Connect with us

    ದೇವರ ಎತ್ತುಗಳ‌ ನಿರ್ವಹಣೆಗೆ ಟ್ರಸ್ಟ್ ರಚಿಸಲು ಪ್ರೇರೇಪಿಸಿ | ADC ಕುಮಾರಸ್ವಾಮಿ

    ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆ

    ಮುಖ್ಯ ಸುದ್ದಿ

    ದೇವರ ಎತ್ತುಗಳ‌ ನಿರ್ವಹಣೆಗೆ ಟ್ರಸ್ಟ್ ರಚಿಸಲು ಪ್ರೇರೇಪಿಸಿ | ADC ಕುಮಾರಸ್ವಾಮಿ

    CHITRADURGA NEWS | 15 JUNE 2024

    ಚಿತ್ರದುರ್ಗ: ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ದೇವರ ಎತ್ತುಗಳು ಹೆಚ್ಚಾಗಿವೆ. ಈ ಜಾನುವಾರುಗಳ ನಿರ್ವಹಣೆಗೆ ಟ್ರಸ್ಟ್ ರಚನೆ ಮಾಡಲು ಪ್ರೇರೇಪಿಸುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.

    ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಮಗ ಪೊಲೀಸ್ ವಶಕ್ಕೆ | ತಂದೆ ಲೋ ಬಿಪಿಯಿಂದ ಸಾವು

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ, ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ದೇವರ ಎತ್ತುಗಳ ಗೋಶಾಲೆಗಳಲ್ಲಿ ಇರದ ಕಾರಣ, ಬರಗಾಲದ ಸಂದರ್ಭದಲ್ಲಿ ಇವುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಅನುದಾನ ಒದಗಿಸಲು ಬರುವುದಿಲ್ಲ. ಇದರ ಬದಲು ಗ್ರಾಮಸ್ಥರು 50ಕ್ಕಿಂತಲೂ ಹೆಚ್ಚಿನ ದೇವರ ಎತ್ತುಗಳನ್ನು ಒಳಗೊಂಡತೆ ಟ್ರಸ್ಟ್ ರಚಿಸಿ, ನಿರ್ವಹಣೆ ಹೊಣೆ ವಹಿಸಿಕೊಂಡರೆ, ಸರ್ಕಾರದಿಂದ ಪ್ರತಿ ಗೋವಿಗೂ ವಾರ್ಷಿಕ ನಿರ್ವಹಣೆ ವೆಚ್ಚವಾಗಿ ರೂ.11,000ಗಳ ಅನುದಾನ ಲಭಿಸಲಿದೆ. ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಹಶೀಲ್ದಾರಿಗೆ ಈ ಕುರಿತು ಸೂಚನೆ ನೀಡುತ್ತೇನೆ. ಪಶು ಇಲಾಖೆ ಅಧಿಕಾರಿಗಳು ಟ್ರಸ್ಟ್ ರಚನೆ ಪ್ರೇರೇಪಣಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.

    ಇದನ್ನೂ ಓದಿ: 30 ಸಾವಿರದವರೆಗೆ ಉಚಿತ ಚಿಕಿತ್ಸೆ | ಹೆದ್ದಾರಿ ಪ್ರಯಾಣಿಕರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ನೆರವು

    ಅಕ್ರಮ ಪ್ರಾಣಿ ವಧೆಗೆ ಕಡಿವಾಣ ಹಾಕಿ: ಜೂನ್ 17 ರಂದು ಬಕ್ರೀದ್ ಹಬ್ಬದ ಆಚರಣೆ ಇದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಒಂಟೆ ಹಾಗೂ ಗೋವುಗಳನ್ನು ವಧೆ ಮಾಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ನಗರ ಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಪ್ರಾಣಿ ದಯಾ ಸಂಘದಿಂದ, ಪ್ರಾಣಿಗಳ ಅಕ್ರಮ ವಧೆ ಕುರಿತು ದೂರ ಕೇಳಿಬಂದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ನಗರ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳಿಗೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಕ್ರಮವಾಗಿ ಪ್ರಾಣಿ ವಧೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

