ಮುಖ್ಯ ಸುದ್ದಿ
SPACIAL ಗಣಪತಿಯ ಜೊತೆಗೆ ನೆನಪಿನ ದೋಣಿಯಲ್ಲಿ ಸಾಗೋಣ ಬನ್ನಿ | ಚಿತ್ರದುರ್ಗದಲ್ಲಿ ಪ್ರತಿಷ್ಠಾಪಿಸಿರುವ ಆಕರ್ಷಕ ಗಣಪತಿಗಳ ಸಂಗಮ ಇಲ್ಲಿ

ಚಿತ್ರದುರ್ಗ ನ್ಯೂಸ್.ಕಾಂ:
ಗಣಪತಿ ಅಂದಾಕ್ಷಣ ಎಲ್ಲರ ಮನಸ್ಸಿನಲ್ಲೂ ಒಂದು ಕ್ಷಣ ಹಲವು ನೆನಪುಗಳು ಹಾದು ಹೋಗುತ್ತವೆ. ಹೀಗೆ ಹಾದು ಹೋಗುವ ಕೆಲ ನೆನಪುಗಳನ್ನು ಮೆಲ್ಲುತ್ತಾ, ಚಿತ್ರದುರ್ಗ ನಗರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಕೆಲವು ವಿಶೇಷ ಗಣಪತಿಗಳನ್ನು ಇಲ್ಲಿ ತೋರಿಸುತ್ತಾ ಹೋಗುತ್ತೇವೆ. ಗಣಪತಿಯನ್ನೂ ಆಸ್ವಾಧಿಸಿ, ಓದುತ್ತಾ ನಿಮ್ಮ ನೆನಪುಗಳನ್ನು ಕಣ್ಣ ಮುಂದೆ ತಂದುಕೊಂಡು ಒಂದು ಕ್ಷಣ ಕಳೆದು ಹೋಗಿಬಿಡಿ..

ಉಜ್ಜಿನಿ ಮಠ ರಸ್ತೆಯಲ್ಲಿರುವ ಶಕ್ತಿ ಗಣಪತಿ.
ಗಣಪತಿ ಅಂದ್ರೆನೇ ಹಿಂಗೆ.. ಪುಟಾಣಿ ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ.
ಎಳೆಯ ವಯಸ್ಸಿನಿಂದಲೂ ಗಣೇಶನ ಬಗ್ಗೆ ಕೇಳಿದ ಕಥೆಗಳು, ಗಣಪನ ಡೊಳ್ಳು ಹೊಟ್ಟೆ, ವಾಹನ ಇಲಿ, ಹೊಟ್ಟೆಗೆ ಬಿಗಿದ ನಾಗರಹಾವು ಹೀಗೆ ಎಲ್ಲವೂ ಆಕರ್ಷಕ. ಅದೇ ರೀತಿ ಗಣೇಶ ಮೂರ್ತಿ ತಯಾರಕರು ಕೂಡಾ ಕ್ರಿಕೇಟ್ ದೇವರು ಸಚಿನ್‍ನಿಂದ ಹಿಡಿದು ಸಾಕ್ಷಾತ್ ಶಿವನವರೆಗೆ ಎಲ್ಲ ರೂಪಗಳಲ್ಲೂ ಗಣಪತಿಯನ್ನು ಸೃಷ್ಟಿಸಿಕೊಡುತ್ತಾರೆ.

ಆನೆಬಾಗಿಲಿನಲ್ಲಿರುವ 66ನೇ ವರ್ಷದ ಪ್ರಸನ್ನ ಗಣಪತಿ.
ಹಳ್ಳಿಗಳಲ್ಲಿ ಪುಟ್ಟ ಮಕ್ಕಳೆಲ್ಲಾ ಸೇರಿ ಪ್ರತಿಷ್ಠಾಪನೆ ಮಾಡುವ ಗಣಪತಿ, ಅಲ್ಲಿರುವ ಹಣ್ಣು, ತಂಬಿಟ್ಟು, ಹೋಳಿಗೆಗಳನ್ನು ಆಗಾಗ ಗಣಪನಿಗೂ ಕಾಣದಂತೆ ಕದ್ದು ತಿನ್ನುವುದು, ರಾತ್ರಿವರೆಗೆ ಹಾಡು ಹಾಕಿ ಹುಚ್ಚೆದ್ದು ಕುಣಿದು ಮರುದಿನ ಬೇಸರದಲ್ಲಿ ಶಾಲೆಗೆ ಹೋಗಿರುವ ಅನುಭವಗಳು ಬಹುಶಃ ಎಲ್ಲರಿಗೂ ಇವೆ.

ಜೋಗಿಮಟ್ಟಿ ರಸ್ತೆಯ ವಿಶ್ವ ಗಣಪತಿ.
ಇಷ್ಟೆಲ್ಲಾ ಯಾಕಂದ್ರೆ ಗಣಪತಿ ಎಲ್ಲರಿಗೂ ದೇವರಷ್ಟೇ ಅಲ್ಲ ಫ್ರೆಂಡ್ ಕೂಡಾ. ಮಕ್ಕಳು ಗಣಪತಿಯನ್ನು ಹೆಚ್ಚು ಇಷ್ಟಪಡುತ್ತಾರೆ. ದೊಡ್ಡವರು ವಿಜ್ಞ ನಿವಾರಕ ಎಂದು ಪೂಜಿಸುತ್ತಾರೆ. ಎಲ್ಲ ಧಾರ್ಮಿಕ ಕಾರ್ಯಗಳಲ್ಲೂ ಈ ವಿನಾಯಕನಿಗೆ ಮೊದಲ ಪೂಜೆ.

