ಚಳ್ಳಕೆರೆ
ಹುಣಸೆಹುಳಿ ಸಾರು, ಅನ್ನದ ನೇವೈದ್ಯಕ್ಕೆ ಒಲಿಯುವ ನಾಗಪ್ಪ: ದೊಡ್ಡಚೆಲ್ಲೂರು ಕಮರದ ಕಾಡಿನಲ್ಲಿ ನೆಲೆ ವಿಶಿಷ್ಟ ಆಚರಣೆ
ಚಿತ್ರದುರ್ಗ ನ್ಯೂಸ್: ನಾಗರಪಂಚಮಿ ಅಂದಾಕ್ಷಣ ನಮಗೆಲ್ಲಾ ಸಾಮಾನ್ಯವಾಗಿ ನಾಗರ ಕಲ್ಲುಗಳಿಗೆ ಹಾಲೆರೆಯುವ ದೃಶ್ಯ ತಕ್ಷಣಕ್ಕೆ ಕಣ್ಣ ಮುಂದೆ ಹಾದು ಹೋಗುತ್ತದೆ. ಆದರೆ, ಬುಡಕಟ್ಟು ಪರಂಪರೆಗಳ ತೊಟ್ಟಿಲು ಎಂದೇ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ವಿಶಿಷ್ಟ ನಾಗರ ಪಂಚಮಿ ಆಚರಣೆಯಿರುವುದನ್ನು ಚಿತ್ರದುರ್ಗ ನ್ಯೂಸ್ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದೆ.
ಇಲ್ಲಿ ನಾಗರ ಪಂಚಮಿ ಆಚರಣೆಗೆ ಹಾಲು ಬೇಕಾಗಿಲ್ಲ. ಬದಲಾಗಿ ಹುಣಸೆ ಹುಳಿಯಿಂದ ತಯಾರು ಮಾಡಿದ ಸಾರು ಹಾಗೂ ಅನ್ನದ ನೈವೇಧ್ಯೆ ಸಾಕು ಎನ್ನುತ್ತಾನೆ ನಾಗಪ್ಪ ದೇವರು.
ಹೌದು ಇಂಥದ್ದೊAದು ವಿಶಿಷ್ಟ ಆಚರಣೆ ರೂಢಿಸಿಕೊಂಡಿರುವ ಬಂದಿರುವುದು ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕಾಡುಗೊಲ್ಲ ಸಮುದಾಯದ ಮಳ್ಳಿಗನವರ್ ಬೆಡಗಿನವರು.
ಈ ಬೆಡಗಿನವರ ನಾಗರ ಪಂಚಮಿ ಪ್ರತಿ ವರ್ಷ ಶ್ರಾವಣದ ಎರಡನೇ ಸೋಮವಾರ. ಚಳ್ಳಕೆರೆಯಿಂದ ಬರೋಬ್ಬರಿ 37 ಕಿ.ಮೀ ದೂರದಲ್ಲಿರುವ ಪರಶುರಾಮಪುರದ ದೊಡ್ಡಚೆಲ್ಲೂರು ಕಾವಲಿನ ಕಮರದ ಕಾಡಿನ ನಡುವೆ ನೆಲೆಯಾಗಿರುವ ನಾಗಪ್ಪನಿಗೆ ಈ ವಿಶಿಷ್ಟ ನೈವೇದ್ಯೆ ಸಲ್ಲಿಸುವ ಸಂಪ್ರದಾಯ ಪಾಲಿಸಿಕೊಂಡಿದ್ದಾರೆ.
ಚಳ್ಳಕೆರೆಯ ಕಾಟಪ್ಪನಹಟ್ಟಿ ಮತ್ತಿತರೆಡೆ ಕಾಡುಗೊಲ್ಲ ಸಮುದಾಯದ ಮಳ್ಳಿಗನವರ್ ಬೆಡಗಿನ ಸುಮಾರು 50 ಕುಟುಂಬಗಳು ದೊಡ್ಡಚೆಲ್ಲೂರು ಕಾವಲು ನಾಗಪ್ಪನ ಆರಾಧಕರಾಗಿದ್ದಾರೆ. ಪ್ರತಿ ವರ್ಷದ ಎರಡನೇ ಶ್ರವಾಣ ಸೋಮವಾರ ಮನೆಯನ್ನೆಲ್ಲಾ ಶುದ್ಧೀಕರಿಸಿಕೊಂಡು ಎಲ್ಲರೂ ಬೆಳಗ್ಗೆಯೇ ದೊಡ್ಡಚೆಲ್ಲೂರಿಗೆ ಪಾದಯಾತ್ರೆ ಮಾಡುತ್ತಾರೆ. ಅಲ್ಲಿ ನಾಗರ ಕಲ್ಲುಗಳಿಗೆ ಕಮರದ ಸೊಪ್ಪು, ಹೂವು ಇತ್ಯಾದಿಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಸಂಜೆ ಹೊತ್ತಿಗೆ ಪೂಜೆ ಸಲ್ಲಿಸುತ್ತಾರೆ. ಪೂಜೆ ಮುಗಿಯುವವರೆಗೆ ಬಹುತೇಕ ಎಲ್ಲರೂ ಉಪವಾಸ ವ್ರತ ನಡೆಸುವುದು ವಿಶೇಷ. ಒಂದು ವೇಳೆ ಅಷ್ಟು ದೂರ ಪಾದಯಾತ್ರೆ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲೇ ಇದ್ದರೂ ಇಡೀ ದಿನ ವ್ರತಾಚರಣೆ ಮಾಡಿ ಸಂಜೆಯ ನಂತರ ವ್ರತ ಕೈ ಬಿಡುವುದು ಪದ್ಧತಿ.
ಇಷ್ಟಾರ್ಥ ನೆರವೇರಿಸುವ ನಾಗಪ್ಪ ಎನ್ನುವ ನಂಬಿಕೆಯೂ ಇಲ್ಲಿಗೆ ನಡೆದುಕೊಳ್ಳುವವರಲ್ಲಿದೆ. ಕಂಕಣ ಭಾಗ್ಯ, ಸಂತಾನ, ಉದ್ಯೋಗ, ವ್ಯಾಪಾರ ಹೀಗೆ ಹಲವು ಬೇಡಿಕೆಗಳಿಗಾಗಿ ಈ ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ತಾವು ಬೇಡಿಕೊಂಡದ್ದು ಈಡೇರಿದ ನಂತರ ಬೆಳ್ಳಿಯ ಆಭರಣ, ಅನ್ನ ಸಂತರ್ಪಣೆ ಇತ್ಯಾದಿಗಳನ್ನು ಮಾಡಲಾಗುತ್ತದೆ. ದೊಡ್ಡಚೆಲ್ಲೂರು ಕಾವಲಿನಲ್ಲಿ ಮಕ್ಕಳ ಮುಡಿ ಅರ್ಪಿಸುವ ಪದ್ಧತಿಯೂ ಇದೆ.
ಹೇಗಿರುತ್ತದೆ ಪೂಜೆ-ಪುನಸ್ಕಾರ?
ಶ್ರಾವಣದ ಎರಡನೇ ಸೋಮವಾರ ಬೆಳ್ಳಗೆಯೇ ಶ್ರೀ ರಂಗಸ್ವಾಮಿ ಮತ್ತು ಯತ್ತಪ್ಪ ಸ್ವಾಮಿ ದೇವಾಲಯದಿಂದ ಹೊರಡುವ ಮಳ್ಳಿಗನವರ್ ಬೆಡಗಿನ ಸುಮಾರು 50 ಕುಟುಂಬಗಳು ದೊಡ್ಡಚೆಲ್ಲೂರು ಕಾವಲನ್ನು ಪಾದಯಾತ್ರೆ ಮೂಲಕ ತಲುಪಿ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ.
ಪೂಜೆ ಮುಗಿದ ನಂತರ ರಾತ್ರಿ ಚೆಲ್ಲೂರು ಗೇಟ್ ಬಳಿಯ ನಿಂಗಜ್ಜರ ಕಪಲೆಯಲ್ಲಿ ದಾಸಪ್ಪ, ಪೂಜಾರಿಗಳು ತಂಗುತ್ತಾರೆ. ಮಂಗಳವಾರ ಮುಂಜಾನೆ ಅಲ್ಲಿಂದ ಹೊರಟು ದೊಡ್ಡರಿ ಬಳಿ ಎದರು ಪರವು ನಡೆಸಿ ಭಕ್ತಿ ಸಮರ್ಪಣೆ ಮಾಡುತ್ತಾರೆ. ಇಲ್ಲಿ ಮತ್ತೆ ಅನ್ನ ಮತ್ತು ಸೋಪ್ಪಿನ ಸಾಂಬರ್ ನೈವೇದ್ಯ ಮಾಡಿ ಸಂಜೆ ವೇಳೆಗೆ ತಮ್ಮ ಗೊಲ್ಲರಹಟ್ಟಿಗೆ ಆಗಮಿಸುತ್ತಾರೆ.
