ಮುಖ್ಯ ಸುದ್ದಿ
Chitradurga: ಎಸ್.ನಿಜಲಿಂಗಪ್ಪ ಮನೆ ಮಾರಾಟ ಮಾಡ್ತಾರಂತೆ | ಬೆಲೆ ಹತ್ತು ಕೋಟಿಯಂತೆ..
CHITRADURGA NEWS | 12 NOVEMBER 2024
ಚಿತ್ರದುರ್ಗ: ಕಳೆದ ಮೂರು ದಿನಗಳಿಂದ ಚಿತ್ರದುರ್ಗ (Chitradurga)ಕ್ಕೆ ಸಂಬಂಧಿಸಿದ ಸುದ್ದಿಯೊಂದು ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ.
ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ, ಕರ್ನಾಟಕ ಏಕೀಕರಣ ಚುಳುವಳಿಯ ರೂವಾರಿ, ದಕ್ಷಿಣ ಭಾರತದಿಂದ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ದಿ.ಎಸ್.ನಿಜಲಿಂಗಪ್ಪ ಅವರ ಮನೆಗೆ ಸಂಬಂಧಿಸಿದ ಸುದ್ದಿ ಇದಾಗಿದೆ.
ಹೌದು, ಕಳೆದೊಂದು ದಶಕದಿಂದ ಎಸ್.ನಿಜಲಿಂಗಪ್ಪ ಅವರ ಮನೆ ಸದ್ದು, ಸುದ್ದಿ ಮಾಡುತ್ತಲೇ ಇದೆ. ಈ ಮನೆಯನ್ನು ಸರ್ಕಾರ ಖರೀಧಿಸಿ ಸ್ಮಾರಕ ಮಾಡಬೇಕು ಎನ್ನುವ ಒತ್ತಾಯ ನಿಜಲಿಂಗಪ್ಪ ಅವರ ಅನುಯಾಯಿಗಳು, ಅಭಿಮಾನಿಗಳು, ದುರ್ಗದ ಜನರಿಂದ ಕೇಳಿ ಬರುತ್ತಲೇ ಇದೆ.
ಇದನ್ನೂ ಓದಿ: ಒಂದೂವರೆ ಟಿಎಂಸಿ ನೀರು ಬಂದರೆ ವಿವಿ ಸಾಗರ ಭರ್ತಿ
ಆದರೆ, ಸಕಾಲಕ್ಕೆ ಮಾರಾಟವಾಗದೆ, ವರ್ಷಗಳು ಕಳೆದವು. ಮತ್ತೊಂದು ಅವಧಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೂ ಈ ವಿಚಾರ ಪ್ರಸ್ತಾಪವಾಗಿ ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮನೆ ಖರೀಧಿಸಿ ಸ್ಮಾರಕ ಮಾಡುವ ಹೊಣೆಗಾರಿಕೆ ನೀಡಿದ್ದರು.
ಈ ಅವಧಿಯಲ್ಲಿ ಒಂದಿಷ್ಟು ಪ್ರಕ್ರಿಯೆಗಳು ನಡೆದು, 4.26 ಕೋಟಿ ರೂ.ಗಳಲ್ಲಿ ಮನೆ ಖರೀಧಿಸಿ, 74 ಲಕ್ಷದಲ್ಲಿ ಅಭಿವೃದ್ಧಿ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದರು. ಅದರಂತೆ 5 ಕೋಟಿ ರೂ. ಅನುದಾನ ಜಿಲ್ಲಾಧಿಕಾರಿ ಖಾತೆಗೆ ಜಮೆಯೂ ಆಗಿತ್ತು.
ಇದನ್ನೂ ಓದಿ: ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆ ನಿಲ್ಲಿಸಿದ ಅಧಿಕಾರಿಗಳು..!!
ಆದರೆ, ಆಗಿದ್ದೇನು ಎಂದು ನೋಡಿದರೆ ಮತ್ತದೇ ನಿರಾಶೆ. ಮನೆ ಖರೀಧಿ ಆಗಲೇ ಇಲ್ಲ. ಸ್ಮಾರಕ ಆಗಲೇ ಇಲ್ಲ. ಬದಲಾಗಿ ದಿನೇ ದಿನೇ ಶಿಥಿಲವಾಗುತ್ತಿದೆ. ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸೂಕ್ತ ಭದ್ರತೆಯೇ ಇಲ್ಲದೆ ಸಾಕಷ್ಟು ಬಾರಿ ಕಳ್ಳತನ ನಡೆದಿರುವ ದೃಶ್ಯಗಳು ಮನೆಯಲ್ಲಿ ಕಂಡುಬರುತ್ತಿವೆ.
