ಕ್ರೈಂ ಸುದ್ದಿ
ಕ್ರಷರ್ ಮಾಲಿಕರ ಸಂಘದ ಜಿಲ್ಲಾಧ್ಯಕ್ಷನ ಮೇಲೆ ಗಣಿ ಇಲಾಖೆ ಅಧಿಕಾರಿ ಹಲ್ಲೆ

CHITRADURGA NEWS | 13 FEBRUARY 2024
ಚಿತ್ರದುರ್ಗ: ಕ್ವಾರಿ ಮತ್ತು ಕ್ರಷರ್ ಮಾಲಿಕರ ಸಂಘದ ಜಿಲ್ಲಾಧ್ಯಕ್ಷರ ಮೇಲೆ ಚಿತ್ರದುರ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂವಿಜ್ಞಾನಿ ಹಲ್ಲೆ ನಡೆಸಿರುವ ಬಗ್ಗೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ವಾರಿ ಮತ್ತು ಕ್ರಷರ್‍ಗಳಿಂದ ಮಾಮೂಲಿ ಕೊಡಲು ಕಿರಿ ಕಿರಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಕ್ರಷರ್ ಮಾಲಿಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ತರೀಕೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 50 ಸಾವಿರ
ನಗರದ ಖಾಸಗಿ ಹೋಟೆಲ್‍ನಲ್ಲಿ ಫೆ.8ರಂದು ರಾತ್ರಿ ಊಟಕ್ಕಾಗಿ ಸೇರಿದ್ದಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂ ವಿಜ್ಞಾನಿ ಮಧುಸೂದನ್ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಚಿತ್ರದುರ್ಗ ತಾಲೂಕು ವ್ಯಾಪ್ತಿಯ ಮಲ್ಲನಕಟ್ಟೆ ಸಮೀಪದ ಕ್ರಷರ್‍ಗೆ ಬಂದಿದ್ದ ಭೂ ವಿಜ್ಞಾನಿ ಮಧುಸೂದನ್ ಮಾಮೂಲಿ ನೀಡುವಂತೆ ಪೀಡಿಸಿದ್ದರು. ಪ್ರತಿ ಒಂದು ಕ್ರಷರ್‍ನಿಂದ 5 ಲಕ್ಷ ರೂ. ಮಾಮೂಲಿ ಕೊಡಬೇಕು ಎಂದು ಒತ್ತಾಯ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬಾಲ ರಾಮನಿಗೆ ಭಾವ ತುಂಬಿದ ಭಾವನಾ
ಈ ವೇಳೆ ಮಾತುಕತೆ ನಡೆಯುತ್ತಿದ್ದು, ಕಾರಿನಲ್ಲಿದ್ದ ಮೊಬೈಲ್ ತರಲು ಕೆಳಗೆ ಬಂದಿದ್ದ ವೇಳೆ ಹೋಟೆಲ್‍ನ ಕಾರಿಡಾರ್‍ನಲ್ಲಿ ಭೂವಿಜ್ಞಾನಿ ಮಧುಸೂದನ್ ಏಕಾಏಕಿ ಹಲ್ಲೆ ಮಾಡಿ ಮುಖಕ್ಕೆ ಹೊಡೆದು ಗಾಯಗೊಳಿಸಿದ್ದರು. ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಮಜೀದ್ ದೂರು ದಾಖಲಿಸಿದ್ದಾರೆ.
