ಮುಖ್ಯ ಸುದ್ದಿ
ಕರ್ನಾಟಕ ಬಂದ್ | ಚಿತ್ರದುರ್ಗದಲ್ಲಿ ಏನಿರುತ್ತೆ, ಏನಿರಲ್ಲ | ಡಿಸಿ, ಎಸ್ಪಿ ಹೇಳಿದ್ದೇನು
ಚಿತ್ರದುರ್ಗ ನ್ಯೂಸ್.ಕಾಂ :ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸರ್ಕಾರಗಳ ಕ್ರಮ ಖಂಡಿಸಿ ರೈತರು, ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಕರೆಗೆ ಚಿತ್ರದುರ್ಗದಲ್ಲೂ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಬಂದ್ ಬೆಂಬಲಿಸುವ ನಿಟ್ಟಿನಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಗುರುವಾರ ಸಭೆ ನಡೆಸಿದ್ದು, ಬಂದ್‍ಗೆ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ರೈತರ ಪರವಾದ ಹೋರಾಟವನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಹಸುಗೂಸಿನ ಜತೆಗೆ ದಂಪತಿಗೆ ಬಹಿಷ್ಕಾರ, ಎನ್.ದೇವರಹಳ್ಳಿಯಲ್ಲಿ ನಡೆದಿದೆ ಸಮಾಜ ತಲೆತಗ್ಗಿಸುವ ಘಟನೆ
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಗುರುವಾರವೇ ನಗರದ ಹಲವು ಕಡೆಗಳಲ್ಲಿ ಸಾರ್ವಜನಿಕರು, ಆಟೋ ಚಾಲಕರು, ಅಂಗಡಿ ಮುಂಗಟ್ಟುಗಳ ವ್ಯಾಪರಸ್ಥರಿಗೆ ಬಂದ್ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಬಂದ್ ಬೆಂಬಲಿಸಿ ನಗರದ ಪ್ರವಾಸಿ ಮಂದಿರದಲ್ಲಿ ಸರ್ವೋದಯ ಕರ್ನಾಟಕ ಪಕ್ಷ, ಭಾರತ ಕಮ್ಯುನಿಸ್ಟ್ ಪಕ್ಷ, ಎಪಿಎಂಸಿ ಹಮಾಲರ ಸಂಘ, ಕರುನಾಡ ವಿಜಯಸೇನೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ), ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ನವ ಕರ್ನಾಟಕ ರೈತ ಸಂಘ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ರೈತ ಸಂಘಟನೆಗಳು ಸಭೆ ನಡೆಸಿವೆ.
ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಖಾಸಗಿ ಬಸ್ಸುಗಳು ರಸ್ತೆಗಿಳಿಯುವದಿಲ್ಲ ಎಂದು ಖಾಸಗಿ ಬಸ್ ಮಾಲಿಕರ ಸಂಘದ ಕಾರ್ಯದರ್ಶಿ ಜಿ.ಬಿ.ಶೇಖರ್ ಮಾಹಿತಿ ನೀಡಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿರುವ ಹೋಟೆಲ್‍ಗಳು ಬೆಳಗ್ಗೆ ಬಂದ್ ಆಗಬಹುದು. ಉಳಿದಂತೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲು ಹೋಟೆಲ್ ಮಾಲಿಕರು ನಿರ್ಧರಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜನಜೀವನಕ್ಕೆ ತೊಂದರೆಯಾಗದಂತೆ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಒತ್ತಾಯದಿಂದ ಯಾವುದೇ ವ್ಯಾಪಾರ ನಿಲ್ಲಿಸುವುದು, ವಾಹನಗಳನ್ನು ತಡೆಯುವುದು ಮಾಡಬಾರದು. ಸರ್ಕಾರಿ ಕಚೇರಿಗಳು ಎಂದುನಂತೆ ಕಾರ್ಯನಿರ್ವಹಿಸಲಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.
ಇನ್ನೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ, ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.