Connect with us

ಸೌಭಾಗ್ಯ-ಬಸವರಾಜನ್ ವಿರುದ್ಧದ ಪಿತೂರಿ ಪ್ರಕರಣ ರದ್ದು | ಬಸವಪ್ರಭು ಶ್ರೀಗಳಿಗೆ ಹಿನ್ನಡೆ

ಎಸ್.ಕೆ.ಬಸವರಾಜನ್, ಸೌಭಾಗ್ಯ ಬಸವರಾಜನ್

ಮುಖ್ಯ ಸುದ್ದಿ

ಸೌಭಾಗ್ಯ-ಬಸವರಾಜನ್ ವಿರುದ್ಧದ ಪಿತೂರಿ ಪ್ರಕರಣ ರದ್ದು | ಬಸವಪ್ರಭು ಶ್ರೀಗಳಿಗೆ ಹಿನ್ನಡೆ

ಚಿತ್ರದುರ್ಗ ನ್ಯೂಸ್.ಕಾಂ: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪಿತೂರಿ ನಡೆಸಿದ ಆರೋಪದಲ್ಲಿ ಮಠದ ಮಾಜಿ ಆಡಳಿತಾಧಿಕಾರಿಯೂ ಆಗಿರುವ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರ ಮೇಲಿನ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.

ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡಲು ಕೋರಿ ಬಸವರಾಜನ್ ಹಾಗೂ ಸೌಭಾಗ್ಯ ಹೈಕೋರ್ಟ್‍ಗೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು. ಶುಕ್ರವಾರ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದು ಮಾಡಿ ಆದೇಶಿಸಿದೆ.

ಇದನ್ನೂ ಓದಿ: ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯ | ನ.8ಕ್ಕೆ ಆದೇಶ ಸಾಧ್ಯತೆ

ಅರ್ಜಿಯ ವಿಚಾರಣೆ ವೇಳೆ ಬಸವರಾಜನ್ ದಂಪತಿ ಪರ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ಮಠದ ತಾತ್ಕಾಲಿಕ ಉಸ್ತುವಾರಿಗಳಾಗಿರುವ ಶ್ರೀ ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ದೂರಿನಲ್ಲಿ ಹುರುಳಿಲ್ಲ. ಶರಣರ ವಿರುದ್ಧ ದಾಖಲಾಗಿರುವ ಬಾಲಕಿಯರ ಮೇಲಿನ ಅತ್ಯಾಚಾರ ಆಪಾದನೆಗಳಿಂದ ರಕ್ಷಣೆ ಪಡೆಯಲು ಇಂತಹ ಕೌಂಟರ್ ಕೇಸ್ ದಾಖಲಿಸಲಾಗಿದೆ ಎಂದು ಪ್ರತಿಪಾದಿಸಿದ್ದರು.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರನ್ನು ಉದ್ದೇಶಿಸಿ ನ್ಯಾಯಪೀಠ, ಪೋಕ್ಸೋ ಪ್ರಕರಣದಲ್ಲಿ ಈ ಅರ್ಜಿದಾರರು ಸಾಕ್ಷಿಗಳಾಗಿದ್ದಾರೆ. ಅವರ ವಿರುದ್ಧ ಪ್ರತಿದೂರು ದಾಖಲಿಸಿರುವಾಗ ಸಾಕ್ಷಿದಾರರ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿತ್ತು. ಪೋಕ್ಸೋ ಪ್ರಕರಣದ ವಿಚಾರಣೆ ದಿಕ್ಕು ತಪ್ಪುವುದಿಲ್ಲವೇ, ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ವಿಚಾರಣೆ ಪೂರ್ಣಗೊಂಡರೆ ಎಲ್ಲ ಸತ್ಯಾಂಶವೂ ಹೊರಬರಲಿದೆ ಎಂದು ನ್ಯಾಯಪೀಠ ಹೇಳಿದೆ.

ಎಸ್.ಕೆ.ಬಸವರಾಜನ್, ಸೌಭಾಗ್ಯ ಬಸವರಾಜನ್

ಸೌಭಾಗ್ಯ-ಬಸವರಾಜನ್ ಪ್ರಕರಣದ ಹಿನ್ನೆಲೆ:

ಮುರುಘಾ ಶ್ರೀಗಳ ಬಂಧನದ ನಂತರ, ಹೊರಗೆ ಬಂದಿದ್ದ ಆಡಿಯೋ ಒಂದರಲ್ಲಿ ಮಠದ ಶಾಲೆಯ ಶಿಕ್ಷಕ ಬಸವರಾಜೇಂದ್ರ ಹಾಗೂ ಗಾಯತ್ರಿ ಎಂಬುವವರು ಮಕ್ಕಳಿಗೆ ಪ್ರಚೋಧನೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆಡಿಯೋ ಸಂಬಂಧ ಮುರುಘಾ ಮಠದ ಉಸ್ತುವಾರಿಗಳಾಗಿರುವ ಶ್ರೀ ಬಸವಪ್ರಭು ಸ್ವಾಮೀಜಿ ಶಿಕ್ಷಕ ಬಸವರಾಜೇಂದ್ರ, ಗಾಯತ್ರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಸೌಭಾಗ್ಯ ಬಸವರಾಜನ್ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಮುರುಘಾ ಶರಣರ ವಿರುದ್ಧ ವ್ಯವಸ್ಥಿತ ಪಿತೂರಿ | ಹೈಕೋರ್ಟ್‍ನಲ್ಲಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ

ದೂರಿನ ಅನ್ವಯ ಮಾಜಿ ಶಾಸಕ ಬಸವರಾಜನ್, ಅವರ ಪತ್ನಿ ಸೌಭಾಗ್ಯ ಹಾಗೂ ಶಿಕ್ಷಕ ಬಸವರಾಜೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದರು. ಸುಮಾರು ಒಂದು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಪೊಲೀಸರು ಒತ್ತಡದಿಂದ ದಾಖಲಿಸಿದ್ದ ಕೇಸ್: ಎಸ್‍ಕೆಬಿ

ಹೈಕೋರ್ಟ್ ತೀರ್ಪು ಹೊರಬಿದ್ದ ನಂತರ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮಬ್ಬರ ಮೇಲೆ ಪಿತೂರಿ ಆರೋಪ ಹೊರಿಸಿ ಮಾಡಿದ್ದ ಷಡ್ಯಂತ್ರದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡುವ ಮೂಲಕ ನ್ಯಾಯಕ್ಕೆ ಜಯ ಸಿಕ್ಕಿದೆ.

ಸಂತ್ರಸ್ಥ ಮಕ್ಕಳಿಗೆ ಬೆಂಬಲ ನೀಡಿದವರನ್ನು ಭಯಭೀತರನ್ನಾಗಿಸುವ ಪ್ರಯತ್ನ ಇದಾಗಿತ್ತು. ನಾವು ಮಕ್ಕಳ ಪರ ಸಾಕ್ಷಿಗಳಾಗಿದ್ದೇವೆ. ನ್ಯಾಯಾಲಯದಲ್ಲಿ ಹೇಳಿಕೆಯನ್ನೂ ನೀಡಿದ್ದೇವೆ. ಹೀಗಿದ್ದಾಗ ನಮ್ಮ ವಿರುದ್ಧ ದೂರು ದಾಖಲಿಸಲು ಸಾಧ್ಯವೇ ಇಲ್ಲ. ಆದರೆ, ಪೊಲೀಸ್ ಇಲಾಖೆ ಬಸವಪ್ರಭು ಸ್ವಾಮೀಜಿಗಳ ಮಾತು ಕೇಳಿ ತಪ್ಪು ಮಾಡಿದೆ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version