    ಬಕ್ರಿದ್ ಅಂಗವಾಗಿ 13 ವರ್ಷ ದಾಟಿದ ಪ್ರಾಮಾಣೀಕರಿಸಿದ ಎಮ್ಮೆ ಹಾಗೂ ಕೋಣಗಳನ್ನು ಮಾತ್ರ ವಧಿಸಬಹುದಾಗಿದೆ. ಗೋವು ಹಾಗೂ ಒಂಟೆ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಉಳಿದಂತೆ ಕುರಿ,ಮೇಕೆಗಳ ವಧೆಗೆ ನಿರ್ಬಂಧವಿಲ್ಲ ಎಂದು ಪಶುವೈದ್ಯಕೀಯ ಹಾಗೂ ಸೇವಾ ಇಲಾಖೆ ಉಪನಿರ್ದೇಶಕಿ ಡಾ.ಇಂದಿರಾಬಾಯಿ ಹೇಳಿದರು.

    ಇದನ್ನೂ ಓದಿ : ಚಿನ್ನದ ಸರ ಕಳೆದುಕೊಂಡ ಮಹಿಳೆ | ಪ್ರಾಮಾಣಿಕತೆ ಮೆರೆದ ಮಠದ ಸಿಬ್ಬಂದಿ

    ಪ್ರಾಣಿ ದಯಾ ಸಂಘದ ನವೀಕರಣ: ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ.ಸಿಇಓ, ಅಪರ ಜಿಲ್ಲಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ, ನಗರ ಸಭೆ ಪೌರಾಯುಕ್ತೆ, ಡಿ.ಡಿ.ಪಿ.ಐ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪಾಲಿ ಕ್ಲೀನಿಕ್ ಉಪನಿರ್ದೇಶಕ ಹಾಗೂ ಪಶು ಇಲಾಖೆ ಉಪನಿರ್ದೇಶಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಪ್ರಾಣಿ ದಯಾ ಸಂಘದ ನವೀಕರಣಕ್ಕೆ ಅನುಮತಿ ನೀಡಲಾಯಿತು.

    ಬಿಡಾಡಿ ದನಗಳಿಗೆ ಮಾರಕವಾದ ಪ್ಲಾಸ್ಟಿಕ್: ನಗರ ಪ್ರದೇಶದ ರಸ್ತೆ, ಮಾರುಕಟ್ಟೆ ಸೇರಿದಂತೆ ಎಲ್ಲೆಂದರಲ್ಲಿ ಬಿಡಾಡಿ ಓಡಾಡುವ ದನ ಕರುಗಳನ್ನು ಸರ್ಕಾರಿ ಗೋಶಾಲೆಗಳಿಗೆ ಕಳುಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರದಿಂದ ಜಿಲ್ಲೆಯಲ್ಲಿ 1 ಗೋಶಾಲೆ ಮಾತ್ರ ನಡೆಸಲಾಗುತ್ತಿದೆ. ಇದರಲ್ಲಿ ಈಗಾಗಲೇ 81 ಜಾನುವಾರುಗಳು ಆಶ್ರಯ ಪಡೆದಿವೆ.

    ನಗರದ ತಿಪ್ಪೆಗುಂಡಿಗಳಲ್ಲಿ ಹರಡಿರುವ ಪ್ಲಾಸ್ಟಿಕ್ ತಿನ್ನುವ ಬಿಡಾಡಿ ದನಗಳು ಗೋಶಾಲೆಗೆ ದಾಖಲಾದರೆ, ಅವುಗಳ ಜೀವನ ಸುಗಮವಾಗುವುದರ ಬದಲು, ಸಾವಿಗೆ ಈಡಾಗುವ ಪ್ರಸಂಗ ಉಂಟಾಗುತ್ತಿದೆ. ನಗರದಲ್ಲಿ ಎಲ್ಲಾ ವಯಸ್ಕ ಗೋವುಗಳ ಜಠರಗಳಲ್ಲಿ ಪ್ಲಾಸ್ಟಿಕ್ ಸೇರ್ಪಡೆಯಾಗಿದ್ದು, ಗೋವುಗಳು ಮೇವು ತಿಂದ ನಂತರ, ದೇಹದಲ್ಲಿನ ಪ್ಲಾಸ್ಟಿಕ್‌ನಿಂದ ತೊಂದರೆ ಅನುಭವಹಿಸಿ ಅಸುನೀಗುತ್ತಿವೆ. ಇದು ಪಶು ಇಲಾಖೆ ವೈದ್ಯಾಧಿಕಾರಿಗಳನ್ನು ಚಿಂತೆಗೆ ಈಡುಮಾಡಿದೆ.

    ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಪೊಲೀಸರಿಗೆ ಶರಣಾದ ಚಿತ್ರದುರ್ಗದ ಜಗ್ಗು, ಅನು

    ಗೋವುಗಳ ಹೊಟ್ಟೆ ಸೇರಿದ ಪ್ಲಾಸ್ಟಿಕ್‌ನ್ನು ಅಪರೇಷನ್ ಮಾಡಿ ಹೊರೆತೆಗದರೂ ಗೋವುಗಳು ಗುಣಮುಖವಾಗದೆ ಮತ್ತೆ ಸಾವಿನ ಕಡೆ ಸಾಗುತ್ತಿವೆ. ಈ ಕುರಿತು ಪಶು ಇಲಾಖೆ ವೈದ್ಯಾಧಿಕಾರಿಗಳು ಸಂಪೂರ್ಣ ಅಧ್ಯಯನ ವರದಿಯ್ನನು ಸಿದ್ದಪಡಿಸಿ ಪ್ರಾಣಿ ದಯಾ ಸಂಘಕ್ಕೆ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆಯಲ್ಲಿ ನಿರ್ದೇಶನ ನೀಡಿದರು. ವಯಸ್ಕ ಗೋವುಗಳ ಬದಲಿಗೆ ಸಣ್ಣ ಕರುಗಳನ್ನು ಮುಂಜಾಗೃತ ಕ್ರಮವಾಗಿ ಗೋಶಾಲೆಗಳಿಗೆ ದಾಖಲಿಸುವಂತೆ ತಿಳಿಸಿದರು.

    ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಗೋಶಾಲೆ ನಿರ್ಮಾಣ: ಜಿಲ್ಲೆಯ ವಿವಿಧ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲು ಯೋಜನಾ ವರದಿ ನೀಡುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.

    ಸಭೆಯಲ್ಲಿ ಸರ್ಕಾರಿ ಗೋಶಾಲೆಯ ಸಗಣಿ ವಿಲೇವಾರಿ, ಹೆಚ್ಚುವರಿ ಗೋಶಾಲೆಗಳ ನಿರ್ಮಾಣ, ಗೋಶಾಲೆಗಳಲ್ಲಿ ಡಿ ದರ್ಜೆ ನೌಕರರ ನೇಮಕ, ಜಿಲ್ಲಾ ಜಾನುವಾರು ಮಾರುಕಟ್ಟೆ ಮೇಲ್ವಿಚಾರಣೆ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಡಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಂಜಾರ್ ಪೋಲ್ ಹಾಗೂ ಇತರೆ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮಗಳ ಪ್ರಸ್ತಾವನೆಗಳನ್ನು ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

    ಇದನ್ನೂ ಓದಿ: ಗಾಳಿಯಲ್ಲಿ ಹಾರಿಹೋದ ಬಸ್ ಟಿಕೆಟ್‌ | ನಡು ರಸ್ತೆಯಲ್ಲೇ ಮಹಿಳೆಯನ್ನು ಇಳಿಸಿದ ನಿರ್ವಾಹಕ

    ನಗರ ಸಭೆ ಪೌರಾಯುಕ್ತೆ ಎಂ.ರೇಣುಕಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೆ ಸಿಂಘೆ, ಪಾಲಿ ಕ್ಲಿನಿಕ್ ಉಪನಿರ್ದೇಶಕ ಎನ್.ಕುಮಾರ್, ಜಿಲ್ಲಾ ಪ್ರಾಣಿ ಕಲ್ಯಾಣಾಧಿಕಾರಿ ಹಾಗೂ ವಕೀಲ ದೇವಿಪ್ರಸಾದ್ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top