ಮುಖ್ಯ ಸುದ್ದಿ
ಹೊಸದುರ್ಗ, ಹೊಳಲ್ಕೆರೆಯಲ್ಲೂ ಬೋರ್‌ವೆಲ್ ಕೊರೆಯಲು ದರ ನಿಗದಿ | ಜಿಎಸ್‌ಟಿ ಬಿಲ್ ಕೊಡಲು ತಾಕೀತು

CHITRADURGA NEWS | 23 MARCH 2024
ಚಿತ್ರದುರ್ಗ: ಹಿರಿಯೂರಿನಲ್ಲಿ ಕೊಳವೆ ಬಾವಿ ಕೊರೆಯಲು ದರ ನಿಗದಿ ಮಾಡುತ್ತಿದ್ದಂತೆ ಇದೀಗ ಹೊಸದುರ್ಗ, ಹೊಳಲ್ಕೆರೆಯಲ್ಲೂ ಸಭೆ ನಡೆ ದರ ನಿಗದಿಗೊಳಿಸಲಾಗಿದೆ. ಜಿಎಸ್‌ಟಿ ಬಿಲ್ ಕೊಡುವಂತೆ ಬೋರ್‌ವೆಲ್ ಏಜೆನ್ಸಿಯವರಿಗೆ ಅಧಿಕಾರಿಗಳು ತಾಕೀತು ಮಾಡಿದರು.
ಹೊಳಲ್ಕೆರೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್, ರೈತ ಸಂಘದ ಸದಸ್ಯರು, ಕೊಳವೆ ಬಾವಿ ಲಾರಿ ಮಾಲೀಕರು ಹಾಗೂ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಯಿತು. ಈ ವೇಳೆ ಕೊಳವೆ ಬಾವಿ ಕೊರೆಯಲು ದರ ನಿಗದಿ ಸೇರಿದಂತೆ ನಿಯಮಗಳನ್ನು ಪಾಲಿಸಲು ಮೇಲುಸ್ತುವಾರಿ ಸಮಿತಿ ರಚಿಸಲಾಯಿತು.
ಕ್ಲಿಕ್ ಮಾಡಿ ಓದಿ: ಉಚಿತ ಕಂಪ್ಯೂಟರ್ ತರಬೇತಿ | ಬೇಸಿಗೆ ಶಿಬಿರ
ತಹಶೀಲ್ದಾರ್ ಬೀಬಿ ಫಾತಿಮಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕುಮಾರ ನಾಯ್ಕ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೀಲಕಂಠಪ್ಪ ಹಾಗೂ ರೈತ ಸಂಘಗಳ ಪದಾಧಿಕಾರಿಗಳನ್ನು ಸಮಿತಿ ಸಭೆಯ ಸದಸ್ಯರನ್ನಾಗಿ ನೇಮಿಸಲಾಯಿತು.
ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಈ ವರ್ಷ ತೀವ್ರ ಬರಗಾಲದಿಂದ ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತವಾಗಿದೆ. ಜಿಲ್ಲೆಯಲ್ಲಿಯೇ ಹೆಚ್ಚು ಅಡಿಕೆ ತೋಟಗಳು ನಮ್ಮ ತಾಲ್ಲೂಕಿನಲ್ಲಿದ್ದು, ಕೊಳವೆ ಬಾವಿ ನೀರನ್ನೇ ಆಶ್ರಯಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೊಳವೆ ಬಾವಿ ಮಾಲೀಕರು ಯಾವುದೇ ಮಾನದಂಡ ಇಲ್ಲದೆ ದರ ಹೆಚ್ಚಳ ಮಾಡಿದ್ದಾರೆ. ಆದ್ದರಿಂದ ಏಕರೂಪದ ದರ ನಿಗದಿಯಾಗಬೇಕು. ಈಗ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ಹಣ ಪಡೆದರೆ ಸಮಿತಿಗೆ ದೂರು ನೀಡಬೇಕು ಎಂದು ಒತ್ತಾಯಿಸಿದರು.
300 ಅಡಿವರೆಗೆ ₹105, 300 ರಿಂದ 500 ಅಡಿವರೆಗೆ ₹110, 500 ಅಡಿಗಳ ನಂತರ ₹120 ದರ ನಿಗದಿ ಮಾಡಲಾಯಿತು. ರೈತ ಸಂಘದ ಅಪ್ಪರಸನಹಳ್ಳಿ ಬಸವರಾಜಪ್ಪ, ಅಜಯ್, ಸದಸ್ಯರು, ಕೊಳವೆ ಬಾವಿ ಮಾಲೀಕರು ಭಾಗವಹಿಸಿದ್ದರು.
