು.

ಇದನ್ನು ಓದಿ: ದಾವಣಗೆರೆ ಸಭೆಯಲ್ಲಿದ್ದ ಸ್ವಾರ್ಥಿಗಳನ್ನು ಮಠದಿಂದ ಬಹಿಷ್ಕರಿಸಿ | ಸಿರಿಗೆರೆ ಮಠದ ಭಕ್ತರ ಒಕ್ಕೊರಲ ಒತ್ತಾಯ

ಶ್ರೀಗಳು ಪೀಠಕ್ಕೆ ಬಂದ ಗಳಿಗೆಯಿಂದಲೇ ಮಠವನ್ನು ಸಮಾಜಮುಖಿಯನ್ನಾಗಿಸಿದರು. ಅಲ್ಲಿಯವರೆಗೂ ಸರ್ಕಾರದಿಂದ ನಡೆಯುತ್ತಿದ್ದ ಒಂದೆರಡು ಶಾಲಾ ಕಾಲೇಜುಗಳನ್ನು ಬಿಟ್ಟರೆ, ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ತಲುಪಿರಲಿಲ್ಲ. ಶ್ರೀಗಳು ಪೀಠಕ್ಕೆ ಬಂದ ಎರಡೇ ವರ್ಷದಲ್ಲಿ ಅಂದರೆ, 1966ರಲ್ಲಿ ಎಸ್‌ಜೆಎಂ ವಿದ್ಯಾಪೀಠವನ್ನು ಸ್ಥಾಪಿಸಿ ಬರದ ನಾಡಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಿದರು. ಪ್ರಾಥಮಿಕ ಶಾಲೆಗಳಿಂದ ಆರಂಭವಾದ ಎಸ್‌ಜೆಎಂ ವಿದ್ಯಾಪೀಠ ಶ್ರೀಗಳ ಕನಸಿನ ಎಂಜಿನಿಯರಿಂಗ್‌, ದಂತ ಮಹಾವಿದ್ಯಾಲಯದವರೆಗೂ ಬೆಳೆಯಿತು. ಈ ಮೂಲಕವಾಗಿ ಮಧ್ಯ ಕರ್ನಾಟಕದ ಜನತೆಗೆ ವಿದ್ಯಾದಾಸೋಹವನ್ನು ನೀಡಿದ ಕೀರ್ತಿ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀಗಳಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ಚಿತ್ರದುರ್ಗ ಬೃಹನ್ಮಠ ವೀರಶೈವರಿಗೆ ಮಾತ್ರ ಪ್ರವೇಶ ಎಂಬ ಭಕ್ತರ ಅಭಿಪ್ರಾಯವನ್ನು ಅನುಮೋದಿಸದೇ, ನಿಷ್ಠೆ ಮತ್ತು ಸತ್ಯ ಶುದ್ಧ ಕಾಯಕದ ಎಲ್ಲರಿಗೂ ಶ್ರೀಮಠದ ಬಾಗಿಲು ತೆರೆದಿರುತ್ತದೆ ಎಂದು ಸಾರಿದವರು.

ಇದನ್ನು ಓದಿ: ವಿವಿ ಸಾಗರಕ್ಕೆ ಹರಿದು ಬಂತು 2195 ಕ್ಯೂಸೆಕ್ ನೀರು

ಚಿತ್ರದುರ್ಗದ ಕೆಳಗೋಟೆಯ ಡಾ.ಬಿ.ಆರ್‌.ಅಂಬೇಡ್ಕರ್‌ ನಗರದಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಜನಾಂಗದವರೇ ವಾಸಿಸುತ್ತಿದ್ದಾರೆ. ನಾನಾಗ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ಕಾಲೋನಿಯಲ್ಲಿ ಚಿಕ್ಕದಾಗಿ ದುರುಗಮ್ಮನ ದೇವಸ್ಥಾನವನ್ನು ನಿರ್ಮಿಸಲಾಗಿತ್ತು. ಅದರ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಿದರೆ ಬರುತ್ತಾರೋ ಇಲ್ಲವೋ ಎಂಬ ಆತಂಕ ಕಾಲೋನಿಯ ಮುಖಂಡರುಗಳಿಗಿತ್ತು. ಈ ವಿಷಯ ಸ್ಥಳೀಯ ಮಠದ ವ್ಯಕ್ತಿಗಳ ಮೂಲಕ ಶ್ರೀಗಳ ಕಿವಿ ಮುಟ್ಟುತ್ತಿದ್ದಂತೆ ‘ಓಹೋ… ನಾವು ಬರುವುದಿಲ್ಲವೆಂದು ತಿಳಿದಿದ್ದಾರೇನು?’ ಎಂದು ಕಾಲೋನಿಗೆ ಬರಲು ಒಪ್ಪಿಗೆ ಸೂಚಿಸಿದ್ದರು.

ಹೊಳಲ್ಕೆರೆಯ ಒಂಟಿಕಂಬ ಮಠದ ಲೀಲಾ ವಿಶ್ರಾಂತಿ ಮಂದಿರ.

