ಮುಖ್ಯ ಸುದ್ದಿ
ಆರ್ಥಿಕ ಸಂಕಷ್ಟದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ | ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ
CHITRADURGA NEWS | 11 JANUARY 2025
ಚಿತ್ರದುರ್ಗ: ಐದು ವರ್ಷಗಳಿಂದಲೂ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
Also Read: ಬೆಳೆ ಹಾನಿ ಪರಿಶೀಲನೆ, ಪರಿಹಾರಕ್ಕೆ ಶಾಶ್ವತ ಕೋಶ ರಚಿಸಿ | ರೈತ ಸಂಘ ಆಗ್ರಹ
ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ನವೆಂಬರ್ ತಿಂಗಳಿನಲ್ಲಿ ಅಭಿಮಾನ ತೋರಿಸಿದರೆ ಸಾಲದು. ಕನ್ನಡ ಭಾಷೆಯ ಉಳಿವಿಗಾಗಿ ಇರುವ ಏಕೈಕ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವುದರಿಂದ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅನುದಾನ ಬಿಡುಗಡೆಗೊಳಿಸಬೇಕು.
ಕನ್ನಡ ಭಾಷೆಯ ಹಿತ ಕಾಯಬೇಕಾಗಿರುವ ರಾಜ್ಯ ಸರ್ಕಾರವೇ ಕನ್ನಡವನ್ನು ತಿರಸ್ಕಾರದಿಂದ ನೋಡುವುದು ತರವಲ್ಲ. ಅನುದಾನದ ಕೊರತೆಯಿಂದ ಸಂಶೋಧನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿಲ್ಲದಿರುವುದು ನೋವಿನ ಸಂಗತಿ ಎಂದು ತಿಳಿಸಿದರು.
ಬೋಧಕ-ಬೋಧಕೇತರ ಸಿಬ್ಬಂದಿಗಳು ವೇತನವಿಲ್ಲದೆ ಪರದಾಡುವಂತಾಗಿದೆ. ವಿದ್ಯುತ್ ಶುಲ್ಕ ಕಟ್ಟಲು ಹಣವಿಲ್ಲದಂತಾಗಿರುವುದು ನಾಚಿಕೆಗೇಡಿನ ಸಂಗತಿ. ಈ ಕೂಡಲೆ ರಾಜ್ಯ ಸರ್ಕಾರ ಅನುದಾನ ನೀಡಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಆರ್ಥಿಕವಾಗಿ ಶಕ್ತಿ ತುಂಬಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಎಂ. ಮನವಿ ಮಾಡಿದರು.
Also Read: 73 ಪ್ರಕರಣಗಳ ವಿಚಾರಣೆ | ಜಿಲ್ಲೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಭೇಟಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಉಪಾಧ್ಯಕ್ಷರಾದ ಷರೀಫ್, ಶಿವಣ್ಣ, ನಗರಾಧ್ಯಕ್ಷ ರಾಮ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಮಂಜುನಾಥ್, ಯುವ ಘಟಕದ ಅಧ್ಯಕ್ಷ ಮಣಿ, ಕಾರ್ಮಿಕ ಘಟಕದ ಅಧ್ಯಕ್ಷ ಫೈಜುಲ್ಲಾ ಇದ್ದರು.