ಮುಖ್ಯ ಸುದ್ದಿ
ಲೋಕಸಭೆ ಚುನಾವಣೆ ಬಹಿಷ್ಕಾರ | ಪಟ್ಟು ಸಡಿಲಿಸದಿರಲು ಭರಮಗಿರಿ ರೈತರ ಒಮ್ಮತದ ನಿರ್ಧಾರ | ನೀರಾವರಿ ಹೋರಾಟ ಸಮಿತಿ ಬೆಂಬಲ
CHITRADURGA NEWS | 29 MARCH 2024
ಚಿತ್ರದುರ್ಗ: ನೀರಿನ ವಿಚಾರದಲ್ಲಿ ಕಳೆದ 25 ವರ್ಷದ ಬೇಡಿಕೆಗೆ ಸ್ಪಂದನೆ ಸಿಗದ ಕಾರಣ ಚುನಾವಣೆ ಬಹಿಷ್ಕಾರದ ಪಟ್ಟು ಸಡಿಲಿಸದಿರಲು ಭರಮಗಿರಿ ರೈತರು ನಿರ್ಧಾರ ಮಾಡಿದ್ದಾರೆ.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದಲ್ಲಿ ಭರಮಗಿರಿ ಕೆರೆಗೆ ವಾಣಿವಿಲಾಸ ಅಣೆಕಟ್ಟೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ಗುರುವಾರ ಕೆರೆ ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ರೈತರು ಪುನಃ ಮತ್ತೊಂದು ಸುತ್ತಿನ ಸಭೆ ನಡೆಸಿದರು.
ಭರಮಗಿರಿ ಕೆರೆಗೆ ಐತಿಹಾಸಿಕ ಮಹತ್ವ ಇದ್ದು, 25 ವರ್ಷದಿಂದ ಕೆರೆಗೆ ವಾಣಿವಿಲಾಸ ಜಲಾಶಯದಿಂದ ನೀರು ಹರಿಸುವಂತೆ ಮನವಿ ಮಾಡುತ್ತಾ ಬಂದಿದ್ದರೂ ಆಡಳಿತಶಾಹಿ ಸ್ಪಂದಿಸದ ಕಾರಣ ಲೋಕಸಭಾ ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂಬ ತೀರ್ಮಾನವನ್ನು ಸಭೆಯಲ್ಲಿ ರೈತರು ತೆಗೆದುಕೊಂಡಿದ್ದಾರೆ.
ಕೆರೆಗೆ ನೀರು ಹರಿಸುವಂತೆ ಅಚ್ಚುಕಟ್ಟು ರೈತರು ನಡೆಸುತ್ತಿರುವ ಹೋರಾಟವನ್ನು ನೀರಾವರಿ ಹೋರಾಟ ಸಮಿತಿ ಬೆಂಬಲಿಸುತ್ತದೆ. ಚುನಾವಣೆ ನೆಪ ಹೇಳದೆ ಕೆರೆಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆಗ್ರಹಿಸಿದರು.
ಕ್ಲಿಕ್ ಮಾಡಿ ಓದಿ: ಕೈ ತಪ್ಪಿದ ಬಿಜೆಪಿ ಟಿಕೆಟ್ | ಪ್ರಬಲ ಆಕಾಂಕ್ಷಿ ರಘುಚಂದನ್ ಅಸಮಾಧಾನ | ನಾಳೆ ಬೆಂಬಲಿಗರ ಸಭೆ
ಭರಮಗಿರಿ ಕೆರೆ ವಾಣಿವಿಲಾಸ ಜಲಾಶಯದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ತಂತ್ರಜ್ಞಾನ ಬಳಸಿಕೊಂಡು ಚುನಾವಣೆ ಒಳಗೆ ನೀರು ಹರಿಸುವುದು ದೊಡ್ಡ ಸಂಗತಿಯಲ್ಲ. ಆದರೆ ಚುನಾವಣೆ ಕಾರಣ ಹೇಳುತ್ತಾ ಮುಂದೂಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಲಿಕ್ ಮಾಡಿ ಓದಿ: ಯಡಿಯೂರಪ್ಪ ವಿರುದ್ಧ ಗುಡುಗಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ
ಕೆರೆ ಸಮಿತಿ ಅಧ್ಯಕ್ಷ ವೀರಭದ್ರಪ್ಪ, ಮೂರ್ತಿ, ಮೂಡ್ಲಪ್ಪ, ಓಂಕಾರಪ್ಪ, ರಮೇಶ್, ವಂದೇ ಮಾತರಂ ವೇದಿಕೆಯ ದೇವರಾಜ್, ನಾಗಣ್ಣ, ಎಸ್.ಕೆ. ರಘು, ಕಸವನಹಳ್ಳಿ ರಾಮಚಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಉಮೇಶ್, ಯೋಗೇಶ್ವರ್, ಕಕ್ಕಯ್ಯನಹಟ್ಟಿ ಚಂದ್ರಪ್ಪ, ಕೆ.ಆರ್. ತಿಪ್ಪೇಸ್ವಾಮಿ, ಕಾಂತಣ್ಣ, ವೆಂಕಟಾಚಲಯ್ಯ, ಅಗಳೇರಟ್ಟಿ ನಾಗರಾಜ್, ಕುರುಬರಹಳ್ಳಿ ರಘುನಾಯ್ಕ್, ಬಿ.ಎಸ್.ಕೆಂಚಪ್ಪ, ತಳವಾರಹಟ್ಟಿ ತಿಮ್ಮರಾಜ್, ಮುನ್ನಾ, ಕವಿತಾ ಕಣುಮಪ್ಪ, ಬಿ.ಕೆ.ಲೋಕೇಶ್, ಜಯರಾಮಯ್ಯ, ಕಾಂತರಾಜ್, ಎನ್.ಮಂಜುನಾಥ್ ಸಭೆಯಲ್ಲಿ ಪಾಲ್ಗೊಂಡಿದ್ದರು.