ಸಮಯಕ್ಕೆ ಸರಿಯಾಗಿ ಆಗಮಿಸಿದ ಶ್ರೀಗಳು ‘ಪರಿಶಿಷ್ಟರು ಬದಲಾಗಲು ಶಿಕ್ಷಣವೊಂದೇ ದಾರಿ’ ಎಂದು ಕರೆ ಕೊಟ್ಟಿದ್ದರು. ಕಾಲೋನಿಗೆ ಶ್ರೀಗಳು ಬರುತ್ತಿದ್ದಂತೆ ಇಡಿ ಮಾದಿಗ ಸಮುದಾಯ ಪುನೀತ ಭಾವದಲ್ಲಿತ್ತು. ಶ್ರೀಗಳೊಂದಿಗೆ ಆಗಮಿಸಿದ್ದ ಅಂದಿನ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಕೂಡ ಪರಿಶಿಷ್ಟ ಜಾತಿ ವರ್ಗದವರೂ ಕೂಡ ಶ್ರೀಮಠದಲ್ಲಿ ಹೆಚ್ಚು ಪ್ರವೇಶಿಸಲು ಕಾರಣೀಭೂತರು ಎಂಬುದನ್ನು ನೆನಪಿಸಿಕೊಳ್ಳುತ್ತೇನೆ. ಇದು ಶ್ರೀಗಳ ಜಾತ್ಯಾತೀತ ನಿಲುವಿಗೆ ಒಂದು ಉದಾಹರಣೆಯಷ್ಟೆ.

ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಅಪಾರ ಪಾಂಡಿತ್ಯ ಪಡೆದ ವಿದ್ವಾಂಸರಾಗಿದ್ದರು. ಒಮ್ಮೆ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿಯವರು ಶ್ರೀಮಠಕ್ಕೆ ಭೇಟಿ ಕೊಟ್ಟಾಗ ನಡೆದ ಘಟನೆಯನ್ನು ಕೆಲವರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಡಾ.ಚಿದಾನಂದ ಮೂರ್ತಿಯವರು ‘ಬುದ್ದಿ ಚಿತ್ರದುರ್ಗ ಬೃಹನ್ಮಠ, ಅಲ್ಲಮಪ್ರಭುಗಳ ಸ್ಥಾಪಿತ ಶೂನ್ಯಪೀಠ. ಇಲ್ಲಿ ಬರುವ ಪೀಠಾಧಿಪತಿಗಳೆಲ್ಲ ವಿದ್ವತ್‌ ಜ್ಞಾನಿಗಳೆಂಬ ಪ್ರತೀತಿ ಇದೆ. ನನ್ನದೊಂದು ಜಿಜ್ಞಾಸೆ. ಕಾಯಕದ ಬಗ್ಗೆ ಶರಣರು ಏಳುವ ತಾತ್ಪರ್ಯ ಏನು?’ ಎಂದು ಪ್ರಶ್ನಿಸುತ್ತಾರೆ. ಹಣೆ ಮುಟ್ಟಿ ಬೆರಳು ಸವರುತ್ತಲೇ ಶ್ರೀಗಳು ಉತ್ತರಿಸಿ. ಸಂಶಯ ನಿವಾರಿಸುತ್ತಾರೆ. ಡಾ.ಎಂ.ಚಿದಾನಂದ ಮೂರ್ತಿಯವರು ತಕ್ಷಣವೇ ದೀರ್ಘದಂಡ ನಮಸ್ಕಾರ ಮಾಡುತ್ತಾರೆ. ಹೀಗೆ ಶ್ರೀಗಳ ವಿದ್ವತ್ತಿಗೆ ತಲೆಬಾಗದವರೇ ಇರಲಿಲ್ಲ.

1992ರಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ವೀರಶೈವ ಮಹಾಧಿವೇಶನ ಏರ್ಪಾಡಾಗಿತ್ತು. ಗುರು– ವಿರಕ್ತರನ್ನು ಸೇರಿಸಲೇಬೇಕೆಂಬ ಹಂಬಲ ಸಂಘಟಕರಿಗಿತ್ತು. ಪಂಚಪೀಠದ ಐವರು ಶ್ರೀಗಳು ತಮ್ಮ ಸಮಾನರಾಗಿ ಆಸನಗಳನ್ನು ಮತ್ತೊಬ್ಬ ಯಾವುದೇ ಮಠಾಧೀಶರಿಗೆ ಹಾಕಬಾರದಾಗಿ ಸೂಚಿಸಿದ್ದರು. ಆದರೆ ಚಿತ್ರದುರ್ಗ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ನಮ್ಮೊಂದಿಗೆ ಸಮಾನ ವೇದಿಕೆ ಹಂಚಿಕೊಳ್ಳಲು ಅಭ್ಯಂತರವಿಲ್ಲ ಎಂದಿದ್ದರು. ಒಪ್ಪದೇ ಇರುವವರೂ ಕೂಡ ಇವರನ್ನು ಒಪ್ಪುತ್ತಿದ್ದರು ಎಂದರೆ ಅವರ ಜ್ಞಾನಭಂಡಾರ ಎಷ್ಟಿರಬಹುದು. ಆದರೆ ಪಂಚ ಪೀಠಾಧಿಪತಿಗಳು ಒಪ್ಪಿದರೂ ‘ಬಸವಣ್ಣನವರಿಗೆ ಗೌರವವಿಲ್ಲದಿದ್ದರೆ ಮಠಪೀಠಗಳಿಗೆ ಅರ್ಥವಿಲ್ಲ’ ಎಂದು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಆ ಅಧಿವೇಶನದಲ್ಲಿ ಭಾಗವಹಿಸದೆ ಬಹಿಷ್ಕರಿಸಿದ್ದರು.

