ಮುಖ್ಯ ಸುದ್ದಿ
ಜಂಗಮ ಸಮಾಜ ಆಲದ ಮರ ಇದ್ದಂತೆ ; ಕರಿವೃಷಭದೇಶೀಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ
ಚಿತ್ರದುರ್ಗ ನ್ಯೂಸ್.ಕಾಂ
ಭಸ್ಮ, ಮಂತ್ರ, ಪೂಜೆ, ಶಿವನ ಆರಾಧನೆ, ಗುರು ಕಾರುಣ್ಯ ಜಂಗಮ ಮೂಲ ಮಂತ್ರವಾಗಿದೆ. ಪ್ರಸಕ್ತ ದಿನಗಳಲ್ಲಿ ಲಿಂಗ ಪೂಜೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ವಟುಗಳಿಗೆ ದೀಕ್ಷೆ ನೀಡುವುದರ ಮೂಲಕ ಈ ಎಲ್ಲ ಕಾರ್ಯಗಳು ನಡೆಯುವಂತೆ ಮಾಡಬೇಕಿದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶೀಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಪ್ರವಾಸಿ ಮಂದಿರದಲ್ಲಿ ಇಸ್ಪೀಟ್ ಆಡುತ್ತಿದ್ದ 14 ಮಂದಿ ಬಂಧನ
ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಜಿಲ್ಲಾ ಬೇಡ ಜಂಗಮ ಸಮಾಜದಿಂದ ಭಾನುವಾರ ಆಯೋಜಿಸಿದ್ದ ವೀರಶೈವ ಜಂಗಮ ವಟುಗಳಿಗೆ ದೀಕ್ಷೆ ಕಾರ್ಯಕ್ರಮದಲ್ಲಿ ಧರ್ಮೋಪದೇಶ ನೀಡಿದ ಸ್ವಾಮೀಜಿ, ‘ಮಹಿಳೆಯರಿಗೆ ಮಾಂಗಲ್ಯ ಎಷ್ಟು ಮುಖ್ಯವೇ ಅಷ್ಟೇ ಪ್ರಮಾಣದಲ್ಲಿ ಪುರುಷರಿಗೆ ದೇಹದ ಮೇಲೆ ಲಿಂಗ ಪ್ರತಿಷ್ಠಾಪನೆ ಅಗತ್ಯವಾಗಿದೆ. ಜಂಗಮ ಸಮಾಜ ಆಲದ ಮರ ಇದ್ದಂತೆ ಎಲ್ಲರಿಗೂ ಆಶ್ರಯ ನೀಡುತ್ತದೆ ’ ಎಂದರು.
‘ಜನನ ಮತ್ತು ಮರಣದಲ್ಲಿಯೂ ಸಹಾ ಜಂಗಮರ ಅಗತ್ಯವಿದೆ. ಊರಿಗೆ ಓರ್ವ ಜಂಗಮನಿದ್ದರೆ ಊರೇ ಪಾವನವಾಗುತ್ತದೆ. ಎಲ್ಲರಿಗೂ ಉಪದೇಶ ನೀಡುವುದರ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ನೆರವಾಗುತ್ತಾರೆ’ ಎಂದು ಹೇಳಿದರು.
‘ಯುವ ಸಮುದಾಯಕ್ಕೆ ಲಿಂಗ ದೀಕ್ಷೆ ನೀಡುವುದರ ಮೂಲಕ ಮುಂದಿನ ದಿನಮಾನದಲ್ಲಿ ಉತ್ತಮ ಭವಿಷ್ಯ ಕಾಣಬಹುದಾಗಿದೆ. ಬೇಡ ಜಂಗಮ ಸಮಾಜ ಪ್ರತಿ ವರ್ಷ ದೀಕ್ಷಾ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಮಾಜದ ಪ್ರಗತಿಗೆ ಸಹಕಾರಿಯಾಗಿದೆ. ರಾಜ್ಯದ ಎಲ್ಲೇಡೆ ವೇದ ಪಾಠಶಾಲೆಗಳನ್ನು ಪ್ರಾರಂಭಿಸುವ ಮೂಲಕ ಜಂಗಮ ಸಮಾಜವನ್ನು ಸಂಘಟಿಸಬೇಕಿದೆ. ಜತೆಗೆ ಯುವ ಪೀಳಿಗೆಗೆ ಸಂಸ್ಕಾರ ನೀಡಿ ಮುನ್ನಡೆಸಬೇಕಿದೆ’ ಎಂದು ತಿಳಿಸಿದರು.
ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಪ್ರತಿ ದಿನ ಸ್ನಾನ ಮಾಡಿ ಪೂಜೆಯನ್ನು ಮಾಡಿದ ನಂತರ ಪ್ರಸಾದ ಸ್ವೀಕರಿಸುವ ಪದ್ಧತಿ ರೂಢಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಂಸ್ಕಾರ ಹೊಂದಲು ಸಾಧ್ಯ’ ಎಂದರು.
‘ಜಂಗಮರಾದವರು ಬೇರೆಯವರ ಬದುಕಿಗೆ ಸಂಸ್ಕಾರ ನೀಡುವಂತ ಕಾರ್ಯ ಮಾಡಬೇಕಿದೆ. ನಾವು ಮಾಡುವ ಕಾಯಕದಲ್ಲಿ ಆನಂದ ಕಾಣುತ್ತಾ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಿದೆ. ಈ ಮೂಲಕ ನಮ್ಮ ಹೃದಯದಲ್ಲಿ ಸ್ಥಾಪಿಸಿಕೊಳ್ಳಬೇಕು. ಆಗ ಆತ ಅಲ್ಲಿಂದ ಹೊರ ಹೋಗಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
‘ಇಂದಿನ ದಿನಮಾನದಲ್ಲಿ ಭಗವಂತ ನಮ್ಮ ಬೇಡಿಕೆ ಈಡೇರಿಸದಿದ್ದರೂ ಸಹಾ ಪೂಜೆ ಮಾಡುವುದನ್ನು ಮಾತ್ರ ಬಿಟ್ಟಿಲ್ಲ. ಮಾನವನ ಬದುಕು ಧರ್ಮ, ಸಂಸ್ಕಾರದಲ್ಲಿ ಹಾಸು ಹೊಕ್ಕಾಗ ಬೇಕಿದೆ. ನಮ್ಮೆಲ್ಲರ ಬದುಕಿನಲ್ಲಿ ಧರ್ಮ ಹಾಸು ಹೊಕ್ಕಾಗಿದೆ’ ಎಂದರು.
ಮುಂಜಾನೆ 28 ವಟುಗಳಿಗೆ ದೀಕ್ಷೆ ನೀಡಲಾಯಿತು. ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬೇಡ ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜನಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್, ವಿದ್ಯಾವಿಕಾಸ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವಿಜಯ ಕುಮಾರ್, ನಗರಸಭೆ ಸದಸ್ಯ ಸುರೇಶ್, ಶಿವನಗೌಡ, ಕೆ.ಸಿ.ರುದ್ರೇಶ್, ಕೆ.ಎನ್.ವಿಶ್ವನಾಥಯ್ಯ, ಚನ್ನಯ್ಯ, ಶಶಿಧರ್ ಬಾಬು, ಕರಿಬಸಯ್ಯ, ರೇವಣಸಿದ್ದಯ್ಯ, ಬಿಂದುಶ್ರೀ, ಮಂಜುನಾಥ, ಸಿ.ಎಚ್.ಆಶಾ ಇದ್ದರು.