ಸಂಡೆ ಸ್ಪಷಲ್
ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!
CHITRADURGA NEWS | 30 JUNE 2024
ಚಿತ್ರದುರ್ಗದ ಹೆಮ್ಮೆಯ ಡಿಜಿಟಲ್ ಸುದ್ದಿತಾಣ ಚಿತ್ರದುರ್ಗನ್ಯೂಸ್.ಕಾಂ, ಜೋಗಿಮಟ್ಟಿ ಗಿರಿಧಾಮ ಕುರಿತು ಸಮಗ್ರ ಮಾಹಿತಿ ಕಟ್ಟಿಕೊಡುವ ಹೊಸ ಪ್ರಯತ್ನ ಮಾಡುತ್ತಿದ್ದು, ಇದರ ಮೊದಲ ಸರಣಿಯಾಗಿ ಜೋಗಿಮಟ್ಟಿ ನಿಮಗೆಷ್ಟು ಗೊತ್ತು ಆರಂಭವಾಗಿದೆ. ಇಂದಿನಿಂದ ಒಂದು ವಾರ ಕಾಲ ಜೋಗಿಮಟ್ಟಿ ಸರಣಿ ಪ್ರಕಟವಾಗಲಿದೆ.
ಬಾರೇ ಬಾರೇ ಚಂದದ ಚೆಲುವಿನ ತಾರೇ..
ನಾಗರಹಾವು ಚಿತ್ರದ ಈ ಹಾಡು ಕಿವಿಯ ಮೇಲೆ ಬೀಳುತ್ತಲೇ ನಟ ನಟ ವಿಷ್ಣುವರ್ಧನ್ ಓಡಾಡುವ ಆ ಜಾಗ ಥಟ್ಟನೇ ಕಣ್ಣ ಮುಂದೆ ಹಾದು ಹೋಗುತ್ತದೆ. ಹಚ್ಚ ಹಸುರಿನ ಹುಲ್ಲುಗಾವಲು, ನವಿರಾಗಿ ಬೀಸುವ ಗಾಳಿ ಕೆನ್ನೆಯ ಸವರಿದ ಅನುಭವ ಆಗುತ್ತದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಹಾಡಿನ ಚಿತ್ರೀಕರಣ ನಡೆದಿದ್ದು, ಚಿತ್ರದುರ್ಗದಿಂದ ಹತ್ತು ಕಿ.ಮೀ ಅಂತರದಲ್ಲಿರುವ ಜೋಗಿಮಟ್ಟಿ ಗಿರಿಧಾಮದಲ್ಲಿ. ಆದರೆ, ಅಂದು ಹುಲ್ಲುಗಾವಲಿನಂತೆ ಕಾಣುತ್ತಿದ್ದ ಗಿರಿಧಾಮ ಇಂದು ಕಾನನವಾಗಿದೆ. ಬಯಲು ಸೀಮೆಯ ಊಟಿಯೇ ಆಗಿ ಹೋಗಿದೆ.
ಬಯಲು ಸೀಮೆಯ ಊಟಿ ಜೋಗಿಮಟ್ಟಿ:
ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿರುವ ಜೋಗಿಮಟ್ಟಿ ಗಿರಿಧಾಮ ಅಕ್ಷರಶಃ ಬಯಲು ಸೀಮೆಯ ಊಟಿಯೇ ಸರಿ. ಮಳೆಗಾಲ, ಚಳಿಗಾಲದಲ್ಲಿ ನಸುಕಿನಲ್ಲಿ ಜೋಗಿಮಟ್ಟಿ ಏರುತ್ತಾ ಹೋದರೆ ರಸ್ತೆಯ ಇಕ್ಕೆಲಗಳಲ್ಲಿ ನವಿಲುಗಳ ನರ್ತನ, ಬೆಟ್ಟದ ತುದಿಯೇರಿ ನಿಂತರೆ ಸ್ವರ್ಗವೇ ಕಣ್ಣ ಮುಂದೆ ಹಾದು ಹೋದಂತಹ ಅನುಭವ ಆಗುತ್ತದೆ.
ಆಗಸದಲ್ಲಿ ಮುಗಿಲೆತ್ತರದ ಅಂತರದಲ್ಲಿ ಹಾದು ಹೋಗುವ ಮೋಡಗಳು, ಜೋಗಿಮಟ್ಟಿಯಲ್ಲಿ ನಮ್ಮ ಕಣ್ಣ ಮುಂದೆ, ನಮ್ಮನ್ನೇ ಸವರಿಕೊಂಡು ಹೋದ ಅನುಭವ ನಿಮಗೆ ಬಾರದಿರಲು ಸಾಧ್ಯವೇ ಇಲ್ಲ.
