Connect with us

    ರೈತರ ಖಾತೆಗೆ ಬೆಳೆ ವಿಮೆ | ವಿಮಾ ಕಂಪನಿಗೆ 21 ದಿನ ಡೆಡ್‌ಲೈನ್‌

    ಮುಖ್ಯ ಸುದ್ದಿ

    ರೈತರ ಖಾತೆಗೆ ಬೆಳೆ ವಿಮೆ | ವಿಮಾ ಕಂಪನಿಗೆ 21 ದಿನ ಡೆಡ್‌ಲೈನ್‌

    CHITRADURGA NEWS | 08 FEBRUARY 2024
    ಚಿತ್ರದುರ್ಗ: ಬೆಳೆ ವಿಮೆಗಾಗಿ ನೋಂದಾಯಿಸಿಕೊಂಡಿರುವ ರೈತರ ಖಾತೆಗೆ ಫೆಬ್ರವರಿ ಅಂತ್ಯದ ವೇಳೆಗೆ ನಿಯಮಾನುಸಾರ ಬೆಳೆವಿಮೆ ಪರಿಹಾರ ಹಣ ಜಮೆಯಾಗುವಂತೆ ಕೃಷಿ ಹಾಗೂ ವಿಮಾ ಕಂಪನಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2023-24ನೇ ಫಸಲ್‌ ಬಿಮಾ ಯೋಜನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಕೇವಲ ದತ್ತಾಂಶಗಳ ಮರು ಪರಿಶೀಲನೆ ಮಾತ್ರ ಬಾಕಿ ಉಳಿದಿದೆ. ಈ ಕಾರ್ಯವನ್ನು 15 ದಿನದ ಒಳಗೆ ಪೂರ್ಣಗೊಳಿಸಿ ಅರ್ಹ ರೈತರ ಖಾತೆ ನೇರವಾಗಿ ಪರಿಹಾರದ ಹಣವನ್ನು ಜಮೆ ಮಾಡಬೇಕು. ಇದಕ್ಕೆ ಯಾವುದೇ ಸಬೂಬುಗಳನ್ನು ನೀಡಬಾರದು ಎಂದು ಎಚ್ಚರಿಸಿದರು.

    ಬೆಳೆ ವಿಮೆ ಪರಿಹಾರದ ಕಾರ್ಯ ಸಂಪೂರ್ಣವಾಗಿ ಪಾರದರ್ಶಕವಾಗಿ ಇರಬೇಕು. ತಾಂತ್ರಿಕ ಕಾರಣಗಳಿಂದ ಬೆಳೆವಿಮೆ ಪರಿಹಾರದ ಹಣ ಬಿಡುಗಡೆ ಆಗದಿದ್ದರೆ, ಅಥವಾ ಕೆಲವು ರೈತರ ಖಾತೆಗೆ ಜಮೆ ಆಗದಿದ್ದರೆ ಈ ಕುರಿತು ಪ್ರತಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೂ ಮಾಹಿತಿ ನೀಡಬೇಕು. ರೈತರು ಗೊಂದಲಕ್ಕೆ ಒಳಗಾಗದಂತೆ ತಿಳಿ ಹೇಳಬೇಕು ಎಂದರು.

    ಇದನ್ನೂ ಓದಿ: ಕೋಟೆನಾಡಿಗೆ ಬರುತ್ತಿದ್ದಾರೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ

    ಕೃಷಿ ವಿಮಾ ಕಂಪನಿಗಳು ಬೆಳೆ ಪರಿಹಾರದ ಕಾರ್ಯವನ್ನು ವ್ಯಾಪಾರೀಕರಣದ ದೃಷ್ಠಿಯಿಂದ ನೋಡಬಾರದು. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ತಾಲ್ಲೂಕುಗಳಲ್ಲಿಯೂ ವಿಮಾ ಕಂಪನಿ ಪ್ರತಿನಿಧಿಗಳನ್ನು ನೇಮಕ ಮಾಡಬೇಕು ಎಂದು ಹೇಳಿದರು.

    2023-24ನೇ ಸಾಲಿನಲ್ಲಿ ಜಿಲ್ಲೆಯ 2,59,486 ಎಕರೆ ಕೃಷಿ ಭೂಮಿಯ ಪೈಕಿ, 1,05,000 ಎಕೆರೆ ಪ್ರದೇಶಕ್ಕೆ 80,633 ರೈತರು ಬೆಳೆ ವಿಮೆ ನೊಂದಾವಣಿ ಮಾಡಿಸಿದ್ದಾರೆ. ಇದರಲ್ಲಿ ಶೇಂಗಾ 38,496, ಮುಸುಕಿ ಜೋಳ 27,396 , ತೊಗರಿ 4,109, ರಾಗಿ 2,719, ಸಾಮೆ 3,790, ಹೆಸರು 2,427, ಹತ್ತಿ 1,960, ಸೂರ್ಯಕಾಂತಿ 675, ಟೊಮ್ಯಾಟೊ ಬೆಳೆಗೆ 97, ಎಳ್ಳು 17, ಹುರುಳಿ 70, ನವಣೆ 376, ಸಜ್ಜೆ 51, ಕೆಂಪು ಮೆಣಸಿನಕಾಯಿಗೆ 61 ರೈತರು ಬೆಳೆ ವಿಮೆಗೆ ನೊಂದಾಯಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.

    ರಾಜ್ಯದಲ್ಲಿ ಖಾಸಗಿ ಬೆಳೆ ವಿಮೆ ಕಂಪನಿಗಳು ರೈತರನ್ನು ಶೋಷಣೆ ಮಾಡುತ್ತಿವೆ. ಬೆಳೆ ವಿಮೆ ಕಟ್ಟಿಸಿಕೊಳ್ಳಲು ದಿನಾಂಕ ನಿಗದಿ ಮಾಡುವ ಕಂಪನಿಗಳು, ಸಕಾಲದಲ್ಲಿ ಬೆಳೆವಿಮೆಯ ಪರಿಹಾರದ ಮೊತ್ತವನ್ನು ಪಾತಿಸಲು ದಿನಾಂಕ ನಿಗದಿ ಮಾಡುವುದಿಲ್ಲ. ರಾಜ್ಯದಲ್ಲಿ ಬರ ಘೋಷಣೆ ಆದ ತಕ್ಷಣ ಮಧ್ಯಂತರ ಪರಿಹಾರವನ್ನು ಬೆಳೆ ವಿಮೆ ಕಂಪನಿ ನೀಡಬೇಕಿತ್ತು. ವಿವಿಧ ಜಿಲ್ಲೆಗಳಲ್ಲಿ ಮಧ್ಯಂತರ ಪರಿಹಾರ ನೀಡಲಾಗಿದೆ. ಜಿಲ್ಲೆಯ ರೈತರಿಗೆ ಮಾತ್ರ ನೀಡಿಲ್ಲ ಎಂದು ರೈತ ಮುಖಂಡ ಕೆ.ಪಿ.ಭೂತಯ್ಯ ದೂರಿದರು.

    ಇದನ್ನೂ ಓದಿ: ರಾಜೇಂದ್ರ ಸಿಂಗ್ ಬಾಬು ಸೇರಿ ಐವರಿಗೆ ಭಗೀರಥ ರತ್ನ ಪ್ರಶಸ್ತಿ | ಭಗೀರಥ ಶ್ರೀಗಳ ರಜತ ಮಹೋತ್ಸವ

    ಬೆಳೆವಿಮೆ ಕಂಪನಿಗಳು ನೊಂದಣಿ ಮಾಡಿರುವ ರೈತರಿಗೆ ಯಾವುದೇ ರೀತಿ ಬಾಂಡ್‍ಗಳನ್ನು ನೀಡುತ್ತಿಲ್ಲ. ಇತರೆ ಜೀವ ವಿಮೆ ಕಂಪನಿಗಳ ಮಾದರಿಯಲ್ಲಿ ಬೆಳೆವಿಮೆ ಬಾಂಡ್‍ಗಳನ್ನು ನೀಡಬೇಕು. ನೆರೆಯ ಆಂದ್ರ ಹಾಗೂ ತೆಲಂಗಾಣ ರಾಜ್ಯದಲ್ಲಿನ ಮಾದರಿಯಂತೆ ನಮ್ಮಲ್ಲಿಯೂ ಸರ್ಕಾರಿ ವಿಮಾ ಕಂಪನಿಗಳೇ ಬೆಳೆವಿಮೆಯನ್ನು ನೊಂದಾಯಿಸಿಕೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು.

    ಫಸಲ್ ಬೀಮಾ ಯೋಜನೆ ಸಂಪೂರ್ಣ ಪಾರದರ್ಶವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಬಾರಿ 8 ತಿಂಗಳ ಒಳಗೆ ರೈತರ ಖಾತೆ ಪರಿಹಾರ ಧನ ಜಮೆ ಮಾಡಲಾಗಿದೆ. ಪೂರ್ಣ ಪ್ರಮಾಣದ ಪರಿಹಾರ ಧನವನ್ನು ಜಮೆ ಮಾಡಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರವನ್ನು ನೀಡಿಲ್ಲ. ಫೆಬ್ರವರಿ ಅಂತ್ಯದ ವೇಳೆ ಸಂಪೂರ್ಣ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆ ಆಗುವ ನಿರೀಕ್ಷೆ ಇದೆ ಎಂದು ಜಂಟಿ ನಿರ್ದೇಶಕ ಮಂಜುನಾಥ ಸ್ಪಷ್ಟನೆ ನೀಡಿದರು.

    ಕೃಷಿ ಇಲಾಖೆ ಉಪನಿರ್ದೇಶಕ ಡಾ.ಶಿವಕುಮಾರ್, ನರ್ಬಾಡ್ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕಿ ಕವಿತಾ ಶಶಿಧರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್, ಚಿತ್ರದುರ್ಗ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ವಿಮಾ ಕಂಪನಿಯ ಜಿಲ್ಲಾ ವ್ಯವಸ್ಥಾಪಕ ಹರ್ಷವರ್ಧನ್, ರೈತ ಮುಖಂಡರಾದ ಕೊಂಚೆ ಶಿವರುದ್ರಪ್ಪ, ಹಂಪಯ್ಯನ ಮಾಳಿಗೆ ಧನಂಜಯ್ ಸೇರಿದಂತೆ ಇತರೆ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top