ಕಾಂಗ್ರೆಸ್‍ನಿಂದಲೂ ನಡೆದಿತ್ತು ಖರೀಧಿ ಪ್ರಹಸನ:
ಈ ನಡುವೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಮನೆ ಖರೀಧಿ ಸಂಬಂಧ ಪತ್ರವೊಂದನ್ನು ಮೂರು ತಿಂಗಳ ಹಿಂದಷ್ಟೇ ಬರೆದಿದ್ದರು.
ಎಸ್.ನಿಜಲಿಂಗಪ್ಪ ಹಿರಿಯ ಕಾಂಗ್ರೆಸ್ ನಾಯಕರು. ಎಐಸಿಸಿ ಅಧ್ಯಕ್ಷರಾಗಿದ್ದವರು. ಅವರ ಮನೆಯನ್ನು ಕಾಂಗ್ರೆಸ್ ಪಕ್ಷದಿಂದ ಖರೀಧಿ ಮಾಡಿದರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಪಕ್ಷದ ಆಸ್ತಿಯಾಗುತ್ತದೆ ಎಂಬರ್ಥದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರದಲ್ಲಿ ತಿಳಿಸಿದ್ದರು.
ಈ ಪತ್ರ ತಲುಪಿದ ಬಳಿಕ ಕೆಪಿಸಿಸಿ ಕಡೆಯಿಂದ ಮನೆಯನ್ನು ನೋಡಿ ಬರಲು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಚಿತ್ರದುರ್ಗಕ್ಕೆ ಬಂದೇ ಬಿಟ್ಟರು. ಈ ವೇಳೆ ಎಸ್.ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಉಪಸ್ಥಿತರಿದ್ದು, ಮನೆಯನ್ನು ತೋರಿಸಿದ್ದರು.
ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀಧಿಗೆ ಮುಂದಾದ ಕಾಂಗ್ರೆಸ್ | ಮನೆ ವೀಕ್ಷಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಮನೆ ಮಾರಾಟಕ್ಕಿದೆ, ಪತ್ರಿಕೆಯಲ್ಲಿ ಜಾಹೀರಾತು ಬಂತು:
ಕಾಂಗ್ರೆಸ್ ಪಕ್ಷದಿಂದ ಇನ್ನೇನು ಮನೆ ಖರೀದಿ ಆಗುತ್ತದೆ ಎನ್ನುತ್ತಿರುವಾಗಲೇ, ಎಸ್.ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ವಿಜಯವಾಣಿ ಪತ್ರಿಕೆಯಲ್ಲಿ ಮನೆ ಮಾರಾಟಕ್ಕಿದೆ ಎಂಬ ಜಾಹೀರಾತು ಪ್ರಕಟಿಸಿದ್ದಾರೆ.
ಪತ್ರಿಕೆಯಲ್ಲಿ ಮನೆ ಮಾರಾಟಕ್ಕಿದೆ ಎಂಬ ಜಾಹೀರಾತು ಬರುತ್ತಿದ್ದಂತೆ ಈ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮನೆ, ಸ್ಮಾರಕವಾಗಬೇಕಿದ್ದ ಮನೆ ಮಾರಾಟಕ್ಕಿದೆ ಎಂಬ ಜಾಹೀರಾತು ಬಂತಲ್ಲ ಎಂಬ ವಿಚಾರ ಎಸ್ಸೆನ್ ಅನುಯಾಯಿಗಳಿಗೆ ಸಾಕಷ್ಟು ನೋವುಂಟು ಮಾಡಿದೆ.
ಇದನ್ನೂ ಓದಿ: ಎರಡು ದಿನ ಚಿತ್ರದುರ್ಗಕ್ಕೆ ನೀರು ಬಂದ್
ಮತ್ಯಾಕೆ ಮನೆ ಖರೀದಿ ಆಗುತ್ತಿಲ್ಲ:
ಮನೆ ಖರೀಧಿಗೆ ಯಾಕೆ ವಿಳಂಬ ಆಗುತ್ತಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಯಾಕೆ ಖರೀದಿ ಆಗುತ್ತಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಬಂದಿದೆ.