ಬೆಳ್ಳಂ ಬೆಳಗ್ಗೆ ಜೋಗಿಮಟ್ಟಿಯಲ್ಲಿ ನಿಂತರೆ, ನಾವು ಎಲ್ಲಿದ್ದೇವೆ ಎನ್ನುವುದೇ ಒಂದು ಕ್ಷಣಕ್ಕೆ ಮರೆತು ಹೋಗುತ್ತದೆ. ಅಷ್ಟು ದಟ್ಟವಾದ ಮಂಜು ಹಾದು ಹೋಗುತ್ತದೆ. ಆನಂತರ ಗಾಳಿ ಬೀಸಿದಾಗ ಕಾರಿನ ಗ್ಲಾಸ್ ಮೇಲೆ ಫಾಗ್ ತುಂಬಿ ಕ್ಲಿಯರ್ ಆದಾಗ ಕಾಣುವ ಮುಂದಿನ ದೃಶ್ಯದಂತೆ ಗಿರಿಧಾಮದ ತುದಿಯಿಂದ ಕೆಳಗಿನ ಊರು, ಕೆರೆ, ಮರ ಗಿಡಗಳು ಕಣ್ಣಿಗೆ ಬೀಳುತ್ತವೆ.
ಹಸಿರನ್ನೇ ಹಾಸಿ ಹೊದ್ದಿದೆ ಜೋಗಿಮಟ್ಟಿ:
ಒಂದು ಕಾಲದಲ್ಲಿ ಹುಲ್ಲುಗಾವಲಾಗಿ, ಸುತ್ತಮುತ್ತಲಿನ ಜನರಿಗೆ ದನ, ಕರುಗಳಿಗೆ ಮೇವಿಗೆ ಆಸರೆಯಾಗಿದ್ದ ಜೋಗಿಮಟ್ಟಿ ಇಂದು ಕಾಯ್ದಿಟ್ಟ ಅರಣ್ಯ ಪ್ರದೇಶ.
ಬಯಲು ಸೀಮೆಯ ಕುರುಚಲು ಕಾಡು ಇಲ್ಲಿ ದಟ್ಟವಾಗಿ ಬೆಳೆದಿದೆ. ಮತ್ತಿ, ಹೊನ್ನೆ, ಬೇವು, ದಿಂಡುಗ, ಶ್ರೀಗಂಧ, ಬೀಟೆ, ಬೇವು, ಹೊಂಗೆ, ತುಗ್ಗಲಿ, ಬೇಟೆ, ಕಮರ, ತಡಸಲು, ಬೇಲ, ಕಕ್ಕೆ, ಸೋಮೆ, ಹಾಲೆ ಸೇರಿದಂತೆ ನಾನಾ ರೀತಿಯ ಮರ ಗಡಿಗಳ ರಾಶಿಯೇ ಇಲ್ಲಿದೆ.
ಔಷಧಿ ಸಸ್ಯಗಳು ಕೂಡಾ ದಟ್ಟವಾಗಿದ್ದು, 250ಕ್ಕಿಂತ ಹೆಚ್ಚು ಪ್ರಬೇಧದಇದನ್ನು ಈ ಕಾರಣಕ್ಕೂ ಸಂರಕ್ಷಣೆ ಮಾಡಲಾಗುತ್ತಿದೆ.
ವನ್ಯಜೀವಿಗಳ ಆವಾಸ ಸ್ಥಾನ:
ಕಾಯ್ದಿಟ್ಟಿರುವ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬಯಲು ಸೀಮೆಯಲ್ಲಿ ವಾಸಿಸುವ ಕರಡಿ, ಚಿರತೆ, ನವಿಲು, ಜಿಂಕೆ, ಮೊಲ, ಕಾಡು ಹಂದಿ, ಚಿಪ್ಪು ಹಂದಿ, ಹೆಬ್ಬಾವು ಸೇರಿದಂತೆ ನೂರಾರು ರೀತಿಯ ಪ್ರಾಣು ಪಕ್ಷಿಗಳ ಸಂಕುಲವೇ ಇಲ್ಲಿ ನೆಲೆಸಿದೆ.
3 ತಾಲೂಕುಗಳ ವ್ಯಾಪ್ತಿಯಲ್ಲಿ 22 ಸಾವಿರ ಎಕರೆ ಅರಣ್ಯ:
ಚಿತ್ರದುರ್ಗ ನಗರದ ಮದಕರಿ ವೃತ್ತದಿಂದ 10 ಕಿ.ಮೀ ಅಂತರದಲ್ಲಿರುವ ಜೋಗಿಮಟ್ಟಿ ಅರಣ್ಯಧಾಮ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲೂಕುಗಳ ವ್ಯಾಪ್ತಿಯಲ್ಲಿ 10,049 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ.
ಸಮುದ್ರ ಮಟ್ಟದಿಂದ 1323 ಮೀಟರ್ ಎತ್ತರದ ಪ್ರದೇಶದಲ್ಲಿದ್ದು, ಏಷ್ಯಾ ಖಂಡದಲ್ಲೇ ಅತೀ ಹೆಚ್ಚು ಗಾಳಿ ಬೀಸುವ ಎರಡನೇ ಜಾಗ ಎಂದೂ ಇದನ್ನು ಗುರುತಿಸಲಾಗುತ್ತಿದೆ.
ಮುಂದುವರೆಯುವುದು…