ಮುಖ್ಯ ಸುದ್ದಿ
ಬೆಳೆ ವಿಮೆ ಕಂಪನಿ ವಿರುದ್ಧ ದೂರು ದಾಖಲು | ಸಭೆಗೆ ಅಧಿಕಾರಿಗಳು ಚಕ್ಕರ್ | ರೈತರ ಆಕ್ರೋಶ |
CHITRADURGA NEWS | 2 APRIL 2024
ಚಿತ್ರದುರ್ಗ: ಬರದ ಕಾರಣ ರೈತರು ತೀವ್ರ ಸಂಷ್ಟಕ್ಕೆ ಸಿಲುಕಿದ್ದರೆ ಬೆಳೆ ವಿಮೆ ಅಧಿಕಾರಿಗಳು ಮಾತ್ರ ನಾನಾ ಕಾರಣ ನೀಡುತ್ತಾ ರೈತರ ಸಭೆಗೆ ಗೈರಾಗುತ್ತಿದ್ದಾರೆ. ಹಿರಿಯೂರು ನಗರದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರೊಂದಿಗಿನ ಸಭೆಗೆ ಸತತ ನಾಲ್ಕನೇ ಬಾರಿ ವಿಮಾ ಕಂಪನಿ ಅಧಿಕಾರಿಗಳು ಬಾರದೇ ಇದ್ದುದಕ್ಕೆ ರೈತ ಮುಖಂಡರು ವಾಗ್ದಾಳಿ ನಡೆಸಿದರು.
ಬೆಳೆ ವಿಮೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಏರ್ಪಡಿಸುವ ಸಭೆಗಳಿಗೆ ವಿಮಾ ಕಂಪನಿ ಅಧಿಕಾರಿಗಳು ಗೈರಾಗುತ್ತಿರುವುದಕ್ಕೆ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕ್ಲಿಕ್ ಮಾಡಿ ಓದಿ: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ
2022–23ನೇ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿದ್ದವು. ವಿಮಾ ಕಂಪನಿಯವರು ಶೇ 100ರಷ್ಟು ವಿಮಾ ಪರಿಹಾರ ನೀಡಬೇಕಿತ್ತು. ಸಭೆಗೆ ಬಂದರೆ ರೈತರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಸತ್ಯ ಹೊರಗೆ ಬರುತ್ತದೆ. ಸುಮ್ಮನೆ ಮೈಮೇಲೆ ತೊಂದರೆ ಎಳೆದುಕೊಳ್ಳುವುದು ಬೇಡ ಎಂದು ಕಳ್ಳಾಟ ಆಡುತ್ತಿದ್ದಾರೆ. ಇಂತಹ ಕಳ್ಳಾಟಕ್ಕೆ ಕಡಿವಾಣ ಹಾಕದೇ ಬಿಡುವುದಿಲ್ಲ. ವಾರದ ಒಳಗೆ ವಿಮಾ ಕಂಪನಿಯವರನ್ನು ಕರೆಯಿಸಿ ಜಿಲ್ಲಾ ತೋಟಗಾರಿಕಾ ಇಲಾಖೆಯಲ್ಲಿ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
2022–23ನೇ ಸಾಲಿನಲ್ಲಿ ಬೆಳೆ ವಿಮೆ ಬಾಬ್ತು ಹಣ ತುಂಬಿರುವ ರೈತರಿಗೆ ವಿಮೆ ಪರಿಹಾರ ಸಮರ್ಪಕವಾಗಿ ಬಿಡುಗಡೆ ಆಗಿಲ್ಲ. ಏಕೆ ಹಣ ಕೊಡುತ್ತಿಲ್ಲ ಎಂಬ ಬಗ್ಗೆ ಸಕಾರಣ ಇರುವ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಬೇಡಿಕೆ.
ವಿಮಾ ಕಂಪನಿಯವರಲ್ಲಿ ಇಷ್ಟು ಸಣ್ಣ ಮಾಹಿತಿ ನೀಡುವ ತಾಂತ್ರಿಕತೆ ಇಲ್ಲವೇ? ಅಥವಾ ಬೆಳೆವಿಮೆ ಯೋಜನೆಯನ್ನು ಮೇಯುವ ಹೊಲವನ್ನಾಗಿ ಮಾಡಿಕೊಂಡಿದ್ದಾರೆಯೇ? ವಿಮಾ ಕಂಪನಿಯ ಪ್ರತಿನಿಧಿಗಳನ್ನು ಅಗತ್ಯ ಮಾಹಿತಿಯೊಂದಿಗೆ ಕಳಿಸುವಂತೆ ತೋಟಗಾರಿಕೆ ಸಹಾಯಕ ನಿರ್ದೇಶಕರು ಪತ್ರ ಬರೆದರೂ ಸಭೆಗೆ ಬರದಿರುವುದು ಕಂಪನಿಯ ಲೂಟಿ ಯೋಜನೆಗೆ ನಿದರ್ಶನವಾಗಿದೆ ಎಂದು ರೈತರು ಆರೋಪಿಸಿದರು.
ಕ್ಲಿಕ್ ಮಾಡಿ ಓದಿ: ಅಖಾಡಕ್ಕೆ ರಾಜಾಹುಲಿ ಎಂಟ್ರಿ | ಶಮನವಾಯ್ತು ಚಿತ್ರದುರ್ಗ ಬಿಜೆಪಿ ಬಂಡಾಯ
ಜಿಲ್ಲೆಯ ಎಲ್ಲ ತಾಲ್ಲೂಕುಗಳ ರೈತರನ್ನು ಸಭೆಗೆ ಆಹ್ವಾನಿಸಬೇಕು. ಇಲ್ಲವಾದಲ್ಲಿ ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ವಿಮೆ ಹಣ ಕಟ್ಟಿರುವ ಆರೂ ತಾಲ್ಲೂಕಿನ ರೈತರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ. ವಕೀಲರ ಸಲಹೆ ಪಡೆದು ನ್ಯಾಯಾಲಯದಲ್ಲಿ ಅಧಿಕಾರಿಗಳು ಮತ್ತು ಕಂಪನಿಯವರ ವಿರುದ್ಧ ಮೊಕದ್ದಮೆ ದಾಖಲಿಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್, ಅಧಿಕಾರಿಗಳಾದ ಪೂಜಿತಾ, ಪ್ರಸನ್ನ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ತಿಮ್ಮಾರೆಡ್ಡಿ ಭಾಗವಹಿಸಿದ್ದರು.