ಲಿಂ. ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ

1991–92 ಭಾರತದಾದ್ಯಂತ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಕೊಂಡೊಯ್ಯುವ ರಥಯಾತ್ರೆ ನಡೆಯುತ್ತಿತ್ತು. ಚಿತ್ರದುರ್ಗದಲ್ಲಿ ಇಟ್ಟಿಗೆ ಪೂಜೆ ಕಾರ್ಯದಲ್ಲಿ ಭಾಗವಹಿಸಿದ್ದನ್ನು ಕೆಲವು ಭಕ್ತರು ಪ್ರಶ್ನಿಸಿದ್ದರು. ಶ್ರೀ ಮಲ್ಲಿಕಾರ್ಜುನ ಶ್ರೀಗಳು ಕೋಪದಿಂದಲೇ ‘ಶಿವ ಶಿವ ರಾಮಮಂದಿರವನ್ನು ಅಯೋಧ್ಯೆಯಲ್ಲಿ ಅಲ್ಲದೆ ಪಾಕಿಸ್ತಾನದಲ್ಲಿ ಕಟ್ಟಲಾಗುತ್ತದೆಯೇ?’ ಎಂದು ಉತ್ತರಿಸುತ್ತಿದ್ದಂತೆ. ಅವರ ಸಂಕಲ್ಪವೂ ಮಂದಿರ ನಿರ್ಮಾಣದ್ದಾಗಿತ್ತು. ಶ್ರೀಗಳು ಲಿಂಗೈಕ್ಯರಾಗಿ ಮೂವತ್ತು ವರ್ಷಗಳ ಈ ಸಂದರ್ಭದಲ್ಲಿ ಮಂದಿರವೂ ನಿರ್ಮಾಣವಾಗಿದೆ.

1994ರ ಆಗಸ್ಟ್ ತಿಂಗಳ ಆರಂಭ ಹೊಳಲ್ಕೆರೆಯ ಭಕ್ತರೊಬ್ಬರ ಗೃಹಪ್ರವೇಶ ಮುಗಿಸಿ, ಭಕ್ತರೊಂದಿಗೆ ತೆರಳಿ ಒಂಟಿಕಂಭದ ಮಠದ ಬಳಿ ಸ್ವಚ್ಛತೆಗೆ ಸೂಚಿಸಿದರು. ಇದೇ ಸ್ಥಳದಲ್ಲಿ ನಮ್ಮ ಲೀಲಾವಿಶ್ರಾಂತಿ ಮಂದಿರ ಆಗಬೇಕೆಂದು ಬಯಸಿ, ಅದಕ್ಕೆ ಗುದ್ದಲಿ ಪೂಜೆ ನೆರವೇರಿಸಲು ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ, ಹಂಚಿಸಿದ್ದರು.

ಶ್ರೀಗಳ ವಾಣಿ ಹೇಗಿತ್ತೆಂದರೆ, ಅದೇ ದಿನಾಂಕಕ್ಕೆ ಸರಿಯಾಗಿ ಅಂದರೆ 8–8–1994 ರಂದು ಅದೇ ಸ್ಥಳದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಐಕ್ಯರಾಗುತ್ತಾರೆ. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ಅವರು ಬಯಸಿದಂತೆ ಒಂಟಿಕಂಭದ ಮಠದಲ್ಲಿ ನೆರವೇರುತ್ತದೆ.

ಸಕಲ ಸರ್ಕಾರಿ ಗೌರವವನ್ನು ಪಡೆದ ಖಾವಿಧಾರಿಗಳಲ್ಲಿ ಶ್ರೀ ಮಲ್ಲಿಕಾರ್ಜುನ ಶ್ರೀಗಳು ಪ್ರಥಮರಾಗಿದ್ದಾರೆ. ಪೊಲೀಸ್ ಇಲಾಖೆಯ ವರದಿಯ ಪ್ರಕಾರ ಅವರ ಅಂತ್ಯಕ್ರಿಯೆಗೆ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಭಕ್ತಾಭಿಮಾನಿಗಳು ಸೇರಿದ್ದರು ಎನ್ನಲಾಗಿದೆ. ಹೀಗೆ ತಮ್ಮ ವಿದ್ವತ್‌ನಿಂದಲೇ ಅಪಾರ ಭಕ್ತಗಣ ಸಂಪಾದಿಸಿದ್ದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಯಾವತ್ತಿಗೂ ನಮ್ಮೆಲ್ಲರಿಗೂ ಸ್ಮರಣೀಯರಾಗಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version