ಮುಖ್ಯ ಸುದ್ದಿ
ಜ್ಞಾನಭಾರತಿ ಶಾಲೆ ಸುವರ್ಣ ಮಹೋತ್ಸವ | ಖ್ಯಾತ ನಟ ದತ್ತಣ್ಣ ಭಾಗೀ | ಹಳೆಯ ಗೆಳೆಯರ ಮಿಲನ
CHITRADURGA NEWS | 03 FEBRUARY 2025
ಚಿತ್ರದುರ್ಗ: ಹೇಯ್, ಇಲ್ಲೇ ಅಲ್ವಾ ನಮ್ಮ ಆಟದ ಮೈದಾನ ಇದ್ದಿದ್ದು, ಆ ಕಡೆ ಬಾಲ್ ಹೋದಾಗ ಅಜ್ಜಿ ಬೈತಿದ್ರು ನೆನಪಿದ್ಯಾ. ಅವನೆಲ್ಲೋ ಡುಮ್ಮಾ ಬಂದಿಲ್ವಾ.
ಈಗ ಏನ್ ಮಾಡ್ಕೊಂಡಿದಿಯಾ ಮಗಾ, ಹೋ ಹೌದಾ ಅಷ್ಟೊಳ್ಳೆ ಪೊಸಿಷನ್ನಲ್ಲಿ ಇದ್ದಿಯಾ, ನಮ್ದು ಏನಾದರೂ ಬಂದಾಗ ಸೈನ್ ಹಾಕೋದನ್ನು ಮರಿಬೇಡಪ್ಪ.
ಇದನ್ನೂ ಓದಿ: ಕೇಂದ್ರದ ಬಜೆಟ್ನಿಂದ ಯಾರಿಗೆ ಅನುಕೂಲ | ಹಾಲಿ, ಮಾಜಿ ಸಂಸದರು ಏನು ಹೇಳಿದ್ರು ?
ಏನಿದು ಸಂಭಾಷಣೆ ಅಂತೀರಾ. ದಶಕಗಳ ನಂತರ ತಾವು ಓದುತ್ತಿದ್ದ ಶಾಲೆಗೆ ಬಂದು, ಸಹಪಾಠಿಗಳನ್ನು ಭೇಟಿಯಾದ ಅಂಕಲ್ಗಳ ಮಾತುಕತೆಯ ಝಲಕ್ ಇದು.
ಹೌದು, ನಗರದ ಜ್ಞಾನಭಾರತಿ ಶಾಲೆಯ ಆವರಣ ಇಂದು ಹಳೆಯ ವಿದ್ಯಾರ್ಥಿಗಳಿಂದ ತುಂಬಿ ಹೋಗಿತ್ತು. ಗೆಳೆಯ, ಗೆಳತಿಯರು ಸೇರಿ ಹರಟೆ ಹೊಡೆದಿದ್ದೇ ಹೊಡೆದಿದ್ದು,
ವೇದಿಕೆಯಲ್ಲಿ ಗಣ್ಯರು ಭಾಷಣ ಮಾಡುತ್ತಿದ್ದರು, ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಇರಲಿಲ್ಲ. ಕಾರಣ ಹತ್ತು, ಇಪ್ಪತ್ತು ವರ್ಷಗಳ ನಂತರ ಹಳೆಯ ಗೆಳೆಯ, ಗೆಳತಿಯರು ಒಟ್ಟಿಗೆ ಸೇರಿದ್ದಾರೆ. ಅಕ್ಕಪಕ್ಕ ಕುಳಿತಿದ್ದಾರೆ.
ಇದನ್ನೂ ಓದಿ: ನಗರಸಭೆ | ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳನ್ನು ಆಯ್ಕೆ ಮಾಡಲು ಅರ್ಜಿ
ಜ್ಞಾನಭಾರತಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಅಷ್ಟೂ ವರ್ಷಗಳ ಹಳೆಯ ಬ್ಯಾಚ್ನ ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಷ್ಟ್ರೋತ್ಥಾನ ಪರಿಷತ್ತಿನ ಈ ಶಾಲೆ 50 ವರ್ಷ ಪೂರೈಸಿರುವುದು ಬಹಳ ಸಂತೋಷದ ವಿಷಯ. ಸಮಾಜಕ್ಕೆ ಬೇಕಾದ ಎಲ್ಲ ತ್ಯಾಗಕ್ಕೆ ಸಿದ್ಧವಿರುವ ವಿದ್ಯಾರ್ಥಿಗಳನ್ನು ಈ ಶಾಲೆ ರೂಪಿಸಿದೆ. ಇದಕ್ಕೆ ಸಹಕಾರ ನೀಡಿದ ಪೋಷಕರು, ದಾನಿಗಳಿಗೆ ಅಭಿನಂದನೆಗಳು ಸಲ್ಲಬೇಕು.
| ನಿರ್ಮಲಕುಮಾರ್, ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದ ಕಾರ್ಯದರ್ಶಿ.
ಶಾಲೆಯಲ್ಲಿ ಪಾಠ ಮಾಡಿ ನಿವೃತ್ತಿ ಹೊಂದಿರುವ ಅಧ್ಯಾಪಕರು, ಮಾತಾಜಿಗಳು ಆಗಮಿಸಿದ್ದರು. ಶಾಲೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ತಾವು ಕುಳಿತು ಪಾಠ ಕೇಳುತ್ತಿದ್ದ ಕೊಠಡು, ಡೆಸ್ಕು, ಬೆಂಚುಗಳ ಮೇಲೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆದರು. ಪ್ರಾರ್ಥನೆ ಮಾಡುತ್ತಿದ್ದ ಹಾಲ್ನಲ್ಲೇ ಕಾಲು ನೋವು ಬರುವವರೆಗೆ ನಿಂತು ಮಾತಾಡಿದರು.
ತಾವು ಆಟವಾಡುತ್ತಿದ್ದ ಮೈದಾನದಲ್ಲಿ ಕಟ್ಟಡ ಕಟ್ಟಿದ್ದಾರೆಂದು ಕೆಲವರು ಬೇಜಾರಾದರು. ತಮಗೆ ಕಲಿಸಿದ ಗುರುಗಳಿಗೆ ಮಾಡಿದ್ದ ತರಲೆಯನ್ನು ನೆನೆದು ಮುಸಿ ಮುಸಿ ನಗುತ್ತಾ, ಒಟ್ಟಿಗೆ ಊಟ ಮಾಡಿ ಅಲ್ಲಿಂದ ಹೊರಟಾಗ ಅರ್ಧ ದಿನ ಕಳೆದು ಹೋಗಿತ್ತು.
ಇಷ್ಟರಲ್ಲಿ, ಪರಸ್ಪರ ಫೋನ್ ನಂಬರ್ಗಳು ಶೇರ್ ಆಗಿದ್ದವು. ವಾಟ್ಸಪ್ ಗ್ರೂಪ್ ರಚನೆಯಾಗಿ ತಮ್ಮ ಬ್ಯಾಚ್ನವರನ್ನು ಸೇರಿಸುವ ಕೆಲಸವೂ ನಡೆದಿತ್ತು.
ಚಿತ್ರದುರ್ಗ ಬರೀ ಊರಲ್ಲ, ಒಂದು ಶಕ್ತಿ:
ಖ್ಯಾತ ಚಿತ್ರನಟ, ಚಿತ್ರದುರ್ಗ ಮೂಲದ ಎಚ್.ಜಿ.ದತ್ತಾತ್ರೇಯ(ದತ್ತಣ್ಣ) ಜ್ಞಾನ ಭಾರತಿ ಶಾಲೆಯ ಸುವರ್ಣ ಮಹೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಇದನ್ನೂ ಓದಿ: ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ | ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣ
ಚಿತ್ರದುರ್ಗದ ಕುರಿತು ತಮ್ಮ ನೆನಪುಗಳನ್ನು ಬಿಟ್ಟಿಟ್ಟ ದತ್ತಣ್ಣ, ತಾವು ಕೋಟೆಯಲ್ಲಿ ಸುತ್ತಾಡಿದ್ದು, ಗೋಪಾಲಸ್ವಾಮಿ ಹೊಂಡದಲ್ಲಿ ಈಜಿದ್ದು ಹೀಗೆ ಒಂದು ಕ್ಷಣಕ್ಕೆ ತಾವು ಜೀವಿಸಿದ್ದ ಚಿತ್ರದುರ್ಗವನ್ನು ಕಣ್ಮುಂದೆ ತಂದುಕೊಟ್ಟರು.
ಕಳೆದ 50 ವರ್ಷದಲ್ಲಿ ಈ ಸಂಸ್ಥೆ ಸಮಾಜಕ್ಕೆ ಅನೇಕ ಸದೃಢ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ. ಇಲ್ಲಿ ಕಲಿತವರು ದೇಶ, ವಿದೇಶಗಳಲ್ಲಿದ್ದಾರೆ. ವೈದ್ಯರು, ವಕೀಲರು, ನ್ಯಾಯಾಧೀಶರು, ಇಂಜಿನಿಯರ್, ಪೊಲೀಸ್ ಅಧಿಕಾರಿಗಳು ಹೀಗೆ ನಾನಾ ವೃತ್ತಿಗಳಲ್ಲಿ ಸಮಾಜವನ್ನು ಪ್ರಭಾವಿಸುತ್ತಿದ್ದಾರೆ.
