ಕ್ರೈಂ ಸುದ್ದಿ
ಭೀಮಸಮುದ್ರದ ಅಡಿಕೆ ವ್ಯಾಪಾರಿ ಕಾರಿನಿಂದ 1 ಕೋಟಿ ದೋಚಿದ್ದವರ ಸೆರೆ | ಕಾರು ಚಾಲಕ ಸೇರಿ ನಾಲ್ವರ ಬಂಧನ

ಚಿತ್ರದುರ್ಗ ನ್ಯೂಸ್.ಕಾಂ: ಭೀಮಸಮುದ್ರ ಮೂಲದ ಅಡಿಕೆ ವರ್ತಕ ಉಮೇಶ್ ಅವರಿಗೆ ಸೇರಿದ 1 ಕೋಟಿ ರೂ. ಹಣ ಅಕ್ಟೋಬರ್ 7 ರಂದು ಕಳ್ಳತನವಾಗಿತ್ತು.
ಈ ಸಂಬಂಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಉಮೇಶ್ ತಮ್ಮ ಕಾರು ಚಾಲಕ ಪಿ.ಬಿ.ಸ್ವಾಮಿ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಅ.21ರಂದು ದೂರು ದಾಖಲಿಸಿದ್ದರು.
ಘಟನೆ ಸಂಬಂಧ ಅಖಾಡಕ್ಕಿಳಿದ ಪೊಲೀಸರು, ಹತ್ತೇ ದಿನಗಳಲ್ಲಿ ಉಮೇಶ್ ಅವರ ಕಾರು ಚಾಲಕ ಸ್ವಾಮಿ ಸೇರಿದಂತೆ ನಾಲ್ವರನ್ನು ಬಂಧಿಸಿ, ಬಂಧಿತರಿಂದ 90.19 ಲಕ್ಷ ರೂ. ನಗದು, 6.49 ಲಕ್ಷ ರೂ. ಮೌಲ್ಯದ 2 ಆಪಲ್ ಮೊಬೈಲ್, ಫಾಸಿಲ್ ಕಂಒನಿಯ ಎರಡು ವಾಚ್‍ಗಳು, ಡಿಜಿಟಲ್ ವಾಚ್, 62 ಗ್ರಾಂ ಬಂಗಾರ, ಎರಡು ಕಾರು ಹಾಗೂ ಒಂದು ಬೈಕ್ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ 8-10 ವರ್ಷದಿಂದ ಉಮೇಶ್ ಜತೆಗಿದ್ದ ಹೊಳಲ್ಕೆರೆ ತಾಲೂಕಿನ ತಾಳ್ಯದ ಪಿ.ಬಿ.ಸ್ವಾಮಿ(ಕಾರು ಚಾಲಕ), ಸ್ನೇಹಿತರಾದ ಮಹಾದೇವಪುರ ನಿವಾಸ ಎನ್.ಎಂ.ಅನುಪಮಾ, ಪವನ್ ಹಾಗೂ ಕಾರ್ತಿಕ್ ಬಂಧಿತರು.
ಹೇಗೆ ನಡೆದಿತ್ತು ಒಂದು ಕೋಟಿಯ ಕಳ್ಳತನ:
ಅಡಿಕೆ ವ್ಯಾಪಾರಕ್ಕಾಗಿ ಕಾರಿನ ಡಿಕ್ಕಿಯಲ್ಲಿ 1 ಕೋಟಿ ರೂ. ನಗದು ಹಣ ಇಟ್ಟುಕೊಂಡು ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ವರ್ತಕ ಉಮೇಶ್ ಚಿತ್ರದುರ್ಗ, ಶಿರಾ. ತುಮಕೂರು ಭಾಗದಲ್ಲಿ ಓಡಾಡಿದ್ದರು. ಚಾಲಕ ಸ್ವಾಮಿ ಜತೆಗಿದ್ದ.
