ಲೋಕಸಮರ 2024
ಡಿಸಿಎಂ ಅಂದ್ರೆ ಡಮ್ಮಿ ಸಿಎಂ | ಯತೀಂದ್ರ ಶ್ಯಾಡೋ ಸಿಎಂ | ಪ್ರಿಯಾಂಕ ಖರ್ಗೆ ಸೂಪರ್ ಸಿಎಂ | ಗೋವಾ ಸಿಎಂ ಏನೆಲ್ಲಾ ಹೇಳಿದ್ರು ಗೊತ್ತಾ
CHITRADURGA NEWS | 08 MARCH 2024
ಚಿತ್ರದುರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಬಿಜೆಪಿ ಬೂತ್ ಪ್ರಮುಖರ ಸಭೆ ಆಯೋಜಿಸಿತ್ತು.
ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಈ ಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಈ ವೇಳೆ ನೇರವಾಗಿ ಕರ್ನಾಟಕ ರಾಜ್ಯ ಸರ್ಕಾರವನ್ನೇ ಟಾರ್ಗೆಟ್ ಮಾಡಿ ಮಾತನಾಡಿದ ಅವರು, ಈ ರಾಜ್ಯದಲ್ಲಿ 5 ಜನ ಮುಖ್ಯಮಂತ್ರಿಗಳಿದ್ದಾರೆ. ಒಬ್ಬರು ಸಿಎಂ ಸಿದ್ದರಾಮಯ್ಯ, ಮತ್ತೊಬ್ಬರು ಡಿಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಅಂದ್ರೆ ಡಮ್ಮಿ ಸಿಎಂ ಎಂದು ಹೊಸ ವ್ಯಖ್ಯಾನ ಮಾಡಿದರು.
ಆನಂತರ ಈ ರಾಜ್ಯಕ್ಕೆ ಸೂಪರ್ ಸಿಎಂ ಒಬ್ಬರಿದ್ದಾರೆ ಯಾರು ಗೊತ್ತಾ ಅಂದಾಗ ಸಭೆಯಿಂದ ಸರಿಯಾದ ಉತ್ತರ ಬರಲಿಲ್ಲ. ಆಗ ಪ್ರಿಯಾಂಕ ಖರ್ಗೆ ಸೂಪರ್ ಸಿಎಂ ಎಂದಾಗ ಬಿಜೆಪಿ ಕಾರ್ಯಕರ್ತರು ಜೋರಾಗಿ ಚಪ್ಪಾಳೆ ತಟ್ಟಿದರು.
ಇದನ್ನೂ ಓದಿ: ಚಾಕ್ಲೇಟ್ ಅಂದುಕೊಂಡು ಮಾತ್ರೆ ತಿಂದಿದ್ದ 4 ವರ್ಷದ ಮಗು ಸಾವು
ಮುಂದುವರೆದು ಮಾತನಾಡಿದ ಅವರು, ಒಬ್ಬರು ಶ್ಯಾಡೋ ಸಿಎಂ ಇದ್ದಾರೆ ಅವರು ಯತೀಂದ್ರ ಸಿದ್ದರಾಮಯ್ಯ. ಇನ್ನೂ ಇಬ್ಬರೂ ರೇಸಿಂಗ್ ಸಿಎಂಗಳಿದ್ದಾರೆ. ಡಾ.ಜಿ.ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಗಳಾಗಲು ಕಾಯುತ್ತಿದ್ದಾರೆ ಎಂದು ಡಾ.ಪ್ರಮೋದ್ ಸಾವಂತ್ ಹೇಳಿದರು.
ಮುಂದುವರೆದು ವಾಗ್ದಾಳಿ ಮಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿ 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.
ರೈತರಿಗೆ ನೀಡುವ ಸಬ್ಸಿಡಿ ಮತ್ತಿತರೆ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲ್ಲಿಸಿದ್ದಾರೆ. ಘೋಷಣೆ ಮಾಡಿರುವ ಗ್ಯಾರೆಂಟಿ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಕೊಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ಬಂದೊದಗಿದೆ ಎಂದರು.
