ಮುಖ್ಯ ಸುದ್ದಿ
HD Pura Temple: ಎಚ್.ಡಿ.ಪುರದ ಲಕ್ಷ್ಮಿ ನರಸಿಂಹಸ್ವಾಮಿಗೆ ನೂತನ ರಥ | ಎಸ್‌ಎಲ್‌ಎನ್ ಟ್ರಸ್ಟ್ ಮನವಿ
CHITRADURGA NEWS | 23 AUGUST 2024
ಚಿತ್ರದುರ್ಗ: ಐತಿಹಾಸಿಕ ಪುಣ್ಯ ಕ್ಷೇತ್ರವಾದ ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ ಲಕ್ಷ್ಮಿ ನರಸಿಂಹಸ್ವಾಮಿಯ (HD Pura Temple) ರಥ ಶಿಥಿಲಗೊಂಡಿದ್ದು, ನೂತನ ರಥ ನಿರ್ಮಾಣಕ್ಕೆ ಚಿಂತನೆ ನಡೆದಿದೆ.
ರಥ ನಿರ್ಮಾಣದ ವಿಚಾರವಾಗಿ ತಹಶೀಲ್ದಾರ್ ಬೀಬಿ ಫಾತಿಮಾ ಅವರನ್ನು ಭೇಟಿಯಾದ ಎಸ್‌ಎಲ್‌ಎನ್ ಟ್ರಸ್ಟ್ ಸದಸ್ಯರು ದೇವಾಲಯಕ್ಕೆ ನೂತನ ರಥ ನಿರ್ಮಿಸಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಹೊರಕೆರೆ ದೇವರಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ರಾಜ್ಯದ ನಾನಾ ಕಡೆಯಲ್ಲಿ ಭಕ್ತರಿದ್ದಾರೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ.
ಕ್ಲಿಕ್ ಮಾಡಿ ಓದಿ: ಡೆಂಗ್ಯೂ ಜ್ವರಕ್ಕೆ 7 ವರ್ಷದ ಬಾಲಕ ಬಲಿ
ದೇವಸ್ಥಾನದ ರಥವು ನಿರ್ಮಾಣಗೊಂಡು 350 ವರ್ಷಗಳಾಗಿದ್ದು, ವರ್ಷದಿಂದ ವರ್ಷಕ್ಕೆ ರಥವು ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ. ಶಿಥಿಲಾವಸ್ಥೆಯ ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಜಾತ್ರೆ ಮಾಡುವುದು ಬಹು ದೊಡ್ಡ ಸವಾಲಾಗಿದೆ. ಆದ್ದರಿಂದ ದುರಸ್ಥಿ ಬದಲು ನೂತನ ರಥ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ದೇಗುಲವು ಮುಜರಾಯಿ ಇಲಾಖೆಗೆ ಸೇರಿದ್ದು, ಹೆಚ್ಚು ಆದಾಯ ಬರುತ್ತಿದೆ. ಈ ಹಣದಲ್ಲಿ ನಮಗೆ ರಥ ನಿರ್ಮಿಸಿಕೊಡಿ ಎಂದು ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರಂಗಯ್ಯ ಮನವಿ ಮಾಡಿದ್ದಾರೆ.
ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಜಲಾಶಯದ ಒಳಹರಿವು ಹೆಚ್ಚಳ
ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಬೀಬಿ ಫಾತಿಮಾ, ದೇವಸ್ಥಾನದ ರಥ ನಿರ್ಮಾಣಕ್ಕೆ ಆಗುವ ಬಜೆಟ್‌ನ ಅಂದಾಜು ಪಟ್ಟಿ ಸಿದ್ಧಪಡಿಸಿ ಕಚೇರಿಗೆ ಸಲ್ಲಿಸಿ. ಅದನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಅನುಮತಿ ಪಡೆದು ಬಳಿಕ ರಥ ನಿರ್ಮಾಣ ಪ್ರಾರಂಭಿಸಬಹುದು ಎಂದು ತಿಳಿಸಿದರು.
ಟ್ರಸ್ಟ್‌ನ ಉದಯ್, ಬಿ.ಎನ್.ರವಿ, ಸಿ.ಜಯಪ್ಪ ಹಾಗೂ ಧರ್ಮದರ್ಶಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.