ಎಲ್ಲಿಯೂ ಅಡಕೆ ಸಿಗದ ಕಾರಣಕ್ಕೆ ಬೆಂಗಳೂರಿಗೆ ಹೋಗಿ ಗಾಂಧಿ ನಗರದಲ್ಲಿ ಊಟ ಮಾಡಿ, ಚಂದ್ರಾ ಲೇಔಟ್‍ನ ಪಿಜಿಯಲ್ಲಿದ್ದ ಮಗಳನ್ನು ಮಾತನಾಡಿಸಿ ವಾಪಾಸು ಬಂದಿದ್ದಾರೆ. ಮಾರ್ಗ ಮಧ್ಯೆ ದಾಬಸ್‍ಪೇಟೆ ಬಳಿ ಕಾಫೀ ಕುಡಿದಿದ್ದಾರೆ. ಈ ವೇಳೆ ಕಾರಿನ ಡಿಕ್ಕಿ ತೆರೆದು ನೋಡಿದಾಗ ಹಣ ಇರಲಿಲ್ಲ. ಈ ಬಗ್ಗೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಯುವ ಜೋಡಿ | ರಕ್ಷಣೆ ಕೋರಿ ಎಸ್ಪಿಗೆ ಮನವಿ
ಉಮೇಶ್ ದೊಡ್ಡ ಮಟ್ಟದ ಅಡಿಕೆ ವ್ಯಾಪಾರಿಯಾಗಿದ್ದು, ಕಾರಿನಲ್ಲಿ ಹಣ ಇಟ್ಟುಕೊಂಡು ಓಡಾಡುವುದನ್ನು ಚಾಲಕನಾಗಿದ್ದ ಸ್ವಾಮಿ ಗಮನಿಸಿ ಸ್ನೇಹಿತೆ ಅನುಪಮಾಗೆ ತಿಳಿಸಿದ್ದಾನೆ. ಹಣ ಕಳ್ಳತನ ಮಾಡಿದರೆ ಸಾಲ ತೀರಿಸಿಕೊಂಡು ಶ್ರೀಮಂತರಾಗಬಹುದು ಎಂದು ಮಾತನಾಡಿಕೊಂಡಿದ್ದಾರೆ.
ಸ್ನೇಹಿತರಾಗಿದ್ದ ಅನುಪಮಾ ಚಿತ್ರದುರ್ಗ ಮೂಲದವರು, ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಚಿತ್ರದುರ್ಗದಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ಕಾರ್ತಿಕ್ ನಷ್ಟವಾಗಿ ಅಂಗಡಿ ಮುಚ್ಚಿದ್ದ, ಜೊತೆಗೆ ಹಾಸನದ ಪವನ್ ಕೂಡಾ ಸೇರಿಕೊಂಡಿದ್ದಾನೆ.
ಈ ನಡುವೆ ಅನುಪಮಾ ಕೆಲ ದಿನಗಳ ಕಾಲ ಸ್ವಾಮಿ ಕಾರನ್ನು ತೆಗೆದುಕೊಂಡು ಓಡಾಡಿದ್ದಾರೆ. ಈ ವೇಳೆ ಕಾರಿಗೆ ನಕಲಿ ಕೀ ಮಾಡಿಸಿಕೊಂಡು, ಸ್ಟೇರಿಂಗ್ ಕೆಳಭಾಗದಲ್ಲಿ ಜಿಪಿಎಸ್ ಅಳವಡಿಸಿದ್ದಾರೆ.
ಅ.7ರಂದು ಕೋಟಿ ಹಣದೊಂದಿಗೆ ಬೆಂಗಳೂರಿನ ಕಡೆಗೆ ಬರುತ್ತಿರುವ ಬಗ್ಗೆ ಸ್ವಾಮಿಯಿಂದ ಮಾಹಿತಿ ಪಡೆದುಕೊಂಡು, ಹಣ ದೋಚಲು ಸಂಚು ರೂಪಿಸಿದ್ದಾರೆ.
ದಾಬಸ್‍ಪೇಟೆ ಬಳಿ ಟೀ ಕುಡಿಯಲು ಕಾರು ನಿಲ್ಲಿಸಿದ್ದ ವೇಳೆ ಬೈಕಿನಲ್ಲಿ ಬಂದ ಪವನ್ ಮತ್ತು ಕಾರ್ತಿಕ್ ಕಾರಿನ ಹಿಂಭಾಗದ ಡೋರ್ ತೆಗೆದು ಹಣದ ಬ್ಯಾಗ್ ಕಳುವು ಮಾಡಿದ್ದಾರೆ. ಕಳ್ಳತನ ಮಾಡಿದ ಹಣದಲ್ಲಿ ಕೆಲ ಅನಾಥಾಶ್ರಮಗಳಿಗೆ ದಾನ ಮಾಡಿರುವುದಾಗಿ ತನಿಖೆ ವೇಳೆ ಹೇಳಿಕೊಂಡಿದ್ದಾರೆ.
ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್ ನೇತೃತ್ವದಲ್ಲಿ ಚಿಕ್ಕಪೇಟೆ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ಎಂ.ರಮೇಶ್, ಇನ್ಸ್‍ಪೆಕ್ಟರ್ ಬಿ.ಮಾರುತಿ ಮತ್ತು ಅಧಿಕಾರಿ, ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