ಇದನ್ನೂ ಓದಿ: ರೋಗಿಗಳಿಗೆ ಸಿಹಿ ಸುದ್ದಿ ನೀಡಿದ ಶಾಸಕ ಕೆ.ಸಿ.ವೀರೇಂದ(್ರಪಪ್ಪಿ)
ರಾಜ್ಯ ಸರ್ಕಾರ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ಕರ್ನಾಟಕದ ಲೂಟಿ ಮಾಡುತ್ತಿದ್ದಾರೆ. ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿಗಾಗಿ ಈ ಸರ್ಕಾರ. ಜನರಿಗಾಗಿ ಯಾವುದೇ ಯೋಜನೆ ತಲುಪಿಸಲು ಆಗುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಓಪನ್ ಚಾಲೆಂಜ್ ಮಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಹಿಂದಿನ ಯುಪಿಎ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಹಾಗೂ ಈಗಿನ ನರೇಂದ್ರ ಮೋದಿ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಆಹ್ವಾನಿಸಿದರು.
ಪ್ರತಿ ಮನೆಗೆ ನೀರು, ಶೌಚಾಲಯ, ವಿದ್ಯುತ್ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು. ಮೋದಿ ನೀಡಿದ್ದ ಗ್ಯಾರಂಟಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ತಿಳಿಸಿದರು.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಮುದ್ರಾ, ಪಿಎಂ ವಿಶ್ವಕರ್ಮ ಹೀಗೆ ಸಾಮಾಜಿಕ ನ್ಯಾಯ ನೀಡುವ ಗ್ಯಾರಂಟಿ ಯೋಜನೆಗಳನ್ನ ನರೇಂದ್ರ ಮೋದಿ ನೀಡಿದ್ದಾರೆ ಎಂದರು.
ದೇಶವನ್ನು ಸಾಂಸ್ಕøತಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಮಾಡಲಾಗಿದೆ. ತ್ರಿವಳಿ ತಲಾಕ್ ರದ್ದುಗೊಳಿಸಿ ಮಹಿಳಾ ನ್ಯಾಯ ನೀಡಿದ್ದು ಮೋದಿ ಸರ್ಕಾರ. ಮಹಿಳೆಯರಿಗೆ ಮೀಸಲಾತಿ ನೀಡುವ ಯೋಜನೆಯನ್ನೂ ಈ ಸರ್ಕಾರ ರೂಪಿಸಿದೆ ಎಂದು ಹೇಳಿದರು.
ಯುವಸಮೂಹಕ್ಕೆ ಸ್ಕಿಲ್ ಇಂಡಿಯಾ, ಕಿಸಾನ್ ಸಮ್ಮಾನ್, ಫಸಲ್ ಬಿಮಾ, ಬ್ಯಾಂಕ್ ಸಾಲ, ಗರೀಬ್ ಕಲ್ಯಾಣಕ್ಕಾಗಿ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಅಂತ್ಯೋದಯ, ಗ್ರಾಮೋದಯ, ಸರ್ವೋದಯ ಬಿಜೆಪಿ ಹಾಗೂ ಮೋದಿ ತತ್ವ ಎಂದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಅಪಘಾತದಲ್ಲಿ ಪ್ರತಿ ವರ್ಷ 500 ಮಂದಿ ಸಾವು
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ ನಾಯಿಯನ್ನು ಜತೆಗೆ ಕರೆದೊಯ್ಯುತ್ತಾರೆ. ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತರಿಗೆ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಯಾವುದೇ ಸರ್ಕಾರ ಒಂದು ಅವಧಿಗೆ ಅಧಿಕಾರಕ್ಕೆ ಬಂದರೆ ಮರು ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಬಂದಿರುತ್ತದೆ. ಆದರೆ, ಗುಜರಾತ್‍ನಲ್ಲಿ ಬಿಜೆಪಿ 30 ವರ್ಷ ಅಧಿಕಾರ ನಡೆಸಿದರೂ ಆಡಳಿತ ವಿರೋಧಿ ಅಲೆ ಬಂದಿಲ್ಲ. ಕಾರಣ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ದೂರದೃಷ್ಟಿಯಾಗಿದೆ ಎಂದರು.
