ಮುಖ್ಯ ಸುದ್ದಿ
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನೆಗೆ ಡಿ.ಕೆ.ಶಿವಕುಮಾರ್ ಭೇಟಿ | ಪೂರ್ಣಿಮಾಗೆ ಕಾಂಗ್ರೆಸ್ ಆಹ್ವಾನ ನೀಡಿತೆ..?
ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಬೆಂಗಳೂರಿನ ಮನೆಯಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.
ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಾರೆ ಎಂದು ಕಳೆದ ವಿಧಾನಸಭೆ ಚುನಾವಣೆಗೂ ಮೊದಲಿನಿಂದಲೂ ಸುದ್ದಿಗಳು ಹರಿದಾಡುತ್ತಿದ್ದವು. ಈಗ ಡಿ.ಕೆ.ಶಿವಕುಮಾರ್ ಅವರ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವದಂತಿಗೆ ಪುಷ್ಠಿ ನೀಡಿದಂತಾಗಿದೆ.
2018ರಲ್ಲಿ ಹಿರಿಯೂರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಪೂರ್ಣಿಮಾ ಶ್ರೀನಿವಾಸ್ 2023ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈ ಚುನಾವಣೆಯಲ್ಲಿ ಪೂರ್ಣಿಮಾ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎನ್ನಲಾಗಿತ್ತು. ಆದರೆ, ಹಿರಿಯೂರಿಗೆ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದ ವೇಳೆ, ಪೂರ್ಣಿಮಾ ಎಲ್ಲಿಯೂ ಹೋಗುವುದಿಲ್ಲ. ನಮ್ಮ ಜೊತೆಯಲ್ಲೇ ಇರುತ್ತಾರೆ ಎಂದಿದ್ದರು. ಈ ವೇಳೆ ಪೂರ್ಣಿಮಾ ನಾನು ಕಾಂಗ್ರೆಸ್ ಸೇರುವುದು ಮಾಧ್ಯಮಗಳ ಸೃಷ್ಟಿ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಬಿಜೆಪಿ ನಾಯಕರ ಪತ್ರಿಕಾಗೋಷ್ಠಿ: ರಾಜ್ಯ ಸರ್ಕಾರದ ವಿರುದ್ಧ ಎಂಎಲ್ಸಿ ಕೆ.ಎಸ್.ನವೀನ್ ವಾಗ್ದಾಳಿ
ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪೂರ್ಣಿಮಾ ಅವರ ತಂದೆ ಎ.ಕೃಷ್ಣಪ್ಪ ಅವರ ಮೂಲ ನೆಲೆಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎನ್ನುವ ಅನುಮಾನಗಳು ದಟ್ಟವಾಗುತ್ತಿವೆ.
ಹಿರಿಯೂರಿನಲ್ಲಿ ಕಾಂಗ್ರೆಸ್ಸಿಗೆ ಈಗಾಗಲೇ ಮಂತ್ರಿ ಡಿ.ಸುಧಾಕರ್ ಇದ್ದಾರೆ. ಪೂರ್ಣಿಮಾ ಅವರನ್ನು ಕೆ.ಆರ್.ಪುರಂ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಆಹ್ವಾನ ಮಾಡುತ್ತಿರಬಹುದು ಎನ್ನುವ ಲೆಕ್ಕಾಚಾರಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಕೆ.ಆರ್.ಪುರಂನ ದೇವಸಂದ್ರದಲ್ಲಿರುವ ಪೂರ್ಣಿಮಾ ಶ್ರೀನಿವಾಸ್ ಮನೆಯಲ್ಲಿ ನಡೆದ ಕೃಷ್ಣಜನ್ಮಾಷ್ಠಮಿಯಲ್ಲಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದನ್ನು ಸ್ವತಃ ಡಿಕೆಶಿ ಫೇಸ್‍ಬುಕ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಈ ಮೂಲಕ ರಾಜಕೀಯ ವಿರೋಧಿಗಳಿಗೆ ಡಿಕೆಶಿ ಸಂದೇಶ ನಿಡಿದ್ದಾರೆ ಎನ್ನಬಹುದು.
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.
https://chat.whatsapp.com/EQUQpKalYFT1fVcJDTDjCk)