ಮುಖ್ಯ ಸುದ್ದಿ
ಗರ್ಭಿಣಿ ಮಹಿಳೆಯರಿಗೆ ವಿಶೇಷ ಸುರಕ್ಷಿತ ಮಾತೃತ್ವ ಅಭಿಯಾನದಡಿ ಆರೋಗ್ಯ ತಪಾಸಣೆ
CHITRADURGA NEWS | 22 MAY 2025
ಚಿತ್ರದುರ್ಗ: ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಪಾಲ್ಗೊಂಡ ಗರ್ಭಿಣಿಯರು ಕಬ್ಬಿಣಾಂಶದ ಕೊರತೆ ನೀಗಿಸಿಕೊಂಡು ಸುರಕ್ಷಿತ ತಾಯ್ತತನ ಪಡೆಯಿರಿ. ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಪ್ರತಿ ಮನೆಯ ಮಾತಾಗಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
Also Read: ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ನಿರ್ದೋಷಿ | ಚಿತ್ರದುರ್ಗ ನ್ಯಾಯಾಲಯದಿಂದ ತೀರ್ಪು
ತಾಲ್ಲೂಕಿನ ಗೊಡಬನಹಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಇ-ಪಿ.ಎಮ್.ಎಸ್.ಎ. ಕಾರ್ಯಕ್ರಮದಡಿಯಲ್ಲಿ ಎಲ್ಲಾ ವರ್ಗದ ತೊಡಕಿನ ಗರ್ಭಿಣಿ ಮಹಿಳೆಯರಿಗೆ ವಿಶೇಷ ಸುರಕ್ಷಿತ ಮಾತೃತ್ವ ಅಭಿಯಾನದಡಿ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಮಟ್ಟದಲ್ಲಿ ಗರ್ಭಿಣಿ ಆರೈಕೆಯಲ್ಲಿ ಕಬ್ಬಿಣಾಂಶದ ಕೊರತೆಯಿಂದ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ರಕ್ತ ಹೀನತೆ ಉಂಟಾಗುತ್ತದೆ. ಹಿಮೋಗ್ಲೋಬಿನ್ 7 ಗ್ರಾಮ್‍ಗಿಂತ ಕಡಿಮೆ ಇರುವ ಗರ್ಭಿಣಿಯರಿಗೆ ರಕ್ತವನ್ನು ನೀಡಲಾಗುತ್ತದೆ. 7 ಗ್ರಾಮ್ ಮೇಲೆ 10 ಗ್ರಾಮ್ ಹಿಮೋಗ್ಲೋಬಿನ್ ಪ್ರಮಾಣವಿರುವ ಗರ್ಭಿಣಿಯರಿಗೆ ಕನಿಷ್ಠ 10 ಡೋಸ್ ಐರನ್ ಸುಕ್ರೋಸ್ ಇಂಜೆಕ್ಷನ್ ಮೂಲಕ ಕಬ್ಬಿಣದ ಕೊರತೆ ನೀಗಿಸಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲಾಗುತ್ತದೆ.
ಸಾಮಾನ್ಯ ಗರ್ಭಿಣಿಯರಿಗೆ ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳ ಪೂರೈಕೆ ಮಾಡಿ ಕನಿಷ್ಠ 12 ಗ್ರಾಮ್ ನಷ್ಟು ಹಿಮೋಗ್ಲೋಬಿನ್ ಇರುವಂತೆ ನಿರ್ವಾಹಣೆ ಮಾಡಲಾಗುತ್ತದೆ ಎಂದು ಹೇಳಿದರು.
Also Read: ಚರ್ಮವನ್ನು ಬಿಳಿಯಾಗಿಸಲು ಕೆಂಪು ಶ್ರೀಗಂಧ ಪ್ರಯೋಜನಕಾರಿಯೇ?
ಗೊಡಬನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಿ.ಅನುಷಾ ಮಾತನಾಡಿ, ಗರ್ಭಿಣಿಯರು ಮುಟ್ಟುನಿಂತ ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಒದಗಿಸಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಿಂದ ಗರ್ಭಧಾರಣೆ ಪರೀಕ್ಷೆ ನಡೆಸಿ ಗರ್ಭಧಾರಣೆಯ ಖಚಿತತೆ ಪಡೆದು ತಾಯಿ ಕಾರ್ಡ್ ಪಡೆದು ಪ್ರತಿ ತಿಂಗಳು 9ನೇ ತಾರೀಕು ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗುವ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ತಪಾಸಣೆ ಮಾಡಿಸಿಕೊಳ್ಳಿ ಸುರಕ್ಷಿತ ತಾಯ್ತನ ಪಡೆಯಿರಿ ಎಂದು ಸಲಹೆ ನೀಡಿದ ಅವರು, ತಾಯಿ ಮರಣ ಶಿಶು ಮರಣ ನಿಯಂತ್ರಣ ಮಾಡಲು ಸಹಕರಿಸಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜನಾಥ, ಗರ್ಭಿಣಿ ಆರೈಕೆ, ಬಾಣಂತಿ ಆರೈಕೆ, ಮಕ್ಕಳ ಆರೈಕೆಯಲ್ಲಿ ಸೇವಿಸಬೇಕಾದ ಪೌಷ್ಟಿಕ ಆಹಾರದ ಮತ್ತು ಮಕ್ಕಳ ಲಸಿಕಾ ವೇಳಾ ಪಟ್ಟಿಯ ಬಗ್ಗೆ, ಎದೆ ಹಾಲಿನ ಮಹತ್ವದ ಬಗ್ಗೆ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಸುಖಿ ಕುಟುಂಬದ ಆದರ್ಶ ಪಾಲಿಸಲು ಇಲಾಖೆಯಲ್ಲಿರುವ ಕುಟುಂಬ ಯೋಜನೆಗಳ ಸೇವಾ ಮಾಹಿತಿ ತಿಳಿಸಿದರು.
ಇದೇ ಸಂದರ್ಭದಲ್ಲಿ 16 ಗರ್ಭಿಣಿಯರ ತಪಾಸಣೆ ಚಿಕಿತ್ಸೆ ನೀಡಲಾಯಿತು.
Also Read: ಬೇಸಿಗೆಯಲ್ಲಿ ಮಕ್ಕಳಿಗೆ ಮಜ್ಜಿಗೆ ಕುಡಿಸುವುದರಿಂದ ಆಗುವ ಪ್ರಯೋಜನಗಳು
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಮಧು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ತಾಲ್ಲೂಕು ಆಶಾ ಭೋಧಕಿ ತಬಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಇದ್ದರು.