ಪಾಕಿಸ್ಥಾನ್ ಜಿಂದಾಬಾದ್ ಎನ್ನುವವರಿಗೆ, ಹೋಟೆಲ್‍ನಲ್ಲಿ ಬಾಂಬ್ ಇಡುವವರಿಗೆ ಈ ಸರ್ಕಾರ ರೆಡ್ ಕಾರ್ಪೆಟ್ ಹಾಕಿದೆ. ಇದು ಕಾಂಗ್ರೆಸ್ಸಿನ ತುಷ್ಠೀಕರಣದ ಪರಿಣಾಮ. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಭದ್ರಾ ಕಾಮಗಾರಿ ಆರಂಭ | ಟ್ರಬಲ್ ಶೂಟರ್ ಮಾತುಕತೆ ಫಲಪ್ರದ
ನಾವು ರಾಮ ಮಂದಿರದ ಹೆಸರಿನಲ್ಲಿ ಮತ ಕೇಳುವುದಿಲ್ಲ. ಮಾಡಿರುವ ಅಭಿವೃದ್ಧಿ ಕೆಲಸಗಳ ಆಧಾರದಲ್ಲಿ ಮತಯಾಚನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ ಶಾಸಕ ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಪಾಕಿಸ್ಥಾನ ಜಿಂದಾಬಾದ್ ಕೂಗುವವರು ವಿಧಾನಸೌಧಕ್ಕೆ ಕಾಲಿಟ್ಟಿದ್ದಾರೆ. ಬಾಂಬ್ ಹಾಕಿದವನನ್ನು ಹಿಡಿಯುವ ತಾಕತ್ತು ಈ ಸರ್ಕಾರಕ್ಕೆ ಇಲ್ಲ. ಉಗ್ರನನ್ನು ಹತ್ತು ಲಕ್ಷ ಬಹುಮಾನ ಇಟ್ಟು ನಾಗರೀಕರ ನೆರವು ಕೇಳಿದ್ದಾರೆ. ಜನ ಹಿಡಿದು ಕೊಡುತ್ತಾರೆ ಎಂದರು.
ರಾಷ್ಟ್ರೀಯ ಕಾಂಗ್ರೆಸ್ ಎಂದು ಹೆಸರಿಟ್ಟುಕೊಂಡು ರಾಷ್ಟ್ರ ವಿರೋಧಿಗಳಿಗೆ ಬೆಂಬಲ ಕೊಡುವ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಹೆರಿಗೆ ವಿಚಾರದಲ್ಲಿ ಬಯಲಾಯ್ತು ಆತಂಕಕಾರಿ ಸಂಗತಿ
ಇಂದು ಇಡೀ ಜಗತ್ತು ಬಿಜೆಪಿ ಬಗ್ಗೆ ಯೋಚನೆ ಮಾಡುವಂತಾಗಿದೆ. ಬಿಜೆಪಿ ಬಗ್ಗೆ ಜಗತ್ತಿನ ಜನ ಅಧ್ಯಯನ ಮಾಡುವಂತಹ ವಾತಾವರಣ ನಿರ್ಮಾಣ ಆಗಿದೆ. ಈ ಹಿಂದೆ ಜನಸಂಘದ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಅಧಿಕಾರಕ್ಕಾಗಿ ಅಲ್ಲ, ದೇಶಕ್ಕಾಗಿ ಹುಟ್ಟಿದ ಪಕ್ಷ ಬಿಜೆಪಿ ಎಂದರು.
ಈ ದೇಶಕ್ಕೆ ನರೇಂದ್ರ ಮೋದಿ ಎಷ್ಟು ಅಗತ್ಯ ಎನ್ನುವುದನ್ನೂ ಬೇರೆ ದೇಶಗಳ ಮುಖ್ಯಸ್ಥರು ಹೇಳುತ್ತಿದ್ದಾರೆ. ಆ ದೇಶಗಳಿಗೂ ಮೋದಿಯ ಮಾರ್ಗದರ್ಶನದ ಅಗತ್ಯವಿದೆ ಎನ್ನುತ್ತಿದ್ದಾರೆ. ಈ ದೇಶಕ್ಕೆ ಜಿ20 ಅಧ್ಯಕ್ಷ ಸ್ಥಾನ ಬರಲು ನರೇಂದ್ರ ಮೋದಿ ಬರಬೇಕಾಯಿತು ಎಂದರು.
ದೇಶಕ್ಕೆ 109 ಯೋಜನೆಗಳನ್ನು ಕೊಟ್ಟಿದ್ದು ನರೇಂದ್ರ ಮೋದಿ ಸರಕಾರ, ಆದರೆ, ಕಾಂಗ್ರೆಸ್ ಐದು ಯೋಜನೆ ಕೊಟ್ಟು ಗಾಂಚಲಿ ಮಾಡುತ್ತಿದೆ. ಅವರ ಹುಟ್ಟನ್ನು ಅಡಗಿಸಬೇಕು ಎಂದರು.
