ಮುಖ್ಯ ಸುದ್ದಿ
ಎಸ್.ನಿಜಲಿಂಗಪ್ಪ ಮನೆ ಖರೀದಿ ಮಾಡಿದ ಸರ್ಕಾರ | ದಶಕಗಳ ಗೊಂದಲಕ್ಕೆ ಇತಿಶ್ರೀ | ತಹಶೀಲ್ದಾರ್ ಹೆಸರಿಗೆ ನೊಂದಣಿ
CHITRADURGA NEWS | 12 DECEMBER 2024
ಚಿತ್ರದುರ್ಗ: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಮನೆ ಖರೀದಿ ವಿಚಾರ ಕೊನೆಗೂ ಬಗೆಹರಿದಿದೆ.
ಎಸ್ಸೆನ್ ಪ್ರೀತಿಯ ಮನೆಯನ್ನು ಸರ್ಕಾರ ಖರೀಧಿಸಿ, ಸ್ಮಾರಕ ಮಾಡಬೇಕೆಂಬ ಅವರ ಅಭಿಮಾನಿಗಳ ಬೇಡಿಕೆ ಕೊನೆಗೂ ಈಡೇರಿದೆ.
ಇಂದು (ಡಿಸೆಂಬರ್ 12) ಮಧ್ಯಾಹ್ನ 1 ಗಂಟೆಗೆ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಮನೆಯನ್ನು ಸರ್ಕಾರದ ಪರವಾಗಿ ತಹಶೀಲ್ದಾರ್ ಹೆಸರಿಗೆ ನೊಂದಣಿ ಮಾಡಿಸಿದ್ದಾರೆ. ತಹಶೀಲ್ದಾರ್ ಡಾ.ನಾಗವೇಣಿ ಮನೆಯ ಕಾಗದ ಪತ್ರಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀಧಿಗೆ ಮುಂದಾದ ಕಾಂಗ್ರೆಸ್ | ಮನೆ ವೀಕ್ಷಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಈ ಹಿಂದೆ ಸರ್ಕಾರ ನಿಜಲಿಂಗಪ್ಪ ಅವರ ಮನೆ ಖರೀದಿಗೆ ಅನುದಾನವನ್ನೂ ನೀಡಿತ್ತು. ನನೆಗುದಿಗೆ ಬಿದ್ದ ಪರಿಣಾಮ ಹಣ ಹಾಗೇಯೇ ಉಳಿದಿತ್ತು.
ಈಗ ಸರ್ಕಾರ 4.18 ಕೋಟಿ ರೂ.ಗಳಿಗೆ ಮನೆಯನ್ನು ಖರೀದಿ ಮಾಡಿದೆ ಎಂದು ಎಸ್ಸೆನ್ಸ್ ಸ್ಮಾರಕ ಟ್ರಸ್ಟ್ ಸಂಯೋಜಕ ಎಸ್.ಷಣ್ಮುಖಪ್ಪ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದಿ.ದ ನಿಜಲಿಂಗಪ್ಪ ಅವರ ಮನೆ ಖರೀದಿ ಮಾಡಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜಪೀರ್ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ:ಎಸ್.ನಿಜಲಿಂಗಪ್ಪ ಮನೆ ಮಾರಾಟ ಮಾಡ್ತಾರಂತೆ | ಬೆಲೆ ಹತ್ತು ಕೋಟಿಯಂತೆ..
ಆನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಂದು ಮನೆಯನ್ನು ವೀಕ್ಷಣೆ ಮಾಡಿ, ಕಿರಣ್ ಶಂಕರ್ ಅವರ ಜೊತೆ ಮಾತುಕತೆ ನಡೆಸಿ ಹೋಗಿದ್ದರು.
ಆದರೆ, ಈ ಮಾತುಕತೆ ಮುಂದುವರೆದಂತೆ ಕಾಣಲಿಲ್ಲ. ಕೆಲ ದಿನಗಳ ಹಿಂದಷ್ಟೇ ನಿಜಲಿಂಗಪ್ಪ ಪುತ್ರ ಕಿರಣ್ ಶಂಕರ್ ಮನೆ ಮಾರಾಟಕ್ಕಿದೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು.
ಈ ವೇಳೆ ಎಚ್ಚೆತ್ತ ಸರ್ಕಾರ ಮನೆ ಖರೀದಿಗೆ ಇದ್ದ ಎಲ್ಲ ತಾಂತ್ರಿಕ ಹಾಗು ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿಕೊಂಡು ಅಂತಿಮವಾಗಿ ಇಂದು ಖರೀದಿ ಮಾಡಿದೆ.
ಮುಂದೆ ಈ ಮನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರವಾಗಿ ಸ್ಮಾರಕವಾಗಿ ಅಭಿವೃದ್ಧಿಯಾಗಲಿದೆ.