ಹಿಂದೆ ಕವಿತಾ ಮನ್ನಿಕೇರಿ ಅವರು ಜಿಲ್ಲಾಧಿಕಾರಿ ಆಗಿದ್ದಾಗ ಮನೆ ಖರೀಧಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಇದಕ್ಕಾಗಿ ನಿಜಲಿಂಗಪ್ಪ ಅವರ ಮಗ, ಮೊಮ್ಮಗ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು.
ಇದನ್ನೂ ಓದಿ: ಲಸಿಕೆಗಳು ಮಕ್ಕಳ ಮರಣ ತಪ್ಪಿಸುತ್ತವೆ | ಡಾ.ಡಿ.ಎಂ.ಅಭಿನವ್
ಅಮೇರಿಕಾದಲ್ಲಿ ನೆಲೆಸಿರುವ ಮೊಮ್ಮಗ ವಿನಯ್ ಆಗಮಿಸಿದ್ದರು. ಆದರೆ, ನೊಂದಣಿ ಆಗಲಿಲ್ಲ. ಅಧಿಕಾರಿಗಳು ತಾಂತ್ರಿಕ ನೆಪವೊಡ್ಡಿದರು.
ಮನೆ ಖರೀಧಿಗೆ ಇರುವ ತಾಂತ್ರಿಕ ಸಮಸ್ಯೆ ಏನು:
ಎಸ್.ನಿಜಲಿಂಗಪ್ಪ ಕಟ್ಟಿಸಿದ್ದ ಈ ಮನೆಯನ್ನು ಮೊಮ್ಮಗ ವಿನಯ್ ಹೆಸರಿಗೆ ವಿಲ್ ಬರೆದಿದ್ದಾರೆ. ನಿಜಲಿಂಗಪ್ಪ ಅವರ ಮೂವರು ಪುತ್ರರ ಅನುಭೋಗದ ನಂತರ ಮೊಮ್ಮಗನಿಗೆ ಸೇರತಕ್ಕದ್ದು ಎಂದು ಉಯಿಲಿನಲ್ಲಿ ಉಲ್ಲೇಖಿಸಲಾಗಿದೆ.
ಇದರಲ್ಲಿ ಎಸ್.ಎನ್.ಕಿರಣ್ ಶಂಕರ್ ಮಾತ್ರ ಮದುವೆಯಾಗಿದ್ದು, ಇನ್ನು ಇಬ್ಬರು ಸಹೋಧರರು ಮದುವೆ ಆಗಿಲ್ಲ. ಅದರಲ್ಲಿ ಹಿರಿಯ ಅಣ್ಣ ವಿನಯ್ ಹೆಸರಿಗೆ ಮನೆ ವರ್ಗಾವಣೆ ಮಾಡಲು ಕಾನೂನು ಪ್ರಕ್ರಿಯೆ ಮುಗಿಸಿದ್ದಾರೆ. ನಿಜಲಿಂಗಪ್ಪ ಅವರ 2ನೇ ಮಗ ರಾಜಣ್ಣ ನಿಧನರಾಗಿದ್ದಾರೆ.
ಈಗ ಎಸ್ಸೆನ್ ಮೊಮ್ಮಗ ಅಂದರೆ, ಕಿರಣ್ ಶಂಕರ್ ಅವರ ಪುತ್ರ ವಿನಯ್ ಹೆಸರಿಗೆ ಮನೆ ನೊಂದಣಿ ಆಗಿ, ಇ-ಸ್ವತ್ತೂ ಆಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಸ್ ಸಂಚಾರ ವ್ಯವಸ್ಥೆ ಬದಲಾವಣೆ | ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಜಿಲ್ಲಾಡಳಿತ ನಿರ್ಧಾರ
ಆದರೆ, ಜಿಲ್ಲಾಡಳಿತ ಮನೆ ನೊಂದಣಿಗೆ ನಿಜಲಿಂಗಪ್ಪ ಅವರ ಇಡೀ ಕುಟುಂಬ ಬರಬೇಕು. ಅಂದರೆ, ಅವರ ಪುತ್ರಿಯರು ಬರಬೇಕು ಎಂಬ ಷರತ್ತು ವಿಧಿಸಿದ್ದ ಕಾರಣಕ್ಕೆ ಮನೆ ಖರೀಧಿ ಆಗಿಲ್ಲ.