ಇದನ್ನೂ ಓದಿ: ಮುರುಘಾ ಮಠ, ಎಸ್‍ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಶಿವಯೋಗಿ ಕಳಸದ್
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಹಾಗೂ ಈ ಹಿಂದಿನ ಬಿಜೆಪಿ ಸರ್ಕಾರಗಳು ಮಾಡಿವೆ. ಕಾರ್ಯಕರ್ತರು ಧೈರ್ಯವಾಗಿ ಜನರ ನಡುವೆ ಹೋಗಿ ಮೋದಿ ಅವರಿಗಾಗಿ ಮತ ಕೇಳಬಹುದು ಎಂದು ಹೇಳಿದರು.
ನಮ್ಮ ಜೊತೆಗೆ ಜೆಡಿಎಸ್ ಸೇರಿರುವುದು ಭೀಮಬಲ ಬಂದಂತಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿರಾ, ಪಾವಗಡ, ಹಿರಿಯೂರು ಭಾಗದಲ್ಲಿ ಶಕ್ತಿಬಂದಿದೆ ಎಂದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಹಣವನ್ನು ಪುಗಸಟ್ಟೆ ಭಾಗ್ಯಗಳಿಗೆ ಬಳಸಿಕೊಂಡಿದೆ. ಸರಿಯಾದ ಸಂಪನ್ಮೂಲ ಇಲ್ಲದೆ ಯೋಜನೆ ಘೋಷಿಸಿ ಪರಿಶಿಷ್ಟರ ಹಣಕ್ಕೆ ಕೈ ಹಾಕಿದೆ. ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದವರು ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನನಸಾಯ್ತು ಬಹು ವರ್ಷಗಳ ಕನಸು | ಲೋಕಾರ್ಪಣೆಯಾಯ್ತು ತಾಯಿ ಮಕ್ಕಳ ಆಸ್ಪತ್ರೆ
ಜನಗಳಿಗೆ ನೀರಿಲ್ಲ, ದನಗಳಿಗೆ ಮೇವಿಲ್ಲ ಆದರೂ, ಗೋಶಾಲೆ ಮಾಡಿಲ್ಲ. ಜಿಲ್ಲೆಯಲ್ಲಿ ನಾಲ್ಕೈದು ಜನ ಶಾಸಕರಿದ್ದೂ ಏನು ಮಾಡುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಬಜೆಟ್‍ನಲ್ಲಿ ಯಾಕೆ ಅನುದಾನ ಇಡಲಿಲ್ಲ. ಇದು ನಿಮ್ಮ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನೆ ಮಾಡಿದರು.
ಅಂಬೇಡ್ಕರ್ ಮೃತಪಟ್ಟಾಗ ಅಂತ್ಯಕ್ರಿಯೆಗೆ ರಾಜಘಾಟ್‍ನಲ್ಲಿ ಯಾಕೆ ಜಾಗ ಕೊಡಲಿಲ್ಲ. ಆಗ ಕಾಂಗ್ರೆಸ್ಸಿನವರು ಎಲ್ಲಿ ಹೋಗಿದ್ದರು. ಈಗ ಮಾತೆತ್ತಿದರೆ ಅಂಬೇಡ್ಕರ್, ಸಂವಿಧಾನ ಎಂದು ಮಾತನಾಡುವವರು ಎಲ್ಲಿದ್ದರು ಎಂದು ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಎಂಎಲ್ಸಿಗಳಾದ ಕೆ.ಎಸ್.ನವೀನ್, ಚಿದಾನಂದಗೌಡ, ಮಾಜಿ ಸಚಿವ ಭೈರತಿ ಬಸವರಾಜ್, ಜಿಲ್ಲಾಧ್ಯಕ್ಷ ಎ.ಮುರುಳಿ, ಮದುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಅನೀಲ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಬಾಳೆಕಾಯಿ ರಾಮದಾಸ್, ಸಂಪತ್‍ಕುಮಾರ್, ಜಿ.ಟಿ.ಸುರೇಶ್ ಮತ್ತಿತರರಿದ್ದರು.