ಹೊರೆಯಾಗದಂತೆ ದರ ನಿಗದಿ: ಹೊಸದುರ್ಗ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್, ‘ಪ್ರತಿ ಅಡಿಗೆ ₹ 95ರಂತೆ ದರ ನಿಗದಿಪಡಿಸಿ, ಸಂಬಂಧಪಟ್ಟ ಇಲಾಖೆಯಿಂದ ನೀರು ಇರುವ ಜಾಗ ಗುರುತಿಸಿ ಕೊಳವೆಬಾವಿಗಳನ್ನು ಕೊರೆಯಿಸಿ’ ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ರೈತರು, ಕೊಳವೆಬಾವಿ ಕೊರೆಯಲು ತಿಂಗಳ ಹಿಂದೆ ಪ್ರತೀ ಅಡಿಗೆ ₹95 ದರ ಇತ್ತು. ಈಗ ₹120 ರಿಂದ ₹130ಕ್ಕೆ ಹೆಚ್ಚಿಸಲಾಗಿದೆ. ನೀರು ಬಂದ ನಂತರ ಗಂಟೆಗೆ ₹15,000 ಪಡೆದಿದ್ದಾರೆ. ರೈತರು ನೀಡುವ ಕೇಸಿಂಗ್ ಪೈಪ್ ಹಾಕುವುದಿಲ್ಲ. ₹2,500 ಇರುವ ಕೇಸಿಂಗ್ ಪೈಪ್‌ಗೆ ₹5,000 ಬಿಲ್ ಮಾಡಿ, ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.
ಕೊಳವೆಬಾವಿ ಕೊರೆದವರು ರೈತರಿಗೆ ಜಿಎಸ್‌ಟಿ ಬಿಲ್ ನೀಡಬೇಕು. ಕೊಳವೆಬಾವಿ ವಿಫಲವಾದರೆ ವ್ಯವಸ್ಥಿತವಾಗಿ ಮುಚ್ಚಬೇಕು. ಸಮೀಪದ ಸ್ಥಳಗಳಿಗೆ ಹೋದಾಗ ಸಾರಿಗೆ ವೆಚ್ಚವಾಗಿ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ. ಕೊಳವೆಬಾವಿ ಕೊರೆಯುವವರು ಅಧಿಕ ಹಣ ವಸೂಲಿ ಮಾಡಲು ಬಂದರೆ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಭರವಸೆ ನೀಡಿದರು.
ಕೊಳವೆಬಾವಿ ಕೊರೆಯಿಸಲು ಬರುವ ರೈತರು ಅಧಿಕ ಹಣ ನೀಡಿ ಒತ್ತಾಯ ಮಾಡುತ್ತಾರೆ. ರೈತರಲ್ಲೇ ಸ್ಪರ್ಧೆಯಿದೆ. ರೈತರಿಗೆ ಜಿಎಸ್‌ಟಿ ಬಿಲ್ ನೀಡುವ ಸೌಲಭ್ಯವಿಲ್ಲ. ಯಾವ ರೈತರೂ ಜಿಎಸ್‌ಟಿ ಕಟ್ಟಲು ತಯಾರಿಲ್ಲ ಎಂದು ದೀಪಾ ಬೋರ್‌ವೆಲ್ ಏಜೆನ್ಸಿಯ ಎಂ.ಪಿ. ರಂಗೇಶ್ ಸಭೆಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ತಿರುಪತಿ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್ ಈಶ, ರೈತ ಸಂಘದ ಅಧ್ಯಕ್ಷ ಬೋರೇಶ್, ಕಾರ್ಯದರ್ಶಿ ಶಶಿಧರ್, ಹಿರಿಯ ತೋಟಗಾರಿಕೆ ನಿರ್ದೇಶಕ ವೆಂಕಟೇಶ್ ಮೂರ್ತಿ, ಪಶು ವೈದ್ಯಾಧಿಕಾರಿ ಕಿರಣ್, ರೈತ ಮುಖಂಡ ಆರ್ ಕರಿಯಪ್ಪ ಇದ್ದರು.
