ಮುಖ್ಯ ಸುದ್ದಿ
Good News: ಗುರುವಿನ ಸ್ಮರಣಾರ್ಥ ಸರ್ಕಾರಿ ಶಾಲೆಗೆ ನೆರವಿನ ಹಸ್ತ | ಪ್ರತಿಭಾ ಪುರಸ್ಕಾರಕ್ಕೆ ಮೀಸಲು

CHITRADURGA NEWS | 16 AUGUST 2024
ಚಿತ್ರದುರ್ಗ: ಗುರುವಿನ ಸ್ಮರಣಾರ್ಥ ಸರ್ಕಾರಿ ಶಾಲೆಗೆ ಹಳೇ ವಿದ್ಯಾರ್ಥಿ ನೆರವಿನ ಹಸ್ತ ತೋರಿದ್ದು, ಪ್ರತಿಭಾ ಪುರಸ್ಕಾರಕ್ಕೆ ಹಣ ಮೀಸಲಿಟಿದ್ದಾರೆ.
ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಆಗಮಿಸಿದ್ದ ದಾಸರಮುತ್ತೇನಹಳ್ಳಿಯ ವಾಸಿ, ಮೈಸೂರು ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಚಿನ್ನಯ್ಯ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ₹ 1ಲಕ್ಷ ದತ್ತಿ ನಿಧಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ‘ಈ ಶಾಲೆಗೆ ದಿವಂಗತ ಪಿ.ಎಂ.ಶಂಕರಣ್ಣ ಇವರ ಸ್ಮರಣಾರ್ಥ ₹ 1 ಲಕ್ಷವನ್ನು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಮೀಸಲಿಡಲಾಗಿದೆ. ಪಿ.ಎಂ.ಶಂಕರಣ್ಣ ನನ್ನ ಮೆಚ್ಚಿನ ಗುರುಗಳು. ಅವರ ಸ್ಮರಣಾರ್ಥದ ಸವಿನೆನಪಿಗಾಗಿ ಅವರ ಸಂಬಂಧಿಕರ ಸಹಕಾರದೊಂದಿಗೆ ಈ ಕಾರ್ಯ ಮಾಡಲಾಗಿದೆ’ ಎಂದರು.
ಕ್ಲಿಕ್ ಮಾಡಿ ಓದಿ: ತಡರಾತ್ರಿ ಚಿರತೆಯ ಅಟ್ಟಹಾಸ | ಬೆಚ್ಚಿದ ಗ್ರಾಮಸ್ಥರು
‘ವಾರ್ಷಿಕ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಎಸ್ಎಸ್ಎಲ್ಸಿ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶಾಲೆಯ ವಿದ್ಯಾರ್ಥಿಗೆ ₹ 6,000 ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಗುತ್ತದೆ’ ಎಂದು ತಿಳಿಸಿದರು.
ದತ್ತಿನಿಧಿ ಟ್ರಸ್ಟ್ ವತಿಯಿಂದ 2022-23 ಮತ್ತು 2023-24 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದ ರೇಖಲಗೆರೆ ಲಂಬಾಣಿ ಹಟ್ಟಿ ಗ್ರಾಮದ ಸಾಂಚಿತ ಮತ್ತು ಓಬಯ್ಯನ ಹಟ್ಟಿ ಗ್ರಾಮದ ಸಂಗೀತ ಅವರಿಗೆ ತಲಾ ₹ 6,000 ಬಹುಮಾನ ನೀಡಲಾಯಿತು. ದ್ವಿತೀಯ ಸ್ಥಾನ ಪಡೆದಿದ್ದ ರಾಜೇಶ್, ತೇಜಸ್ವಿನಿ ಹಾಗೂ ತೃತೀಯ ಸ್ಥಾನ ಪಡೆದಿದ್ದ ಪೂರ್ಣಿಮಾ, ನೀಲಾಂಬಿಕೆ ಅವರಿಗೂ ₹1,500 ನಗದು ಬಹುಮಾನ ವಿತರಿಸಲಾಯಿತು.
ಕ್ಲಿಕ್ ಮಾಡಿ ಓದಿ: ಸ್ನೇಹ ಪಬ್ಲಿಕ್ ಸ್ಕೂಲ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ದತ್ತಿ ನಿಧಿ ಟ್ರಸ್ಟ್ನ ಪ್ರಮುಖರಾದ ಓಬಯ್ಯನಹಟ್ಟಿ ಗ್ರಾಮದ ಪ್ರವೀಣ್, ಮುಖ್ಯ ಶಿಕ್ಷಕ ವೆಂಕಟೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ನಾಗಭೂಷಣ್, ರಂಗನಾಥ್, ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಜಯಣ್ಣ, ಶಿಕ್ಷಕರಾದ ಜಗದೀಶ್, ವೀರಭದ್ರಪ್ಪ, ಓಂಕಾರಪ್ಪ, ಶಿವಕುಮಾರ್, ರಂಜಿತ, ರಮ್ಯ, ಗಿಡ್ಡಯ್ಯ, ಗೌರಮ್ಮ, ಕುಬೇರ ಇದ್ದರು.
