ಮುಖ್ಯ ಸುದ್ದಿ
ಕನ್ನಡದಲ್ಲಿ ಗೋವಿಂದ ಎಂ.ಕಾರಜೋಳ ಪ್ರಮಾಣ ವಚನ ಸ್ವೀಕಾರ
CHITRADURGA NEWS | 24 JUNE 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ನೂತನ ಸಂಸತ್ ಭವನದಲ್ಲಿ ಸೋಮವಾರ ಲೋಕಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ತಮ್ಮ ಹೆಸರನ್ನು ಪೂರ್ತಿಯಾಗಿ ಗೋವಿಂದ ಮುಕ್ತಪ್ಪ ಕಾರಜೋಳ ಅಂತ ಹೇಳಿ, ನಾನು ಲೋಕಸಭಾ ಸದಸ್ಯನಾಗಿ ಚುನಾಯಿತನಾಗಿ, ಕಾನೂನು ಮೂಲಕ ಸ್ಥಾಪಿಸಲ್ಪಟ್ಟಿರುವ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುವೆನೆಂದು ಮತ್ತು ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವೆನೆಂದು ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ಸಂಸದರಿಗೆ ಜಿಲ್ಲೆಯ ಅಭಿವೃದ್ಧಿ ಚಿಂತೆ ಬೇಡ | ಶಾಸಕ ಬಿ.ಜಿ.ಗೋವಿಂದಪ್ಪ
ಇದೇ ವೇಳೆ ಕೇಂದ್ರ ಸಚಿವರಾಗಿ ನೇಮಕಗೊಂಡಿರುವ ರಾಜ್ಯದ ಸಂಸದರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆಯವರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದರು.
ನೂತನ ಸಂಸತ್ ಭವನ ಸೆಂಟ್ರಲ್ ವಿಸ್ಟಾದಲ್ಲಿ ನಡೆಯುತ್ತಿರುವ 18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್ ಭತೃಹರಿ ಮಹತಾಬ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ತುಮಕೂರಿನಿಂದ ಸ್ಪರ್ಧಿಸಿ ಗೆದ್ದಿರುವ ವಿ.ಸೋಮಣ್ಣ ಅವರಿಗೆ ಕಲ್ಲಿದ್ದಲು ಮತ್ತು ಗಣಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸ್ಥಾನ ನೀಡಿದ್ದಾರೆ.