ಕ್ರೈಂ ಸುದ್ದಿ
ಗೋವಿಂದ ಕಾರಜೋಳ ಸುದ್ದಿಗೋಷ್ಠಿ ವೇಳೆ ಗಲಾಟೆ ಪ್ರಕರಣ | ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಚಿತ್ರದುರ್ಗ ನ್ಯೂಸ್.ಕಾಂ: ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ವೇಳೆ ಸಭಾಂಗಣಕ್ಕೆ ಪ್ರವೇಶಿಸಿ ವಾಗ್ವಾದ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಲಿತ ಮುಖಂಡರಾದ ಹನುಮಂತಪ್ಪ ದುರ್ಗ, ದೇವರಾಜು, ಗಂಗಾಧರ್, ಜೆ.ಜೆ.ಹಟ್ಟಿ ಸತೀಶ್, ಮುನಿಯಪ್ಪ ಹಾಗೂ ಇತರೆ 8-10 ಮಂದಿ ವಿರುದ್ಧ ಗಲಾಟೆ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ಮಾಜಿ ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಗಲಾಟೆ
ಬೆಳಗ್ಗೆ 11.30ಕ್ಕೆ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿಯ ಸಭಾಂಗಣಕ್ಕೆ ಏಕಾಏಕಿ ಆಗಮಿಸಿದ ಎಂಟತ್ತು ಮಂದಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ದಲಿತರಿಗೆ ಅನ್ಯಾಯವಾಗಿದೆ. ಸಾಲ, ಸಬ್ಸೀಡಿ ನೀಡುವ ಯೋಜನೆಯಲ್ಲಿ ಕಡಿತವಾಗಿದೆ ಎಂದು ಕಾರಜೋಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವೇಳೆ ಸಿಟ್ಟಿಗೆದ್ದ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸುದ್ದಿಗೋಷ್ಠಿಯೊಳಗೆ ಬಂದು ಗೂಂಡಾಗಿರಿ ಮಾಡುತ್ತಿದ್ದೀರಾ, ನಾನು ಹೊರಗೆ ಬಂದಾಗ ಮಾತನಾಡಿ, ಇಲ್ಲಿ ಯಾಕೆ ಕೂಗಾಡುತ್ತಿದ್ದೀರಿ, ಮೊದಲು ಹೊರಗೆ ನಡೆಯಿರಿ ಎಂದರು, ಈ ವೇಳೆ ವಾಗ್ವಾದ ನಡೆದಿತ್ತು.
ನಾನು ಕಳೆದ 40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಎಂದೂ ಈ ರೀತಿಯ ವರ್ತನೆ ನೋಡಿಲ್ಲ. ಇದು ಗೂಂಡಾರಾಜ್ಯ ಆಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಹರಿಸಬೇಕು. ಗಲಾಟೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳದಿಂದಲೇ ಪೂರ್ವ ವಲಯ ಐಜಿಪಿ ತ್ಯಾಗರಾಜ್ ಅವರಿಗೆ ಕರೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಗೂಂಡಾಗಳು ದಾಂಧಲೆ ಮಾಡಿದ್ದಾರೆ. ಕೂಡಲೇ ಇವರನ್ನು ಬಂಧಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂರುತ್ತೇನೆ ಎಂದು ತಿಳಿಸಿದರು.
ತಕ್ಷಣ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ನಗರಠಾಣೆ ಸಿಪಿಐ ತಿಪ್ಪೇಸ್ವಾಮಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಗಮಿಸಿ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಆರೆಸ್ಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರಾಗಿ ಚಿತ್ರದುರ್ಗ ಮೂಲದ ಜಿ.ಎಸ್.ಉಮಾಪತಿ ಆಯ್ಕೆ
ಸುದ್ದಿಗೋಷ್ಠಿ ವೇಳೆ ನಡೆದ ಘಟನೆ ಕುರಿತಂತೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅಂಗರಕ್ಷಕ(ಗನ್‍ಮ್ಯಾನ್) ಶ್ರೀಶೈಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ 4 ವರ್ಷಗಳಿಂದ ಗೋವಿಂದ ಕಾರಜೋಳ ಅವರ ಅಂಗರಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಸುದ್ದಿಗೋಷ್ಠಿ ನಡೆಸುವಾಗ ಏಕಾಏಕಿ ಆಗಮಿಸಿ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡಬೇಡಿ ಎಂದು ಮಧ್ಯೆ ಪ್ರವೇಶಿಸಿದ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹನುಮಂತಪ್ಪ ದುರ್ಗ, ದೇವರಾಜ್, ಗಂಗಾಧರ್, ಜೆ.ಜೆಹಟ್ಟಿ ಸತೀಶ್, ಮುನಿಯಪ್ಪ ಸೇರಿದಂತೆ ಎಂಟತ್ತು ಜನರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದಾರೆ.