Connect with us

    ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ | 24 ರಂದು ಬ್ರಹ್ಮ ರಥೋತ್ಸವ | ರಥವನ್ನು ಎಳೆದು ತಂದಿದ್ದೇ ಒಂದು ರೋಚಕ

    ಮುಖ್ಯ ಸುದ್ದಿ

    ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ | 24 ರಂದು ಬ್ರಹ್ಮ ರಥೋತ್ಸವ | ರಥವನ್ನು ಎಳೆದು ತಂದಿದ್ದೇ ಒಂದು ರೋಚಕ

    CHITRADURGA NEWS | 09 FEBRUARY 2024
    ಚಿತ್ರದುರ್ಗ: ದಕ್ಷಿಣ ಕಾಶಿಯೆಂದೆ ಖ್ಯಾತಿಗಳಿಸಿರುವ ಹಿರಿಯೂರು ಪಟ್ಟಣದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ಫೆ.13 ರಿಂದ 28 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

    ಫೆ.13 ರ ರಾತ್ರಿ 8ಕ್ಕೆ ಕಂಕಣ ಕಲ್ಯಾಣೋತ್ಸವ, ಕಂಕಣಧಾರಣೆ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. 14ರಂದು ರಾತ್ರಿ 8ಕ್ಕೆ ಮಂಟಪೋತ್ಸವ,15ರಂದು ರಾತ್ರಿ 8ಕ್ಕೆ ಗಿಳಿ ವಾಹನೋತ್ಸವ, ಫೆ.16ರಂದು ರಾತ್ರಿ 8ಕ್ಕೆ ಗಂಡುಭೇರುಂಡ ವಾಹನೋತ್ಸವ.

    17ರಂದು ರಾತ್ರಿ 8ಗಂಟೆಗೆ ನವಿಲು ವಾಹನೋತ್ಸವ,18ರಂದು ರಂದು ರಾತ್ರಿ 8ಕ್ಕೆ ಸಿಂಹ ವಾಹನೋತ್ಸವ, 19ರಂದು ರಾತ್ರಿ 8ಕ್ಕೆ ನಂದಿ ವಾಹನೋತ್ಸವ, 20ರಂದು ರಾತ್ರಿ 8ಕ್ಕೆ ಸರ್ಪ ವಾಹನೋತ್ಸವ, 21ರಂದು ರಾತ್ರಿ 8 ಕ್ಕೆ ಅಶ್ವ ವಾಹನೋತ್ಸವ, 22ರಂದು ರಾತ್ರಿ 8ಕ್ಕೆ ಗಜ ವಾಹನೋತ್ಸವ (ಮೂರು ಕಳಸ ಸ್ಥಾಪನೆ) ಫೆ.23ರಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಸವ ವಾಹನೋತ್ಸವ (ದೊಡ್ಡ ಉತ್ಸವ) ಅಕ್ಕಿ ತಂಬಿಟ್ಟಿನ ಆರತಿ ನಡೆಯಲಿದೆ.

    ಇದನ್ನೂ ಓದಿ: ಫೆ.11ರಂದು ಶ್ರೀ ಗಂಗಾಂಬಿಕಾ ಸಮುದಾಯ ಭವನ ಉದ್ಘಾಟನೆ ‌| ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯ

    ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿ ಬೀರೇನಹಳ್ಳಿ ಮಜುರೆ ಕರಿಯಣ್ಣಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಫೆ.24ರಂದು ಬೆಳಿಗ್ಗೆ 9ಕ್ಕೆ ಶಿವಧನಸ್ಸಿನ ಗಂಗಾ ಸ್ನಾನದ ಉತ್ಸವ ನಂತರ ಮಧ್ಯಾಹ್ನ 12ಕ್ಕೆ ಮಘಾ ನಕ್ಷತ್ರದಲ್ಲಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದ್ದು, ಮಧ್ಯಾಹ್ನ 1.30ಕ್ಕೆ ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ಚಂದ್ರಮೌಳೇಶ್ವರ ಮತ್ತು ಉಮಾಮಹೇಶ್ವರ ರಥೋತ್ಸವ ನಡೆಯಲಿದೆ.

    25 ರಂದು ಸಂಜೆ 4ಕ್ಕೆ ಸಿದ್ಧನಾಯಕ ವೃತ್ತದಲ್ಲಿ ಶ್ರೀ ಮದಕರಿ ಯುವಕ ಸಂಘದಿಂದ ಜಂಗೀ ಕುಸ್ತಿಯನ್ನು ಏರ್ಪಡಿಸಲಾಗಿದೆ.
    ತ26ರಂದು ರಾತ್ರಿ 8ಕ್ಕೆ ಸುಮಂಗಲೆಯರಿಂದ ಕರ್ಪೂರದಾರತಿ, 27ರಂದು ರಾತ್ರಿ 8ಕ್ಕೆ ಚಿಟುಗ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಉಯ್ಯಾಲೋತ್ಸವ, ವಸಂತೋತ್ಸವ, ಓಕಳಿ ಪಾರ್ವಟೋತ್ಸವ ನಡೆಯಲ್ಲಿದೆ. ಫೆ.28ರಂದು ಸಂಜೆ 4ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ.

    ಫೆ.24ರಂದು ಮಧ್ಯಾಹ್ನ ಸ್ವಾಮಿಯ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಲಿದೆ. ಬಳಿಕ ಸಾವಿರಾರು ಭಕ್ತರು ರಥವನ್ನು ಸಿದ್ದನಾಯಕ ವೃತ್ತದವರೆಗೂ ಎಳೆಯುವ ಮೂಲಕ ಭಕ್ತಿ ಭಾವವನ್ನು ಅರ್ಪಿಸುತ್ತಾರೆ.

    ಬುಡಕಟ್ಟು ಕಾಡುಗೊಲ್ಲರ ಆರಾಧ್ಯದೈವನಾದ ಪಶುಪಾಲಕ ವೀರಕರಿಯಣ್ಣ ದೇವರು ಬರುವವರೆಗೂ ಶ್ರೀ ತೇರು ತೆರುಮಲ್ಲೇಶ್ವರನ ರಥ ಮುಂದಕ್ಕೆ ಚಲಿಸುವುದಿಲ್ಲ. ಹಿರಿಯೂರು ತಾಲೂಕಿನ ಬೀರನಹಳ್ಳಿ ಮುಜರೆ ಗ್ರಾಮದ ಕರಿಯ್ಯನಹಟ್ಟಿ ಗ್ರಾಮದ ವೀರ ಕರಿಯಣ್ಣ ದೇವರು ತೇರುಮಲ್ಲೇಶ್ವರ ಆಸ್ಥಾನಕ್ಕೆ ಬಂದಾಗ ರಥೋತ್ಸವ ವಿಜೃಂಭಣೆಯಿಂದ ಜರುಗುವುದು ಜಾತ್ರೆಯ ವಿಶೇಷವಾಗಿದೆ.

    ಇದನ್ನೂ ಓದಿ: ರೈತರ ಖಾತೆಗೆ ಬೆಳೆವಿಮೆ | ವಿಮಾ ಕಂಪನಿಗೆ 21 ದಿನ ಡೆಡ್‌ಲೈನ್‌

    ಈ ಹಿಂದೆ ಹೊಸದುರ್ಗ ತಾಲೂಕಿನ ಯಗಟಿ ಎಂಬಲ್ಲಿ ಮಲ್ಲೇಶ್ವರಸ್ವಾಮಿ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಗಾಳಿ, ಮಳೆ ಆರಂಭವಾಗಿ ವೇದಾವತಿ ನದಿಯ ಪ್ರವಾಹದಲ್ಲಿ ರಥ ಕೊಚ್ಚಿ ಬರುತ್ತದೆ. ನದಿಯಲ್ಲಿ ಕೊಚ್ಚಿ ಬಂದಂತಹ ರಥ ಇಲ್ಲಿನ ರಾಜರ ಗಮನಕ್ಕೆ ಬರುತ್ತದೆ. ಆನೆ, ಕುದುರೆ ಮೂಲಕ ರಥವನ್ನು ಮೇಲೆತ್ತುವ ಕಾರ್ಯ ನಡೆಯುತ್ತದೆ. ಆದರೆ ರಥ ಮೇಲಕ್ಕೆ ಬರುವುದಿಲ್ಲ. ರಥವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಗ ಪಶುಪಾಲಕನಾಗಿದ್ದ ವೀರ ಕರಿಯಣ್ಣ ನೋಡಿ ಅಪ್ಪಣೆ ಕೊಟ್ಟರೆ ನಾನು ರಥವನ್ನು ದಡಕ್ಕೆ ಎಳೆಯುತ್ತೇನೆಂದು ಕೇಳಿದಾಗ ರಾಜರು ಅಪ್ಪಣೆ ಕೊಡುತ್ತಾರೆ. ನಂತರ ವೀರ ಕರಿಯಣ್ಣನು ಎರಡು ಹೋರಿಗಳ ಮೂಲಕ ಹೆಗಲ ಮೇಲೆ ಕಂಬಳಿಯನ್ನು ತೆಗೆದು ಹಗ್ಗವನ್ನಾಗಿ ಮಾಡಿ ರಥಕ್ಕೆ ಕಟ್ಟಿ ಯಾರು ನೋಡದ ಮಧ್ಯರಾತ್ರಿ ಸಮಯದಲ್ಲಿ ದೇವಸ್ಥಾನದ ಮುಂದಕ್ಕೆ ರಥವನ್ನು ಎಳೆದು ತಂದು ನಿಲ್ಲಿಸುತ್ತಾನೆ ಎನ್ನುವ ಪ್ರತೀತಿ ಇದೆ.

    ಬೆಳಗ್ಗೆ ರಥವನ್ನು ನೋಡಿದ ಭಕ್ತರು ಅಚ್ಚರಿ ಪಡುತ್ತಾರೆ. ಈ ಹಿಂದೆ ತೇರುಮಲ್ಲೇಶ್ವರ ದೇವಸ್ಥಾನವನ್ನು ಕಟ್ಟುವ ಸಂದರ್ಭದಲ್ಲಿ ತಳಪಾಯ ಹಾಕುವಾಗ ಪೂಜಾ ಕಾರ್ಯಕ್ರಮದಲ್ಲಿ ಹಾಲುತುಪ್ಪ ಬಿಡುವ ಸಂಪ್ರದಾಯವಿರುತ್ತು. ಬುಡಕಟ್ಟು ಕಾಡುಗೊಲ್ಲರ ವೀರಗಾರನಾದ ಕರಿಯಣ್ಣ ಒಬ್ಬ ಪೂಜಾರಿ ಹಾಗೂ ಅಪಾರ ದೈವ ಭಕ್ತ ಉಳ್ಳವನಾಗಿದ್ದನು. ಪಶುಪಾಲಕನಾದ ವೀರ ಕರಿಯಣ್ಣ ದೇಗುಲದ ಅಡಿಪಾಯಕ್ಕೆ ಹಾಲನ್ನ ಮೀಸಲಾಗಿ ತಂದು ದೇವಸ್ಥಾನದ ಅಡಿಪಾಯಕ್ಕೆ ಹಾಕುತ್ತಾನೆ. ಅಂದಿನಿಂದ ಇಂದಿನವರೆಗೂ ಕರಿಯಣ್ಣ ಮುಂದಾಳತ್ವದಲ್ಲಿ ರಥೋತ್ಸವ ನಡೆಯುತ್ತದೆ ಎನ್ನುತ್ತಾರೆ ಹಿರಿಯರು.

    ಕೆಂಚಪ್ಪ ನಾಯಕ ಮಾಯಸಂದ್ರ ಗ್ರಾಮದವರಾಗಿದ್ದು, ವೀರ ಕರಿಯಣ್ಣ ಪಕ್ಕದ ಬೀರೆನಹಳ್ಳಿ ಕರಿಯ್ಯನಹಟ್ಟಿ ಗ್ರಾಮದವರು ಆಗಿದ್ದರು. ಇವರಿಬ್ಬರಿಗೂ ಅವಿನಾಭಾವ ಸಂಬಂಧ ಇತ್ತು ಎನ್ನಲಾಗಿದೆ. ಪಾಳೇಗಾರ ವಂಶಸ್ಥ ರಾಜ ಕೆಂಚಪ್ಪ ನಾಯಕ 1446ರಲ್ಲಿ ತೇರುಮಲ್ಲೇಶ್ವರ ಸ್ವಾಮಿ ದೇಗುಲವನ್ನು ನಿರ್ಮಿಸಲಾಗಿತ್ತು. ಇದರ ಮೂಲವಿಗ್ರಹ ಕಾಶಿಯಲ್ಲಿ ಇರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಕಾರಣಕ್ಕೆ ದೇಗುಲವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ.

    ಶ್ರೀ ಶೈಲ ಮಲ್ಲಿಕಾರ್ಜುನ ಪರಮ ಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ತನ್ನ ಇಳಿ ವಯಸ್ಸಿನಲ್ಲಿ ಶ್ರೀ ಶೈಲಕ್ಕೆ ನಡೆದುಕೊಂಡು ಹೋಗಿ ದರ್ಶನ ಮಾಡಿ ಬರುವುದು ಕಷ್ಟವಾಗಿತ್ತು. ಈ ಕಾರಣಕ್ಕೆ ಆಕೆಯ ಕನಸಿನಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮಾತು ಕೊಟ್ಟಿದ್ದರ ಪರಿಣಾಮವಾಗಿ ಮಲ್ಲೇಶ್ವರ ಸ್ವಾಮಿ ದೇಗುಲ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

    ಇದನ್ನೂ ಓದಿ: ತೀವ್ರ ಸ್ವರೂಪಕ್ಕೆ ಬಯಲುಸೀಮೆ ‘ಭದ್ರಾ’ ಹೋರಾಟ | ಸರತಿಯಲ್ಲಿ ಬಂದ್‌ | ಜನರಿಂದ ಸ್ವಯಂ ಪ್ರೇರಿತ ಬೆಂಬಲ

    ಹಿರಿಯೂರಿನಲ್ಲಿ ನೆಲೆಸಿದ್ದ ಮಲ್ಲಮ್ಮ ಆಗಾಗ ಕಾಲ್ನಡಿಗೆಯಲ್ಲಿ ಶ್ರೀಶೈಲಕ್ಕೆ ಹೋಗಿ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನ ದರ್ಶನ ಮಾಡಿ ಬರುತ್ತಿದ್ದಳು. ಒಮ್ಮೆ ಹೀಗೆಯೇ ಶ್ರೀಶೈಲಕ್ಕೆ ಪ್ರಯಾಣಿಸುವಾಗ ದಣಿವಾಗಿ ಎಲೆ, ಅಡಿಕೆ ಹಾಕಿಕೊಳ್ಳಲು ಬಯಸಿದಳು. ಅಡಿಕೆ ಪುಡಿ ಮಾಡಿಕೊಳ್ಳಲು ಕಲ್ಲೊಂದನ್ನು ಎತ್ತಿಕೊಂಡು ಪುಡಿಮಾಡಿ ನಂತರ ಬಿಸಾಡುತ್ತಾರೆ. ಮುಂದೆ ದಾರಿಯಲ್ಲಿ ಎರಡು ಮೂರು ಬಾರಿ ಅಡಿಕೆ ಪುಡಿ ಮಾಡುವಾಗಲೂ ಅದೇ ಕಲ್ಲು ಸಿಕ್ಕಿದ್ದಲ್ಲದೆ, ಮನೆಗೆ ಮರಳಿ ಬಂದಾಗಲೂ ತನ್ನ ಅಡಿಕೆ ಚೀಲದಲ್ಲಿ ಆ ಕಲ್ಲು ಗೋಚರಿಸುತ್ತದೆ. ಅಚ್ಚರಿಗೊಂಡ ಮಲ್ಲಮ್ಮ ಅದನ್ನು ಹೊರಗೆ ಬಿಸಾಡುತ್ತಾರೆ. ನಂತರ ಅದು ಮನೆಯ ಒಳಗಿದ್ದ ಒಳ ಕಲ್ಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ.

    Terumalleswaraswamy Jatra Mahotsava

    ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ. (Image used for representational purpose only)

    ಚೆನ್ನಮಲ್ಲಿಕಾರ್ಜುನನ ಸ್ಮರಣೆಯಲ್ಲಿ ಮಲಗಿದ್ದ ಮಲ್ಲಮ್ಮನಿಗೆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ದೇವರು ‘ಇನ್ನು ನಿನಗೆ ವಯಸ್ಸಾಯಿತು. ಶ್ರೀಶೈಲಕ್ಕೆ ಬರುವ ತೊಂದರೆ ತೆಗೆದುಕೊಳ್ಳಬೇಡ. ಕಲ್ಲಿನ ರೂಪದಲ್ಲಿ ಬಂದವನು ನಾನೇ ಇಲ್ಲಿ ನನ್ನನ್ನು ಪೂಜಿಸು’ ಎಂದು ಹೇಳಿ ಮಾಯವಾದಂತೆ. ಕನಸಿನಿಂದ ಎಚ್ಚರಗೊಂಡು ನೋಡಿದಾಗ ಒಳಕಲ್ಲಿನಲ್ಲಿ ಇದ್ದ ಕಲ್ಲು ಲಿಂಗ ವಾಗಿತ್ತು. ಈ ಘಟನೆ ನಂತರ ಮಲ್ಲಮ್ಮನ ಮನೆಯೇ ಮಲ್ಲೇಶ್ವರ ದೇಗುಲ ವಾಯಿತು ಎಂಬ ಪ್ರತೀತಿ ಇದೆ.

    ಮಲ್ಲೇಶ್ವರ ದೇಗುಲ ಉದ್ಭವವಾದ ಕೆಲವು ವರ್ಷಗಳ ಬಳಿಕ ನೆರೆಯ ಹೊಸದುರ್ಗ ತಾಲೂಕಿನ ಯಗಟಿ ಎಂಬಲ್ಲಿ ಮಲ್ಲೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿತ್ತು. ಆಗ ಭೀಕರ ಗಾಳಿ, ಮಳೆ ಆರಂಭವಾಗಿ ವೇದಾವತಿ ನದಿಯ ಪ್ರವಾಹದಲ್ಲಿ ರಥ ಕೊಚ್ಚಿಹೋಗಿತ್ತು. ಕೊಚ್ಚಿಹೋಹ ಮಲ್ಲೇಶ್ವರನ ರಥ ಹಿರಿಯೂರಿನ ಮಲ್ಲೇಶ್ವರ ದೇವಸ್ಥಾನದ ಹತ್ತಿರ ಬಂದು ನಿಂತಿತ್ತು. ಆಗ ಭಕ್ತರು ರಥವನ್ನು ಎತ್ತಿ ದೇವಸ್ಥಾನ ಹತ್ತಿರಕ್ಕೆ ತಂದಿದ್ದರು. ಅಂದಿನಿಂದ ಮಲ್ಲೇಶ್ವರನನ್ನು ತೇರುಮಲ್ಲೇಶ್ವರ ಎಂದು ಕರೆಯಲಾಗುತ್ತಿದೆ. ಆಗಿನಿಂದಲೂ ಪ್ರತಿವರ್ಷ ಮಾಘ ಮಾಸದ ಮಾಘ ನಕ್ಷತ್ರದಲ್ಲಿ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಅಲ್ಲದೆ ಅಂದೇ ಚಂದ್ರಮೌಳೇಶ್ವರ ಉಮಾಮಹೇಶ್ವರ ಸ್ವಾಮಿಗಳ ರಥೋತ್ಸವವೂ ನಡೆಯುತ್ತದೆ.

    ತೇರುಮಲ್ಲೇಶ್ವರ ರಥೋತ್ಸವ ನಡೆದು ಎರಡು ದಿನಗಳ ನಂತರ ಕರ್ಪೂರದ ಆರತಿ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ. ಈ ಕಾರ್ಯಕ್ರಮದ ಮೈಜುಮ್ಮೆನ್ನಿಸುವ ದೃಶ್ಯ ನೋಡುಗರ ಮನಸೂರೆಗೊಳ್ಳುತ್ತದೆ. ಕರ್ಪೂರದಾರತಿ ಕಾರ್ಯಕ್ರಮ ಮಹಿಳೆಯರಿಗೆ ವಿಶೇಷವಾದ ಹಬ್ಬವಾಗಿದೆ. ದೇಗುಲದ ಒಳ ಆವರಣದಲ್ಲಿ ಗರ್ಭಗುಡಿಯ ಮುಂಭಾಗದ 48 ಅಡಿಯ ಕಲ್ಲುಕಂಬವಿದ್ದು, ಕಂಬದ ಮೇಲೆ 8 ಅಡಿ ಎತ್ತರದ ಬಸವ ಮಂಟಪದಲ್ಲಿ ಚಿಕ್ಕ ನಂದಿ ವಿಗ್ರಹವಿದೆ. ಇದಕ್ಕೆ ಆರು ಅಡಿ ಉದ್ದವಿರುವ ಕಬ್ಬಿಣದ ಸೌಟುಗಳನ್ನು ಜೋಡಿಸಲಾಗಿದೆ.