ಭಾರತೀಯ ಮಹಿಳಾ ಅಂಧರ ಕ್ರಿಕೇಟ್ ತಂಡಕ್ಕೆ ನಾಯಕಿಯಾದಳು ಹಿರಿಯೂರಿನ ಮಗಳು ವರ್ಷಾ
ಆಗಸ್ಟ್ 28 ಎರಡನೇ ಶ್ರಾವಣ ಸೋಮವಾರವಾದ್ದರಿಂದ ನಾಗರ ಕಲ್ಲುಗಳಿಗೆ ಹುಣಸೆ ಹುಳಿಯ ಸಾರು, ಅನ್ನದ ನೈವೇದ್ಯೆ ಅರ್ಪಿಸುವ ಆಚರಣೆ ಶ್ರದ್ಧಾ ಭಕ್ತಿಯಿಂದ ಜರುಗಿತು. ಈ ಆಚರಣೆಗೆ ಮಳ್ಳಿಗನರ್ ವಂಶಸ್ಥರು ಮಾತ್ರವಲ್ಲದೇ ನೆಂಟರು, ಹೊಸದಾಗಿ ಮದುವೆಯಾದವರು ಕೂಡಾ ಬಂದು ಭಾಗವಹಿಸಿದ್ದರು. ಗೌಡರ ಚಿಕ್ಕಣ್ಣ, ರಾಜಣ್ಣ, ರಂಗನಾಥ, ಅಜ್ಜಯ್ಯ, ಮಂಜುನಾಥ, ಅಜ್ಜಯ್ಯ, ವೀರಭದ್ರಪ್ಪ, ತಿಪ್ಪೇಸ್ವಾಮಿ, ಪೂಜಾರಿ ಸುರೇಶ, ದಾಸಪ್ಪರಾದ ರಂಗಸ್ವಾಮಿ, ತಿಪ್ಪೇಸ್ವಾಮಿ ನೂರಾರು ಭಕ್ತರು ಸೇರಿ ಈ ವರ್ಷದ ಪೂಜೆಯನ್ನು ಸಂಭ್ರಮದಿAದ ನೆರವೇರಿಸಿದರು.
ಕರಿಕಂಬಳಿಯಲ್ಲಿದ್ದ ನಾಗರ ಕಲ್ಲುಗಳು ಮಾಯವಾಗಿದ್ದವು
ಈ ವಿಶಿಷ್ಟ ಆಚರಣೆಗೆ ಸುಮಾರು ಏಳೆಂಟು ತಲೆಮರುಗಳ ಹಿನ್ನೆಲೆಯಿದೆ. ಪ್ರತಿ ವರ್ಷ ಮಕ್ಕಳು, ವೃದ್ಧರನ್ನು ಕರೆದುಕೊಂಡು ಇಷ್ಟು ದೂರ ನಡೆದು ಬರುವುದು ಕಷ್ಟ ಎನ್ನುವ ಕಾರಣಕ್ಕೆ ಹಿಂದೊಮ್ಮೆ ನಮ್ಮ ಹಿರಿಯರು ದೊಡ್ಡಚೆಲ್ಲೂರಿನಲ್ಲಿರುವ ನಾಗಪ್ಪನ ವಿಗ್ರಹಗಳನ್ನು ಕರಿ ಕಂಬಳಿಯಲ್ಲಿಟ್ಟುಕೊAಡು ಚಳ್ಳಕೆರೆ ನಗರದ ಬಳಿಯೇ ಪ್ರತಿಷ್ಠಾಪನೆ ಮಾಡಲು ಮುಂದಾಗುತ್ತಾರೆ. ಹೀಗೆ ನಡೆದು ಬರುವಾಗ ರಾತ್ರಿಯಾದ ಕಾರಣ ನಾಗರ ಕಲ್ಲುಗಳ ಸಮೇತ ವೇದಾವತಿ ನದಿಯಲ್ಲಿ ರಾತ್ರಿ ಬೀಡು ಬಿಡುತ್ತಾರೆ. ಬೆಳಗ್ಗೆ ಎದ್ದು ಹೊರಡಲು ಅಣಿಯಾದಾಗ ಕಂಬಳಿಯಲ್ಲಿ ನಾಗರ ಕಲ್ಲುಗಳೇ ಇರಲಿಲ್ಲ. ಮತ್ತೆ ದೊಡ್ಡ ಚೆಲ್ಲೂರು ಕಾವಲಿಗೆ ಹೋಗಿ ನೋಡಿದಾಗ ಅದೇ ನಾಗರ ಕಲ್ಲುಗಳು ಅಲ್ಲಿ ಪ್ರತಿಷ್ಠಾಪನೆಯಾಗಿದ್ದವು. ಈ ವೇಳೆ ತಮ್ಮ ತಪ್ಪಿನ ಅರಿವಾಗಿ, ಎಷ್ಟೇ ಕಷ್ಟವಾದರೂ ಪ್ರತಿ ವರ್ಷ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತೇವೆ ಎಂದು ದೇವರಲ್ಲಿ ಕ್ಷಮೆ ಕೇಳಿದ್ದರು ಎನ್ನುವುದನ್ನು ಮಳ್ಳಿಗನರ್ ವಂಶದ ರಂಗಸ್ವಾಮಿ ಸ್ಮರಿಸುತ್ತಾರೆ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)