ಮುಖ್ಯ ಸುದ್ದಿ
ಮುರುಘಾ ಶರಣರಿಗೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ | ವಿದ್ಯಾಪೀಠದ ನೀತಿ ನಿರೂಪಣೆಗಳಲ್ಲಿ ಹಸ್ತಕ್ಷೇಪ ಬೇಡ
CHITRADURGA NEWS | 10 JANUARY 2024
ಚಿತ್ರದುರ್ಗ: ಎಸ್‍ಜೆಎಂ ವಿದ್ಯಾಪೀಠದ ದೈನಂದಿನ ಆಗುಹೋಗುಗಳನ್ನು ಮಾತ್ರ ನೋಡಿಕೊಳ್ಳಿ. ನೀತಿ ನಿರೂಪಣೆ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಬೇಡ ಎಂದು ಮುರುಘಾ ಮಠದ ಪೀಠಾಧ್ಯಕ್ಷ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಪೋಕ್ಸೋ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದು ಹೊರಬಂದ ನಂತರ ಮುರುಘಾ ಶರಣರು, ಎಸ್‍ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಳ್ಳುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದಂತಾಗಿದೆ ಎಂದು ದೂರಿ ಎಸ್‍ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ನಿರ್ದೇಶಕ ಆರ್.ನಾಗರಾಜ್ ಎಂಬುವವರು ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಹಾಗೂ ನ್ಯಾ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: ಹತ್ಯೆ ಮಾಡಿದ ತಾಯಿ ಪೊಲೀಸ್ ಕಸ್ಟಡಿಗೆ | ಮೃತ ಮಗು ಅಪ್ಪನ ಮಡಿಲಿಗೆ
ಈ ವೇಳೆ ಶರಣರ ಪರ ವಕೀಲರಿಗೆ, ಷರತ್ತುಬದ್ಧ ಜಾಮೀನು ಪಡೆದು ಹೊರಗೆ ಬಂದಿರುವ ನಿಮಗೆ ಇಷ್ಟೊಂದು ಅಧಿಕಾರದ ಆತುರವೇಕೆ ಎಂದು ಪ್ರಶ್ನಿಸಿದೆ.
ದೋಷಾರೋಪಗಳಿಂದ ಮುಕ್ತರಾಗುವ ತನಕ ಅಧಿಕಾರದಿಂದ ದೂರ ಉಳಿಯುವುದು ಒಳಿತಲ್ಲವೇ ? ಎಂದು ತಿಳಿಸಿದ ನ್ಯಾಯಪೀಠ, ಇಂದಿನಿಂದ ವಿದ್ಯಾಪೀಠದ ನೀತಿ ನಿರೂಪಣೆ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳಬಾರದು.
ಕೇವಲ ದೈನಂದಿನ ವ್ಯವಹಾರಗಳಲ್ಲಿ ಮಾತ್ರವೇ ನಿಮ್ಮ ಪಾಲುದಾರಿಕೆ ಇರಲಿ ಎಂದು ಮೌಖಿಕವಾಗಿ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದೆ.