ಮುಖ್ಯ ಸುದ್ದಿ
ಡಿಸಿ ಕಚೇರಿ ಮುಂದೆ ಕುಳಿತ ಅತಿಥಿ ಉಪನ್ಯಾಸಕರು | ಸೇವೆ ಖಾಯಂ ಮಾಡಲು ಅನಿರ್ಧಿಷ್ಟಾವಧಿ ಧರಣಿ

ಚಿತ್ರದುರ್ಗ ನ್ಯೂಸ್.ಕಾಂ: ಕಳೆದ ಹಲವು ದಶಕಗಳಿಂದ ಮಕ್ಕಳಿಗೆ ಉಪನ್ಯಾಸ ಮಾಡುತ್ತಾ, ಸೇವಾ ಭದ್ರತೆಯೇ ಇಲ್ಲದೆ, ಅತಂತ್ರ ಜೀವನ ಸಾಗಿಸುತ್ತಿರುವ ಅತಿಥಿ ಉಪನ್ಯಾಕರ ಹುದ್ದೆಗಳನ್ನು ಖಾಯಾಂ ಮಾಡಲು ಒತ್ತಾಯಿಸಿ ನೂರಾರು ಅತಿಥಿ ಉಪನ್ಯಾಕಸರು ಬೀದಿಗಿಳಿದಿದ್ದಾರೆ.
ಇಂದಿನಿಂದ ತರಗತಿಗಳನ್ನು ಬಹಿಷ್ಕರಿಸಿ ಅನಿರ್ಧಿಷ್ಟಾವಧಿವರೆಗೆ ಧರಣಿ ಹಮ್ಮಿಕೊಂಡಿರುವ ಅತಿಥಿ ಉಪನ್ಯಾಸಕರು, ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ 400 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ 15-20 ವರ್ಷಗಳಿಂದಲೂ ಯಾವುದೇ ಜೀವನ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಈವರೆಗೆ ಅಧಿಕಾರ ನಡೆಸಿದ ಯಾವ ಪಕ್ಷಗಳು ನಮ್ಮ ಬೇಡಿಕೆಗಳನ್ನು ಈಡೇರಿಸದೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡು ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಡಿಕೆ ಮೇಲಿನ ಸೆಸ್ ಇಳಿಕೆಗೆ ವರ್ತಕರ ಒತ್ತಾಯ
ನಮ್ಮ ಬೇಡಿಕೆಗಳಿಗೆ ಯಾವ ಸರ್ಕಾರವೂ ಸ್ಪಂದಿಸದ ಪರಿಣಾಮವಾಗಿ ಇಂದು ಅನಿವಾರ್ಯವಾಗಿ ಅನಿರ್ಧಿಷ್ಟಾವಧಿ ಧರಣಿಗೆ ಮುಂದಾಗಿದ್ದೇವೆ. ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಈ ಹಿಂದೆ ನಾವು ಪ್ರತಿಭಟಿಸುವಾಗ ನಮ್ಮ ಬೆಂಬಲಕ್ಕೆ ನಿಂತು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಅತಿಥಿ ಉಪನ್ಯಾಸಕರನ್ನು ಖಾಯಾಂ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ನಮ್ಮನ್ನು ಮರೆತಿದ್ದಾರೆ ಎಂದರು.

ಡಿಸಿ ಕಚೇರಿ ಮುಂದೆ ಕುಳಿತ ಅತಿಥಿ ಉಪನ್ಯಾಸಕರು
ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಜಿ.ಎನ್.ಯಶೋಧರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ನಾರಾಯಣ್, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರೆಲ್ಲಾ ನಮಗೆ ಬರೀ ಆಶ್ವಾಸನೆಗಳನ್ನು ನೀಡುವುದರಲ್ಲಿ ಕಾಲ ಕಳೆದರೆ ವಿನಃ ಸೇವೆ ಖಾಯಂಗೊಳಿಸಲಿಲ್ಲ.
ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ನಮ್ಮನ್ನು ಖಾಯಂಗೊಳಿಸಿ ಜೀವನಕ್ಕೆ ಭದ್ರತೆ ಕಲ್ಪಿಸಲಿ. ಬೆಳಗಿನಿಂದ ಸಂಜೆಯತನ ಕಾಲೇಜಿನಲ್ಲಿರುವಂತೆ ಷರತ್ತು ವಿಧಿಸಲಾಗುವುದು. ಆದರೆ ವೇತನ ಮಾತ್ರ ತಿಂಗಳಿಗೆ 25 ರಿಂದ ಮೂವತ್ತು ಸಾವಿರ ರೂ.ಗಳμÉ್ಟ. ಇದರಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಯೂಟ್ಯೂಬ್, ವೆಬ್‍ಸೈಟ್, ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸರ್ಕಾರದ ಸಹಾಯಧನ
ಅತಿಥಿ ಉಪನ್ಯಾಸಕರಲ್ಲಿ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಬ್ಬೊಬ್ಬರದು ಒಂದೊಂದು ಸಮಸ್ಯೆಯಿದೆ. ಅನೇಕ ಕಡೆಗಳಲ್ಲಿ ನಮ್ಮ ವಿದ್ಯಾರ್ಥಿಗಳೆ ನಮಗೆ ಎಚ್‍ಒಡಿಗಳಾಗಿದ್ದಾರೆ. ಅವರ ಜೊತೆಯಲ್ಲಿ ಕುಳಿತು ನಾವು ಕೌನ್ಸಿಲಿಂಗ್ ಮಾಡಬೇಕಾದರೆ ಹಿಂಸೆಯಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೇವೆ ಖಾಯಂಗೊಳಿಸುವಂತೆ ಕೋರಿದರು.

ಡಿಸಿ ಕಚೇರಿ ಮುಂದೆ ಕುಳಿತ ಅತಿಥಿ ಉಪನ್ಯಾಸಕರು
ಅತಿಥಿ ಉಪನ್ಯಾಸಕರುಗಳ ಸಂಘದ ಕಾರ್ಯದರ್ಶಿ ವಿ.ಎಸ್.ಮಂಜುನಾಥ್, ಸಹ ಕಾರ್ಯದರ್ಶಿ ಜಕಣಾಚಾರಿ, ಉಪಾಧ್ಯಕ್ಷೆ ಪಿ.ಎಂ.ಚಂದನ, ಸಂಘಟನಾ ಕಾರ್ಯದರ್ಶಿ ಪಿ.ಮಂಜಪ್ಪ, ಡಾ.ನಂದಿನಿ, ಮಂಜುಳಾ, ಆಶಾ, ನಾಗರತ್ನ, ದಾಕ್ಷಾಯಿಣಿ, ರೂಪಲಕ್ಷ್ಮಿ, ಹಂಸವೇಣಿ, ಡಾ.ವೆಂಕಟೇಶ್, ನಿಹಾರಿಕ, ಫಿರ್ದೊಸ್ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರುಗಳು ಧರಣಿಯಲ್ಲಿ ಭಾಗವಹಿಸಿದ್ದಾರೆ.
