Connect with us

    ಕೆರೆಗೆ ನೀರು ಹರಿಸದಿದ್ದರೆ ಚುನಾವಣೆ ಬಹಿಷ್ಕಾರ | ಗ್ರಾಮಗಳಲ್ಲಿ ಪಾದಯಾತ್ರೆ

    ಮುಖ್ಯ ಸುದ್ದಿ

    ಕೆರೆಗೆ ನೀರು ಹರಿಸದಿದ್ದರೆ ಚುನಾವಣೆ ಬಹಿಷ್ಕಾರ | ಗ್ರಾಮಗಳಲ್ಲಿ ಪಾದಯಾತ್ರೆ

    CHITRADURGA NEWS | 31 MARCH 2024
    ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ವಾಣಿವಿಲಾಸ ಅಥವಾ ಭದ್ರಾ ಜಲಾಶಯದ ನೀರು ಹರಿಸಬೇಕು. ಇಲ್ಲವಾದರೆ ಗ್ರಾಮಗಳಲ್ಲಿ ಪಾದಾಯಾತ್ರೆ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವಂತೆ ತಿಳಿಸಲಾಗುತ್ತದೆ. ಕೂಡಲೇ ನೀರು ಹರಿಸಿ ಸಮಸ್ಯೆ ಬಗೆಹರಿಸಿ ಎಂದು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮುಖಂಡರ ಸಭೆಯಲ್ಲಿ ಆಗ್ರಹಿಸಿದರು.

    ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆ ಮೂಲಕ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೋರನಕಣಿವೆ ಅಣೆಕಟ್ಟೆಗೆ ನೀರು ಹರಿಸಿ, ಅಲ್ಲಿಂದ ನಮ್ಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುತ್ತದೆಂಬ ನಂಬಿಕೆ ಇಲ್ಲ. ಅದನ್ನು ಆಡಳಿತ ನಡೆಸುವವರು ಎಟಿಎಂ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಮ್ಮದು ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷದ ವಿರುದ್ಧವಲ್ಲ, ಬದಲಿಗೆ ವಿಫಲವಾಗಿರುವ ವ್ಯವಸ್ಥೆಯ ವಿರುದ್ಧ. ಮೂರ್ನಾಲ್ಕು ದಿನದಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಚುನಾವಣೆ ಬಹಿಷ್ಕಾರದ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಕ್ಲಿಕ್ ಮಾಡಿ ಓದಿ: ನಾಲ್ವರು ಶಿಕ್ಷಕರು ಅಮಾನತು | ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಕರ್ತವ್ಯ ಲೋಪ

    ಪಂಚಾಯಿತಿ ವ್ಯಾಪ್ತಿಗೆ 21 ಹಳ್ಳಿಗಳು ಸೇರಿವೆ. ದಿಂಡಾವರ, ಪಿಲ್ಲಾಲಿ, ಹೊಸಹಳ್ಳಿ ಹಾಗೂ ಮಾವಿನಮಡು ಗ್ರಾಮಗಳಲ್ಲಿ ಕೆರೆಗಳಿವೆ. ನಾಲ್ಕು ದೊಡ್ಡ ಗೋಕಟ್ಟೆಗಳಿವೆ. ಇವುಗಳು ತುಂಬಿದ್ದೇ ಅಪರೂಪ. 30–40 ವರ್ಷದಿಂದ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸುತ್ತಾ ಬಂದಿದ್ದೇವೆ. ಆದಿವಾಲ ಗೊಲ್ಲರಹಟ್ಟಿಯ ಸಮೀಪ ಹಾದು ಹೋಗಿರುವ ವಾಣಿವಿಲಾಸ ಬಲನಾಲೆಯಿಂದ ಈ ಭಾಗಕ್ಕೆ ಸುಲಭವಾಗಿ ನೀರು ಹರಿಸಬಹುದಾಗಿದೆ. ಆದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ನಮ್ಮ ಭಾಗದ ಜನ ಸಾಕಷ್ಟು ಜಮೀನು ಇದ್ದರೂ ನೀರಿನ ಕೊರತೆಯಿಂದ ಕೃಷಿಯಲ್ಲಿ ಯಶಸ್ಸು ಕಂಡಿಲ್ಲ’ ಎಂದು ಆರೋಪಿಸಿದರು.

    ರೈತ ಮುಖಂಡರಾದ ದಿಂಡಾವರದ ಚಂದ್ರಗಿರಿ, ಸಣ್ಣತಿಮ್ಮಣ್ಣ, ಬಾಣಸೂರಪ್ಪ ತಿಪ್ಪೇಸ್ವಾಮಿ, ಕರಿಯಣ್ಣ, ಸುಬ್ಬಣ್ಣ, ಸುರೇಶ್ ಗೌಡ, ನಿಂಗಪ್ಪ, ವಿರೂಪಾಕ್ಷಪ್ಪ, ಮೇಣಪ್ಪ, ರಾಮಕೃಷ್ಣಪ್ಪ, ಸತೀಶ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top