ಮುಖ್ಯ ಸುದ್ದಿ
Internal Reservation; ಸಾಮಾಜಿಕ ನ್ಯಾಯದಡಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಿ | ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
CHITRADURGA NEWS | 13 AUGUST 2024
ಚಿತ್ರದುರ್ಗ: ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಆಗುವವರೆಗೆ ಲೋಕಸೇವಾ ಆಯೋಗ ಸೇರಿದಂತೆ ಎಲ್ಲ ನೇಮಕಾತಿಗಳನ್ನು ತಡೆ ಹಿಡಿಯಬೇಕು ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.
‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಅಡಿಯಲ್ಲಿ ಆದಷ್ಟು ಬೇಗ ಒಳಮೀಸಲಾತಿ ಜಾರಿ ಮಾಡಬೇಕು. ಮಾದಿಗ ಒಳಮೀಸಲಾತಿಯ ಎಲ್ಲಾ ಹೋರಾಟದ ಸಂದರ್ಭದಲ್ಲಿ ಮಾದಾರ ಚನ್ನಯ್ಯ ಗುರುಪೀಠ ಜತೆಗಿದೆ. ಅನೇಕರು ಹೋರಾಟವನ್ನು ಈವರೆಗೆ ಮುನ್ನಡೆಸಿಕೊಂಡು ಬಂದಿದ್ದಾರೆ’ ಎಂದು ಮಂಗಳವಾರ ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈಗ ಕೆನೆಪದರ ಎನ್ನುವ ವಿಚಾರವನ್ನು ಮುಂದಿಟ್ಟು ಗೊಂದಲ ಸೃಷ್ಟಿಸಲಾಗುತ್ತಿದೆ. ಪ್ರಧಾನಿ ನೇತೃತ್ವದ ಕೇಂದ್ರದ ಸಚಿವ ಸಂಪುಟದ ನಮ್ಮ ಮುಂದೆ ಕೆನೆಪದರ ವಿಚಾರವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಎಲ್ಲರೂ ಸೂಕ್ತ ಬೆಂಬಲ ನೀಡಿ ರಾಜ್ಯ ಸರ್ಕಾರದ ಮೂಲಕ ಅನುಷ್ಠಾನಕ್ಕೆ ತರಬೇಕಾಗಿದೆ. ಮಲ್ಲಿಕಾರ್ಜುನ ಖರ್ಗೆ ಈ ತೀರ್ಪನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಕ್ಲಿಕ್ ಮಾಡಿ ಓದಿ: ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗೆ ಸನ್ಮಾನ | ದಿನಾಂಕ ಘೋಷಿಸಿದ ಸಿ.ಎಸ್.ಷಡಾಕ್ಷರಿ
‘ಮಾದಿಗ ಸಮಾಜದ ಒಳ ಮೀಸಲಾತಿಯ ಹೋರಾಟಕ್ಕೆ ಮೂರು ದಶಕ ಮೀರಿದ ಇತಿಹಾಸ ಇದೆ. ಜನಾಂದೋಲನ / ಬೀದಿ ಹೋರಾಟ, ಕಾನೂನಾತ್ಮಕ ಸಂಘರ್ಷ ಹಾಗೂ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ತರುವುದು ಮಾಡಲಾಗಿದೆ. ಮಾದಾರ ಚನ್ನಯ್ಯ ಗುರುಪೀಠ ಮೂರೂ ಆಯಾಮದಲ್ಲಿ ತನ್ನ ಇತಿ ಮಿತಿಯಲ್ಲಿ ಕೈ ಜೋಡಿಸಿ ಕೆಲಸ ಮಾಡಿದೆ. ಸಮಾವೇಶಗಳು, ಪಾದಯಾತ್ರೆ. ಧರಣಿ ಇತ್ಯಾದಿ ಹೋರಾಟಗಳಲ್ಲಿ ಶ್ರೀ ಮಠ ಸದಾ ಬೆಂಬಲಿಸಿದೆ’ ಎಂದು ತಿಳಿಸಿದರು.
‘ಮಾದಿಗ ದಂಡೋರಾದ ಎಂ.ಶಂಕರಪ್ಪ, ತೆಲಂಗಾಣದ ಮಂದಕೃಷ್ಣ ಮಾದಿಗ, ಬಳ್ಳಾರಿ ಹನುಮಂತಪ್ಪ, ಮುತ್ತಣ್ಣ ಬೆನ್ನೂರು ಸೇರಿದಂತೆ ಅನೇಕ ಪ್ರಮುಖ ಹೋರಾಟಗಾರರು ನಿರಂತರ ಮಠದ ಜೊತೆಗಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇರಲಿ ಅಥವಾ ರಾಜ್ಯ / ಕೇಂದ್ರ ಸರ್ಕಾರವಿರಲಿ ಶ್ರೀ ಮಠ ತನ್ನದೇ ಆದ ರೀತಿಯಲ್ಲಿ ಸಂಪರ್ಕ, ಸಂಬಂಧ ಇರಿಸಿಕೊಂಡು ಕಾರ್ಯಸಾಧನೆಯಲ್ಲಿ ತನ್ನ ಪಾತ್ರವಹಿಸಿದೆ’ ಎಂದರು.