ಜಿಲ್ಲಾಡಳಿತದ ಈ ನಿರ್ಧಾರದಿಂದ ಬೇಸತ್ತ ಎಸ್.ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಮನೆಯನ್ನು ಸರ್ಕಾರಕ್ಕೆ ಮಾರಾಟ ಮಾಡದೇ, ಖಾಸಗಿಯವರಿಗೆ ಮಾರಲು ನಿರ್ಧರಿಸಿದ ಪರಿಣಾಮವೇ ಕಾಂಗ್ರೆಸ್ ಖರೀಧಿಗೆ ಮುಂದಾಗಿದ್ದು, ಈಗ ಪತ್ರಿಕೆಯಲ್ಲಿ ಜಾಹೀರಾತು ಬಂದಿರುವುದು.
ಎಲ್ಲಿದೆ ಗೊತ್ತಾ ನಿಜಲಿಂಗಪ್ಪ ಮನೆ:
ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿ ಜಿಲ್ಲಾಧಿಕಾರಿ ಬಂಗಲೆ ಪಕ್ಕದ ರಸ್ತೆಯಲ್ಲಿ ಪೂರ್ವಾಭಿಮುಖವಾಗಿ ಪಾರಂಪರಿಕ ಕಟ್ಟಡದಂತೆ ನಿಜಲಿಂಗಪ್ಪ ಅವರ ಮನೆ ಇದೆ.
ಚಿತ್ರದುರ್ಗದಲ್ಲಿ ವಕೀಲಿ ವೃತ್ತಿ ಮಾಡುವಾಗ ಎಸ್.ನಿಜಲಿಂಗಪ್ಪ ಅವರು, 117*130 ಅಡಿ ಜಾಗ ಖರೀಧಿಸಿ ಇದರಲ್ಲಿ 2600 ಚದರ ಅಡಿ ವ್ಯಾಪ್ತಿಯಲ್ಲಿ ಈ ಮನೆಯನ್ನು ನಿರ್ಮಾಣ ಮಾಡಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಮಂಗಳವಾರದ ಹತ್ತಿ ರೇಟ್ ಇಲ್ಲಿದೆ..
ನಿಜಲಿಂಗಪ್ಪ ಅವರ ಈ ಮನೆಯನ್ನು ದುರ್ಗದ ಜನ ಅಭಿಮಾನದಿಂದ ವೈಟ್ ಹೌಸ್ ಎಂದು ಕರೆಯುತ್ತಾರೆ. ಮಾಜಿ ಮುಖ್ಯಮಂತ್ರಿ ಆದವರು ಬೆಂಗಳೂರಿನಲ್ಲಿ ನೆಲೆಸುತ್ತಾರೆ ಎನ್ನುವ ಮಾತಿಗೆ ವ್ಯತಿರಿಕ್ತವಾಗಿ, ಎಸ್ಸೆನ್ ತಮ್ಮ ಕೊನೆಯ ದಿನಗಳನ್ನು ಇದೇ ಮನೆಯಲ್ಲಿ ಕಳೆದಿದ್ದರು ಎನ್ನುವುದು ವಿಶೇಷ.
ನಾಲ್ಕು ಬಾರಿ ಮುಖ್ಯಮಂತ್ರಿ, ಒಮ್ಮೆ ಸಂಸದರು, ಎಐಸಿಸಿ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪ 1937 ರಲ್ಲಿ ಕಟ್ಟಿಸಿಕೊಂಡು ಏಕೈಕ ಮನೆ ಇದು. ಅವರ ಹೆಸರಿನಲ್ಲಿರುವ ಏಕೈಕ ಸ್ಥಿರಾಸ್ಥಿಯೂ ಇದೇ ಆಗಿದೆ. ಈಗ ಅದೇ ಮಾರಾಟಕ್ಕಿದೆ.
ಈ ವಿಚಾರ ದುರ್ಗದಲ್ಲಿ ಅಜ್ಜನ ಮನೆ ಮಾರಾಟಕ್ಕಿದೆಯಂತೆ, 10 ಕೋಟಿಯಂತೆ ಎಂಬರ್ಥದಲ್ಲಿ ಚರ್ಚೆಯಾಗುತ್ತಿದೆ.