ಶೃಂಗೇರಿ ಮಠದ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ದರ್ಬಾರ್ ಗಣಪತಿ.
ಅದರಲ್ಲೂ ಗಣಪತಿಯ ವಿಸರ್ಜನೆಗೆ ಮೊದಲು ಮಾಡುವ ಮೆರವಣಿಗೆಯಂತೂ ಎಲ್ಲರಿಗೂ ಇಷ್ಟ. ದೊಡ್ಡ ದೊಡ್ಡ ಗಣೇಶೋತ್ಸವಗಳಲ್ಲಿ ಡಿಜೆ ಹಾಕಿ ಯುವಕ, ಯುವತಿಯರು ಹಾಕುವ ಸ್ಟೆಪ್ಸ್ ಮತ್ತೊಂದು ವರ್ಷದ ಗಣೇಶನ ಹಬ್ಬದವರೆಗೆ ನೆನಪಿರುತ್ತವೆ.

ರಂಗಯ್ಯನ ಬಾಗಲು ಬಳಿ ಪ್ರತಿಷ್ಠಾಪಿಸಿರುವ ದುರ್ಗದ ರಾಜಾ ಗಣಪತಿ.
ಇನ್ನೂ ಗಣಪನನ್ನು ನೀರಿಗೆ ಬಿಡುವ ಮಜವೇ ಬೇರೆ. ದೊಡ್ಡವರು ಅದೊಂದು ಶಾಸ್ತ್ರ ಸಂಪ್ರದಾಯ ಎಂಬಂತೆ ಪಾಲಿಸಿದರೆ, ಇಷ್ಟು ಬೇಗ ಗಣಪನನ್ನು ನೀರಿಗೆ ಬಿಡಬೇಕಲ್ಲ ಎಂಬ ಬೇಸರ ಮಕ್ಕಳಲ್ಲಿರುತ್ತದೆ. ಗಣಪತಿ ಮೂರು ದಿನ, ಐದು ದಿನ, ಏಳು, ಒಂಬತ್ತು, ಹದಿಮೂರು, ಹದಿನೈದು, 21 ದಿನಗಳವರೆಗೆ ಇದ್ದು ಆನಂತರ ವಿಸರ್ಜನೆ ಮಾಡುವುದು ಆಯಾ ಸಂಘಟಕರ ನಿರ್ಧಾರ. ಎಷ್ಟು ದಿನ ಗಣೇಶ ನಮ್ಮೂರು ಮಂಟಪದಲ್ಲಿರುತ್ತಾನೋ ಅಷ್ಟೂ ದಿನ ಹಬ್ಬವೇ.

ಜೋಗಿಮಟ್ಟಿ ರಸ್ತೆಯಲ್ಲಿರುವ ಶಿವ ಗಣಪತಿ.
ಮಕ್ಕಳು ಬೆಳಗ್ಗೆ ಎದ್ದು ಶಾಲೆಯ ಪಾಟಿಚೀಲ ಹಿಡಿದು ಸೀದಾ ಹೋಗುವುದು ಗಣಪತಿ ಹತ್ತಿರ. ಮಧ್ಯಾಹ್ನದ ಬಿಡುವಿಗೆ ಬರುವುದು ಗಣಪತಿ ಪೆಂಡಾಲ್ ಬಳಿಗೆ, ಸಂಜೆಯೂ ಗಣಪತಿ, ಈ ಗಣೇಶನ ಹಬ್ಬದಲ್ಲಿ ಮನೆಯವರು ಮಕ್ಕಳನ್ನು ಹಿಡಿದು ತರುವಲ್ಲಿ ಸಾಕುಸಾಕಾಗಿ ಹೋಗುತ್ತಾರೆ.

ಸ್ಟೇಡಿಯಂ ರಸ್ತೆಯಲ್ಲಿರುವ ಶ್ರೀ ಕೃಷ್ಣ ಗಣಪತಿ.
ವಿಸರ್ಜನೆ ಮಾಡಿದ ಮೇಲೆ ನೀಡುವ ಪ್ರಸಾದ ಅಥವಾ ಫಲಾಹಾರವಂತೂ ಇನ್ನೂ ಸೂಪರ್. ಹೀಗೆ ಬಂದು ಹೋಗುವ ಗಣಪ ಹಲವು ಬಾರಿ ಅವಾಂತರಗಳನ್ನು ಸೃಷ್ಟಿಸಿ ನಿಂತು ನೋಡಿ ನಕ್ಕಿದ್ದಾನೆ. ಗಣೇಶನಿಗಾಗಿ ಗುಂಪು, ಗಲಾಟೆ ಆಗಿದ್ದೂ ಉಂಟು. ಎಲ್ಲವೂ ಮನುಷ್ಯ ಸಹಜವಾಗಿ ದೇವರಿಗಾಗಿ ನಡೆಯುವ ಫೈಟು ಅಷ್ಟೇ.
ಇದನ್ನೂ ಓದಿ: ಭೂಲೋಕಕ್ಕೆ ಪಾದ ಸ್ಪರ್ಶಿಸಿದ ಗೌರಿಪುತ್ರ: ಸುದರ್ಶನ ಚಕ್ರ, ಪಾಂಚಜನ್ಯ ಹಿಡಿದು ಬಂದ ಹಿಂದೂ ಮಹಾಗಣಪತಿ