ಕ್ಲಿಕ್ ಮಾಡಿ ಓದಿ: ಸ್ವಾತಂತ್ರ್ಯೊತ್ಸವ | ಹರ್ ಘರ್ ತಿರಂಗಾ ಅಭಿಯಾನ
‘ಇದೀಗ ಸುಪ್ರೀಂಕೋರ್ಟ್ ಒಳ ಮೀಸಲಾತಿಯ ಪರವಾಗಿ ಐತಿಹಾಸಿಕ ತೀರ್ಪು ಕೊಟ್ಟಿದೆ. ಒಳ ಮೀಸಲಾತಿಯ ಹೋರಾಟ ಮಾದಿಗ ಸಮಾಜದ್ದೇ ಆದರೂ, ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಯ ಅನುಸಾರ ಸಾಮಾಜಿಕ ನ್ಯಾಯವನ್ನು ಒದಗಿಸಲಿದೆ. ಕೇವಲ ಎಸ್‌ಸಿ ಮಾತ್ರವಲ್ಲ ಎಸ್‌ಟಿ ಸಮುದಾಯದವರಿಗೂ ಇದರ ಲಾಭ ಸಿಗಲಿದೆ. ಕೆಲವರು ಕೆನೆಪದರದ ವಿಷಯ ಮುಂದಿಟ್ಟು ದಿಕ್ಕು ತಪ್ಪಿಸುತ್ತಾ ಇದ್ದಾರೆ’ ಎಂದು ತಿಳಿಸಿದರು.
‘ಕೇಂದ್ರ ಸರ್ಕಾರ ಕೆನೆಪದರದ ಬಗ್ಗೆ ಸ್ಪಷ್ಟ ಪಡಿಸಿದ ಬಳಿಕ ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಪಸ್ವರ ಎತ್ತಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಈವರೆಗೂ ಒಳಮೀಸಲಾತಿಯ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಖರ್ಗೆಯವರು ಸ್ವಾಗತಿಸಿಲ್ಲ. ಹೀಗಿರುವಾಗ ಖರ್ಗೆಯವರು ಕೆನೆಪದರ ಬಗ್ಗೆ, ಅನಗತ್ಯ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ’ ಎಂದರು.
‘ಈ ಎಲ್ಲವನ್ನು ಸರಿಯಾಗಿ ನಿರ್ವಹಿಸುವ ಬದ್ಧತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಸಂಪುಟ ಸಮಿತಿ, ಪರಿಶೀಲಿನಾ ಸಮಿತಿ, ಅಧ್ಯಯನ ಸಮಿತಿ ಇತ್ಯಾದಿ ರಚಿಸಿ ಕಾಲಹರಣ ಮಾಡುವು ಬೇಡ. ತುರ್ತಾಗಿ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಲಿ. ಒಳ ಮೀಸಲಾತಿಯನ ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.
‘ಮಾದಿಗ ಮೀಸಲಾತಿ ಕುರಿತಾದ ಅನೇಕ ಆಯೋಗಗಳು ವರದಿ ಕೊಟ್ಟಿವೆ. ಇನ್ನು ತಡ ಮಾಡುವುದು ಬೇಡ. ಯಾವುದೇ ನೌಕರಿ ತುಂಬುವುದು ಬೇಡ. ಒಳಮೀಸಲಾತಿ ಜಾರಿ ಮಾಡಿ ನಂತರ ಭರ್ತಿ ಮಾಡಿಕೊಳ್ಳಿ’ ಎಂದು ಮಾದಿಗ ದಂಡೋರ ಅಧ್ಯಕ್ಷ ಪಾವಗಡ ಶ್ರೀರಾಮ್ ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: ಶಾಲೆಗಳಲ್ಲಿ ಎನ್‌ಪಿಇಪಿ ಸಹಪಠ್ಯ ಸ್ಪರ್ಧೆ | ಪೋಸ್ಟರ್ ಅನಾವರಣ
ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಚ್.ಹನುಮಂತಪ್ಪ ಬಳ್ಳಾರಿ, ಮಾದಿಗ ಮಹಾಸಭಾ ಅಧ್ಯಕ್ಷ ಮುತ್ತಣ್ಣ ಬೆನ್ನೂರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ.ಎಚ್.ಮೋಹನ್, ಕಾರ್ಯದರ್ಶಿ ಬಿ.ಜಿ.ಸಾಗರ್, ಯೋಗೀಶ್ ಇದ್ದರು.