| ಡಾ.ಕೆ.ರಾಜೀವಲೋಚನ, ಜ್ಞಾನಭಾರತಿ ವಿದ್ಯಾಮಂದಿರದ ಕಾರ್ಯದರ್ಶಿ
ಈ ವೇಳೆ ಮಾತನಾಡುತ್ತಾ, ಚಿತ್ರದುರ್ಗ ಬರೀ ಒಂದು ಊರಲ್ಲ. ಇದೊಂದು ಶಕ್ತಿ. ನಾವೆಲ್ಲಾ ಮದಕರಿ ನಾಯಕರ ವಂಶಸ್ಥರು. ತರಾಸು. ಹುಲ್ಲೂರು ಶ್ರೀನಿವಾಸ ಜೋಯಿಸರಂತಹ ಅದ್ಬುತ ಬರಹಗಾರರು ಹುಟ್ಟಿದ ಊರು ಇದು. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನಿಸಿದ ಊರು ಚಿತ್ರದುರ್ಗ ಎಂದು ದತ್ತಣ್ಣ ತಮ್ಮ ಶಾಲಾ ದಿನಗಳನ್ನು ಸ್ಮರಿಸಿಕೊಂಡರು.
ಶಿಕ್ಷಣದಿಂದ ಮನುಷ್ಯನ ಅಂತಃಸತ್ವದ ಅನಾವರಣ ಆಗಬೇಕು. ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸಬೇಕು. ಆತ್ಮವಿಶ್ವಾಸ ವೃದ್ಧಿಸಬೇಕು. ವ್ಯಕ್ತಿತ್ವ ವಿಕಸನ ಮಾಡುವಂತಹ ಶಿಬಿರಗಳು ಹೆಚ್ಚಾಗಬೇಕು ಎಂದು ಆಶಿಸಿದರು.
ಇದನ್ನೂ ಓದಿ: ಜಂಗಮಯ್ಯರಿಗೆ ಪುತ್ರೋತ್ಸವ
ದೇಶಕ್ಕೆ, ರಾಜ್ಯಕ್ಕೆ ಅನೇಕರು ಕೊಡುಗೆಗಳನ್ನು ಕೊಟ್ಟಿದ್ದಾರೆ. ನಾವು ಅವರನ್ನು ಮರೆಯುತ್ತಿದ್ದೇವೆ. ಹಾಗಾಗದಂತೆ ನೋಡಿಕೊಳ್ಳುವುದೇ ನಮ್ಮ ಕರ್ತವ್ಯ. ಒಳ್ಳೆಯ ಕೆಲಸ ಮಾಡಿದವರು ಶ್ರೇಷ್ಠರು. ಅವರನ್ನು ಆಗಾಗ ಸ್ಮರಿಸುವುದೇ ನಿಜವಾದ ನಮ್ಮ ಬೆಳವಣಿಗೆ. ಸಮಾಜದಿಂದ ಇಷ್ಟು ದಿನ ಸಾಕಷ್ಟು ಪಡೆದುಕೊಂಡಿದ್ದೇವೆ. ಅದರ ಋಣ ತೀರಿಸುವ ಕೆಲಸ ಆಗಬೇಕು. ಸಮಾಜದ ಋಣ ಸಂದಾಯ ಆಗದಿದ್ದರೆ ಇಡೀ ಜೀವನ ಕೊರಗಬೇಕಾಗುತ್ತದೆ. ಆದಷ್ಟು ಬೇಗ ಅದನ್ನು ಮಾಡಬೇಕು ಎಂದರು.
ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಓಂಕಾರಪ್ಪ, ಹಿಂದಿನ ಅಧ್ಯಕ್ಷರಾಗಿದ್ದ ರಂಗಪ್ಪ, ಪ್ರಾಚಾರ್ಯ ಪ್ರಜ್ವಲ್ ವೇದಿಕೆಯಲ್ಲಿದ್ದರು.
ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಎಂಎಲ್ಸಿ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಉದ್ಯಮಿ ದೀಪಾನಂದ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲೆ ಸಮಾಜದ ಪರಿವರ್ತನಾ ಕೇಂದ್ರ ಆಗಬೇಕು ಎನ್ನುವುದು ನಮ್ಮ ಆಶಯ. ಸಮಾಜದಿಂದ ಪಡೆದುಕೊಂಡ ವಿಧ್ಯೆಯನ್ನು ಸಮಾಜಕ್ಕೆ ಧಾರೆ ಎರೆಯುವ ಕೆಲಸ ಆಗಬೇಕು.
| ಬಸವನಗೌಡ, ರಾಷ್ಟ್ರೋತ್ಥಾನ ಪರಿಷತ್ ರಾಜ್ಯಪಠ್ಯಕ್ರಮ ವಿಭಾಗದ ಸಂಚಾಲಕ.