ಮುಖ್ಯ ಸುದ್ದಿ
ಹಿಂದೂ ಮಹಾಗಣಪತಿ ಶೋಭಾಯಾತ್ರೆ ಯಶಸ್ವಿ | ಎಸ್ಪಿ ಧಮೇಂದರ್ ಕುಮಾರ್ ಮೀನಾ ಅಭಿನಂದಿಸಿದ ಮಾದಾರ ಶ್ರೀ
ಚಿತ್ರದುರ್ಗ ನ್ಯೂಸ್.ಕಾಂ: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಲಕ್ಷಗಟ್ಟಲೇ ಜನ ಸೇರಿದರೂ ಸಣ್ಣ ಅಹಿತಕರ ಘಟನೆ ನಡೆಯದಂತೆ, ಎಲ್ಲವೂ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಪೊಲೀಸ್ ಇಲಾಖೆಯ ಶ್ರಮ ಅಪಾರವಾಗಿದೆ.
ಅದರಲ್ಲೂ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿ ಒಂದೇ ತಿಂಗಳಲ್ಲಿ ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಂಡು ಇಷ್ಟು ದೊಡ್ಡ ಮಟ್ಟದ ಕೆಲಸವನ್ನು ಸರಾಗವಾಗಿ ಮುಗಿಸಿರುವ ಧರ್ಮೇಂದರ್ ಕುಮಾರ್ ಮೀನಾ ಅವರ ಕಾರ್ಯ ವೈಖರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಭಾನುವಾರ ಗಣಪತಿ ಶೋಭಾಯಾತ್ರೆ ಪ್ರಾರಂಭವಾದಾಗಿನಿಂದ ಮುಗಿಯುವವರೆಗೆ ಮಾರ್ಗದುದ್ದಕ್ಕೂ ಓಡಾಡಿಕೊಂಡು ಚಟುವಟಿಕೆಯಿಂದ ಎಲ್ಲವನ್ನೂ ಗಮನಿಸುತ್ತಾ, ಸಿಬ್ಬಂದಿಗಳನ್ನು ಎಚ್ಚರಿಸುತ್ತಾ ಸಾಗಿದ ಎಸ್ಪಿ ಅವರ ಕಾರ್ಯವೈಖರಿಗೆ ಜನತೆ ಭೇಷ್ ಎಂದಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿಗೆ ವಿದಾಯ | ಹೇಗಿತ್ತು ಗಣಪತಿಯ ವಿಸರ್ಜನೆ
ಶೊಭಾಯಾತ್ರೆ ಮೆರವಣಿಗೆ ರಾತ್ರಿ 11 ಗಂಟೆವರೆಗೆ ನಡೆಯುತ್ತಿತ್ತು. ಆದರೆ, ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಅವರ ನಿರಂತರ ಇರುವಿಕೆ 9.30ಕ್ಕೆ ಚಂದ್ರವಳ್ಳಿ ತಲುಪುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಗಣಪತಿ ಶೋಭಾಯಾತ್ರೆಗೆ 8ಕ್ಕಿಂತ ಹೆಚ್ಚು ಡಿಜೆಗಳು ಬಂದಿದ್ದರೂ, 3 ಡಿಜೆಗಳಿಗೆ ಮಾತ್ರ ಅನುಮತಿ ನೀಡಿ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಮಾಡಲಾಗಿತ್ತು.
ಗಣಪತಿ ಶೋಭಾಯಾತ್ರೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಹಿನ್ನೆಲೆಯಲ್ಲಿ ಸೋಮವಾರ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಎಸ್ಪಿ ಧಮೇಂದರ್ ಕುಮಾರ್ ಮೀನಾ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಮಾರ್ಗದರ್ಶಕರಾದ ಟಿ.ಬದರೀನಾಥ್ ಇದ್ದರು.