ಮುಖ್ಯ ಸುದ್ದಿ
ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ | ಗೇಲಿ ಮಾಡಿದವರ ಬಾಯಿಂದಲೇ ಪ್ರಶಂಸೆ | ಸಚಿವ ಡಿ. ಸುಧಾಕರ್
CHITRADURGA NEWS | 01 FEBRUARY 2025
ಚಿತ್ರದುರ್ಗ: ನಗರದ ಜಿ.ಪಂ. ಕಚೇರಿ ಆವರಣದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ನೂತನ ಕಚೇರಿಯನ್ನು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಹೆಚ್.ಎಂ.ರೇವಣ್ಣ ಉದ್ಘಾಟಿಸಿದರು.
Also Read: ಆಗಲಕೆರೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಕಳಸಾರೋಹಣ | ಮಠಾಧೀಶರು ಭಾಗೀ
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಡಿ. ಸುಧಾಕರ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಪ್ರಚಾರ ಸಂದರ್ಭದಲ್ಲಿ ವಿರೋಧ ಪಕ್ಷದವರು ಗೇಲಿ ಮಾಡಿದ್ದರು. ಆದರೆ ರಾಜ್ಯದ ಜನತೆ ನಮ್ಮ ಪಕ್ಷವನ್ನು ನಂಬಿ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರು.
ಅಧಿಕಾರಕ್ಕೆ ಬಂದ 3 ತಿಂಗಳ ಒಳಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು. 19 ತಿಂಗಳಿಂದ ನಿರಾಂತಕವಾಗಿ ಯೋಜನೆಗಳು ಮುಂದುವರೆದಿವೆ. ಗೇಲಿ ಮಾಡಿದವರ ಬಾಯಿಂದಲೇ ಪ್ರಶಂಸೆ ಮಾತುಗಳು ಕೇಳಿ ಬರುತ್ತಿವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕವಾಗಿ ರೂ.60,000 ಕೋಟಿ ಖರ್ಚು ಮಾಡುತ್ತಿದೆ. ಪಕ್ಷಭೇದವಿಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಷಿಕವಾಗಿ ರೂ.240 ಕೋಟಿಗೂ ಅಧಿಕ, ಅಂದರೆ ಪ್ರತಿ ತಿಂಗಳಿಗೆ ರೂ.20 ಕೋಟಿಯಷ್ಟು ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ.
Also Read: ಬೆಳ್ಳಂ ಬೆಳಗ್ಗೆ ಬಿಸಿಎಂ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ
ಇದು ಹುಡುಗಾಟದ ವಿಷಯವಲ್ಲ, ಪಂಚಗ್ಯಾರಂಟಿಗಳು ಜನಪ್ರಿಯವಾಗಿವೆ ಇದರೊಂದಿಗೆ ರಾಜ್ಯದ ಇತರೆ ಅಭಿವೃದ್ಧಿಗಳಿಗೂ ಸರ್ಕಾರ ಒತ್ತು ನೀಡಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಹೆಚ್.ಎಂ.ರೇವಣ್ಣ ಮಾತನಾಡಿ, ಪಂಚಗ್ಯಾರಂಟಿ ಯೋಜನೆಗಳನ್ನು ಕೇವಲ ಚುನಾವಣೆ ಪ್ರಚಾರಕ್ಕಾಗಿ ಜಾರಿ ಮಾಡಿಲ್ಲ. ರಾಜ್ಯದ ಜನರ ಅಭಿವೃದ್ಧಿ ದೂರದೃಷ್ಠಿಯನ್ನು ಗಮನದಲ್ಲಿರಿಸಿ ಜಾರಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ. ರಾಜ್ಯ ಸರ್ಕಾರ ಜನಪರ ಯೋಜನೆಗಳ ಜಾರಿಗೆ ಸದಾ ಬದ್ದವಾಗಿರುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮ ದೇಶದ ಬಡವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿತು. ಇವರ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ರಕ್ತಕ್ರಾಂತಿ ಇಲ್ಲದೆಯೇ ಉಳುವವನೇ ಭೂಮಿಯ ಒಡೆಯ ಎನ್ನುವ ಕಾಯ್ದೆ ಜಾರಿ ಮಾಡಿ, ಭೂ ರಹಿತರಿಗೆ ಭೂಮಿ ಹಕ್ಕು ದೊರಕಿಸಿಕೊಟ್ಟರು.
ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ರಾಜ್ಯದ ಪದವಿಧರರಿಗೆ ಸರ್ಕಾರಿ ನೌಕರಿ ದೊರಯುವಂತೆ ಮಾಡಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರು ಜಾರಿ ಮಾಡಿದ ಸಿಇಟಿ ಪದ್ದತಿ, ಬಡವರ ಮಕ್ಕಳಿಗೆ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶ ಲಭಿಸುವಂತೆ ಮಾಡಿತು.
Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ರೈತರ ಜಮೀನಿನಲ್ಲಿರುವ 10 ಹೆಚ್.ಪಿ. ಮೋಟಾರಿನ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಿದರು. ಸಿದ್ಧರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಜಾರಿ ಮಾಡಿದರು.
ಎರಡನೇ ಬಾರಿ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇದರಿಂದ ಅವರನ್ನು ಭಾಗ್ಯಗಳ ರಾಜ ಎಂದು ಕರೆಯಲಾಗುತ್ತಿದೆ. ನಮ್ಮ ಪಕ್ಷದ ಸರ್ಕಾರಗಳು ಜನರ ಜೀವನದಲ್ಲಿ ಮಹತ್ವದ ಬದಲಾವಣೆ ತರುವಂತಹ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಮನೆ ರಹಿತರಿಗೆ ಮನೆ ಸೇರಿದಂತೆ ನೂರಾರು ಯೋಜನೆಗಳನ್ನು ಜಾರಿ ಮಾಡಿವೆ ಎಂದರು.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ 377 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಉಚಿತವಾಗಿ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ರೂ.9,124 ಕೋಟಿ ಖರ್ಚು ಮಾಡಿದೆ. ಗೃಹಲಕ್ಷ್ಮೀ ಯೋಜನೆಯಡಿ 1.2 ಕೋಟಿ ಮಹಿಳೆಯರು ನೊಂದಣಿಯಾಗಿದ್ದು, ಇವರಿಗೆ ಪ್ರತಿ ಮಾಹೆ ರೂ.2000 ಹಣವನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
Also Read: ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನಿರ್ದೇಶಕ ಎಸ್.ಜಿ.ಮಂಜುನಾಥ್ ನಿಧನ
ಇದಕ್ಕಾಗಿ ರೂ.35,608 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಗೃಹಜ್ಯೋತಿ ರಾಜ್ಯದ ಎಲ್ಲ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ರೂ.11,810 ಕೋಟಿ ವ್ಯಯಿಸಲಾಗಿದೆ. ಯುವನಿಧಿ ಯೋಜನೆಯಡಿ 2.14 ಲಕ್ಷ ಫಲಾನುಭವಿಗಳಿಗೆ ರೂ.222 ಕೋಟಿ ಹಣ ನೀಡಲಾಗಿದೆ ಎಂದು ಹೆಚ್.ಎಂ.ರೇವಣ್ಣ ಮಾಹಿತಿ ನೀಡಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್.ಹೆಗಡೆ ಮಾತನಾಡಿ, ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಅಸ್ಸಾಂ, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಿವೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಈ ಯೊಜನೆಗಳ ಜಾರಿಯಿಂದ ರಾಜ್ಯದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬಂದಿದೆ. ಜಿಎಸ್‍ಟಿ ಹಾಗೂ ಜಿಡಿಪಿ ಬೆಳವಣಿಗೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ರಾಜ್ಯದ ಜನತೆ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಪಕ್ಷಭೇದವಿಲ್ಲದೆ ಎಲ್ಲಾ ಜನರಿಗೂ ಯೋಜನೆಯ ಲಾಭ ದೊರೆಯುತ್ತಿವೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 3,78,084 ಫಲಾನುಭವಿಗಳ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಸರಿ ಸುಮಾರು ರೂ.14 ಕೋಟಿ ವ್ಯಯಿಸಲಾಗುತ್ತಿದೆ. ಕಳೆದ 17 ತಿಂಗಳಿನಲ್ಲಿ ರೂ.234 ಕೋಟಿ ಅಧಿಕ ಹಣವನ್ನು ಯೋಜನೆಗಾಗಿ ಸರ್ಕಾರ ಬಿಡುಗಡೆ ಮಾಡಿದೆ.