    ಕರ್ಪೂರದಾರತಿಯ ದಿನ ಒಟ್ಟಾರೆ 56 ನುಣುಪಾದ ಕೆತ್ತನೆಯಿಂದ ಕೂಡಿರುವ ದೀಪಸ್ತಂಭದ ಮೇಲೆ ಏರಿ ಬತ್ತಿ ಎಣ್ಣೆ ಹಾಕಿ ಕರ್ಪೂರ ಬಳಸಿ ದೀಪ ಹಚ್ಚಲಾಗುತ್ತದೆ. ಆಂಧ್ರದಿಂದ ತರಿಸಿದ ದೀಪಸ್ತಂಭ ಸುಮಾರು 56 ಅಡಿ ಎತ್ತರವಿದ್ದು, ಇದನ್ನು ಆಂಧ್ರಪ್ರದೇಶದಿಂದ ಹಿರಿಯೂರಿಗೆ ತರುವಾಗ ಅಂಬಲಗೆರೆ ಗ್ರಾಮದ ಬಳಿ ಬಿದ್ದಿತ್ತು. ಆಗ ಈ ಸ್ತಂಭ ಎರಡು ಹೊಳಾಯಿತು ಎಂದು ಹಿರಿಯರು ಹೇಳುತ್ತಿದ್ದಾರೆ. ಅದರಲ್ಲಿ ಉದ್ದವಿದ್ದ ಕಂಬವನ್ನು ಹಿರಿಯೂರಿಗೆ ತಂದು ಮತ್ತೊಂದು ಭಾಗವನ್ನು ಅದೇ ಗ್ರಾಮದ ರಂಗನಾಥಸ್ವಾಮಿ ದೇಗುಲದ ಮುಂದೆ ಸ್ಥಾಪಿಸಲಾಯಿತು ಎಂದು ಹಿರಿಯರು ಹೇಳುತ್ತಿದ್ದಾರೆ.

    ಹಿಂದೆ ನಾಡನ್ನು ಆಳುತ್ತಿದ್ದ ದೊರೆಗಳು ಕರ್ಪೂರದ ಆರತಿ ಕಾರ್ಯಕ್ರಮವನ್ನು ಪುರುಷರ ಶೌರ್ಯದ ಪ್ರತೀಕವನ್ನಾಗಿ ಪರಿಗಣಿಸಿದ್ದರು. ಧೀರ ಪುರುಷರು 56 ಅಡಿ ಎತ್ತರದ ದೀಪಸ್ತಂಭವನ್ನು ಜೋರಾಗಿ ಏರಿ ಕರ್ಪೂರ ಹಚ್ಚಿ ನೆರೆದಿದ್ದ ಹೆಂಗಳೆಯರ ಮನ ಗೆಲ್ಲುವುದು ವಾಡಿಕೆಯಾಗಿತ್ತು. ಕಾರ್ತಿಕ ಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಸೌಟುಗಳಲ್ಲಿ ದೀಪ ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೀಪದ ಬೆಳಕು ರಾತ್ರಿ ವೇಳೆ ಮೂರು ಕಿಲೋ ಮೀಟರ್ ದೂರದವರೆಗೂ ಕಾಣುತ್ತದೆ. ಅಲ್ಲದೇ ಹಿರಿಯೂರು ತಾಲೂಕು ಸೇರಿದಂತೆ ಚಿತ್ರದುರ್ಗ, ಚಳ್ಳಕೆರೆ, ದಾವಣಗೆರೆ, ಹೊಸದುರ್ಗ ಮತ್ತಿತರರ ಭಾಗಗಳಿಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

    ಶ್ರೀ ತೇರುಮಲ್ಲೇಶ್ವರಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳು ಹಾಗೂ ಸಾರ್ವಜನಿಕರು ತನು, ಮನ, ಧನ, ಧಾನ್ಯರೂಪದಲ್ಲಿ ಸಹಕರಿಸುವುದು, ಸಾರ್ವಜನಿಕರು ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಹಿರಿಯೂರು ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top