ಚಳ್ಳಕೆರೆ
ಲೋಕಸಭೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ | ಬೆಳೆ ವಿಮೆ, ಬೆಳೆ ಪರಿಹಾರಕ್ಕೆ ಆಗ್ರಹ
CHITRADURGA NEWS | 17 JANUARY 2024
ಚಿತ್ರದುರ್ಗ (CHITRADURGA): ತಿಂಗಳ ಅಂತ್ಯದೊಳಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ರೈತರ ಖಾತೆಗೆ ಪಾವತಿಸಬೇಕು. ಇಲ್ಲವಾದರೆ ಲೋಕಸಭೆ ಚುನಾವಣೆ ಬಹಿಷ್ಕರಿಸಲಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ರೈತ ಸಂಘ ರವಾನಿಸಿದೆ.
ಚಳ್ಳಕೆರೆ ನಗರದ ಕೃಷಿ ಮತ್ತು ಕಂದಾಯ ಇಲಾಖೆ ಆಯೋಜಿಸಿದ್ದ ರೈತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ, ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ‘ಸರ್ಕಾರ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಹಾಗಾಗಿ, ಡಿಸೆಂಬರ್ ತಿಂಗಳೊಳಗೆ ಬೆಳೆ ವಿಮೆ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ ವಿಮಾ ಕಂಪನಿ ಬಿಡುಗಡೆ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯಮಟ್ಟದ ಸರ್ವ ಧರ್ಮೀಯ ವಧು ವರರ ಸಮಾವೇಶ | 21ರಂದು ಬೆಂಗಳೂರಿನಲ್ಲಿ ಆಯೋಜನೆ
‘ಬೆಳೆ ವಿಫಲದ ಪರಿಣಾಮ ತಾಲ್ಲೂಕಿನ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಧಾರುಣ ಸ್ಥಿತಿ ಅನುಭವಿಸುತ್ತಿದ್ದಾರೆ. ಜನವರಿ ತಿಂಗಳ ಅಂತ್ಯದೊಳಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ರೈತರ ಖಾತೆಗೆ ಪಾವತಿಸಬೇಕು. ಇಲ್ಲದೇ ಹೋದರೆ ರೈತ ಸಂಘಟನೆಗಳಿಂದ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಸಿದರು.
‘ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆ ಇಳುವರಿ ಕುಂಠಿತವಾಗಿದೆ. ಅವಧಿಗೆ ಮುಂಚಿತವಾಗಿ ಬೆಳೆ ಕಟಾವು ಮಾಡಿದ್ದಾರೆ. ಇದರಿಂದ ಮಧ್ಯಂತರ ಬೆಳೆ ವಿಮೆ ನೀಡಲು ಸಾಧ್ಯವಿಲ್ಲ. ಬೆಳೆ ಇಳುವರಿ ಸಾಂಖ್ಯಿಕ ವರದಿ ಮತ್ತು ಬೆಳೆ ಸಮೀಕ್ಷೆ ವರದಿ ಆಧರಿಸಿ ವಿಮೆ ನೀಡಲಾಗುವುದು’ ಎಂದು ವಿಮಾ ಕಂಪನಿ ತಾಲ್ಲೂಕು ಮಟ್ಟದ ಅಧಿಕಾರಿ ಅಮಿತ್ ತಿಳಿಸಿದರು.
‘ರೈತರ ಪರಿಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ಸಾಂಖ್ಯಿಕ ವರದಿ ನೆಪದಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಆರ್ಥಿಕ ನೆರವು ಒದಗಿಸಲು ಮೀನಮೇಷ ಎಣಿಸುತ್ತಿದ್ದಾರೆ. ವಿಮೆ ಪಾವತಿಸಿದ ರೈತರ ಖಾತೆಗೆ ಇದುವರೆಗೆ ಬಿಡಿಗಾಸೂ ಬಿದ್ದಿಲ್ಲ’ ರೈತ ಸಂಘದ ಹಸಿರು ಸೇನೆ ಹಿರಿಯ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ಹೊರ ಹಾಕಿದರು.
‘ಚಳ್ಳಕೆರೆ ತಾಲ್ಲೂಕಿನ ಎಲ್ಲ ಅರ್ಹ ರೈತರಿಗೆ ಬೆಳೆ ಪರಿಹಾರ ಹಾಗೂ ವಿಮೆ ಪಾವತಿಸಿದ ರೈತರ ವಿಮಾ ಹಣ ತರಿಸಿಕೊಡಲಾಗುವುದು. ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ’ ಎಂದು ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಭರವಸೆ ನೀಡಿದರು.
ಇದನ್ನೂ ಓದಿ: ಕರಡಿಗಳ ಮುದ್ದಾದ ಗುದ್ದಾಟ ನೊಡಿದ್ದೀರಾ | ಇಲ್ಲಿದೆ ನೋಡಿ ಸುದ್ದಿ ಮತ್ತು ವಿಡಿಯೋ
ರೈತ ಸಂಘದ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಂಠಮೂರ್ತಿ, ಮುಖಂಡ ನಾಗೇಂದ್ರಪ್ಪ, ತಿಪ್ಪೇಸ್ವಾಮಿ, ಮಂಜುನಾಥ್, ಗಂಗಾಧರಪ್ಪ, ರಾಜಣ್ಣ, ಶಿವಮೂರ್ತಿ, ವೆಂಕಟೇಶ್, ಶಿರಸ್ತೇದಾರ್ ಸದಾಶಿವಯ್ಯ, ತಾಂತ್ರಿಕ ಅಧಿಕಾರಿ ಮೇಘನಾ, ವಿಮಾ ಕಂಪನಿ ಜಿಲ್ಲಾ ಪ್ರತಿನಿಧಿ ತೇಜಸ್ವಿನಿ, ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಇದ್ದರು.