Also Read: ಫೆ.5 ಮತ್ತು 6 ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಜಿಲ್ಲಾ ಪ್ರವಾಸ
ಗೃಹಲಕ್ಷ್ಮೀ ಯೋಜನೆಯಡಿ 3,96,025 ಫಲಾನುಭವಿಗಳಿಗೆ ಪ್ರತಿ ತಿಂಗಳು ಡಿಬಿಟಿ ಮೂಲಕ ರೂ.2000 ಖಾತೆಗೆ ಜಮೆ ಮಾಡಲಾಗುತ್ತಿದೆ. ಇದರ ಮೊತ್ತ ರೂ.1092 ಕೋಟಿಗೂ ಅಧಿಕವಾಗಿದೆ. ಅನ್ನಭಾಗ್ಯ ಯೋಜನೆಯಡಿ 3,65,890 ಫಲಾನುಭವಿಗಳಿಗೆ 7014 ಮೆಟ್ರಿಕ್ ಟನ್ ಅಕ್ಕಿ ನೀಡಲಾಗಿದೆ. 5 ಕೆ.ಜಿ ಅಕ್ಕಿ ಪರ್ಯಾಯವಾಗಿ ರೂ.170 ರಂತೆ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ ರೂ.20 ಕೋಟಿ ಜಮೆ ಮಾಡಲಾಗಿದೆ.
ಶಕ್ತಿ ಯೋಜನೆಯಡಿ ಚಿತ್ರದುರ್ಗ ವಿಭಾಗದ ಬಸ್‍ಗಳಲ್ಲಿ ಪ್ರತಿನಿತ್ಯ 62,000 ಕ್ಕೂ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕಾಗಿ ರೂ.147.13 ಕೋಟಿ ಹಣವನ್ನು ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಸರ್ಕಾರ ಪಾವತಿಸಿದೆ.
ಜಿಲ್ಲೆಯಲ್ಲಿ 26,086 ಪದವಿ ಹಾಗೂ 291 ಡಿಪ್ಲೋಮೊ ವ್ಯಾಸಾಂಗ ಪೂರ್ಣಗೊಳಿಸಿದ ಯುವಕರು ಯುವನಿಧಿಯಡಿ ನೊಂದಣಿ ಮಾಡಿಕೊಂಡಿದ್ದಾರೆ.
ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿದವರಿಗೆ ರೂ.3000 ಹಾಗೂ ಡಿಪ್ಲೋಮೊ ಮುಗಿಸಿದವರಿಗೆ ರೂ.1,500 ಮಾಸಿಕ ನಿರುದ್ಯೋಗ ಭತ್ಯ ನೀಡಲಾಗುತ್ತಿದೆ. ಇದುವರೆಗೂ ರೂ.7.8 ಕೋಟಿ ಯುವನಿಧಿಯಡಿ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
Also Read: ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ | ಅರ್ಜಿ ಅಹ್ವಾನ
ಕಾರ್ಯಕ್ರಮದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಕೆ.ಡಿ.ಪಿ ಸದಸ್ಯ ಕೆ.ಸಿ.ನಾಗರಾಜ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ಡಿ.ಎನ್.ಮೈಲಾರಪ್ಪ, ಜಿ.ಟಿ.ಬಾಬುರೆಡ್ಡಿ, ಖಾದಿ ಜೆ.ರಮೇಶ್, ಬಿ.ಟಿ.ನಿರಂಜನ ಮೂರ್ತಿ, ಸದಸ್ಯರಾದ ನಾಗೇಶ್ ರೆಡ್ಡಿ, ಅಬ್ದುಲ್ಲಾ ಶಾ ವಲಿ, ಟಿ.ಕೃಷ್ಣಮೂರ್ತಿ, ನಾಗರಾಜ್, ಹೇಮಂತ ಯಾದವ್, ಮಹಮದ್ ಇಸ್ಮಾಯಿಲ್, ಎ.ಲೋಹಿತ್, ಕೆ.ಎ.ತಿಪ್ಪೇಶ್, ಎಲ್.ಇಂದಿರಾ, ಪಿ.ಆರ್.ಶಿವಕುಮಾರ್, ಮಧುಪಾಲೇಗೌಡ, ಟಿ.ಪ್ರಕಾಶ್, ಚನ್ನಕೇಶವ, ಜಿ.ಪಿ.ಸುರೇಶ್ ಸೇರಿದಂತೆ ತಾಲ್ಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.