Connect with us

ಹೊಳಲ್ಕೆರೆಯ ನಂಟು ಬಿಟ್ಟು ಹೋದ ಹಾಸ್ಯ ನಟ ಬ್ಯಾಂಕ್ ಜನಾರ್ದನ್ 

Bank Janardhan

ಮುಖ್ಯ ಸುದ್ದಿ

ಹೊಳಲ್ಕೆರೆಯ ನಂಟು ಬಿಟ್ಟು ಹೋದ ಹಾಸ್ಯ ನಟ ಬ್ಯಾಂಕ್ ಜನಾರ್ದನ್ 

CHITRADURGA NEWS | 15 April 2025

ಕನ್ನಡ ಚಿತ್ರರಂಗದ ಹಾಸ್ಯ ನಟ, 860 ಚಿತ್ರಗಳಲ್ಲಿ ನಟಿಸಿದ್ದ, ಬ್ಯಾಂಕ್ ಜನಾರ್ದನ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ 1949ರಲ್ಲಿ ಜೆಸಿ ಬಡಾವಣೆಯಲ್ಲಿ ಜನಿಸಿದ್ದರು.

ಬ್ಯಾಂಕ್ ಜನಾರ್ದನ್ ಹುಟ್ಟಿ ಬೆಳೆದಿದ್ದು ಹೊಳಲ್ಕೆರೆಯಲ್ಲಿ, ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಎಂಎಂ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದರು.

ಜನಾರ್ದನ್ ತಂದೆ ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ಜೀಪ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.  ಬಡನದಲ್ಲಿದ್ದ ಜನಾರ್ದನ್ ಕುಟುಂಬ ಪಟ್ಟಣದ ಗುಡಿಸಲೊಂದರಲ್ಲಿ ವಾಸ ಮಾಡುತ್ತಿತ್ತು. ತಂದೆ ನಿವೃತ್ತರಾದ ನಂತರ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಅವರ ತಾಯಿ ಕೂಲಿ ಹೋಗಿ ಮಕ್ಕಳನ್ನು ಸಾಕಿದರು. ಜನಾರ್ದನ್ ಕೂಡ ತಾಯಿಯೊಂದಿಗೆ ಕೂಲಿ ಹೋಗುತ್ತಿದ್ದರು.

ಜನಾರ್ದನ್ ಪಟ್ಟಣದ ವೈದ್ಯ ಉದಯ ಶೆಟ್ಟಿ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎಸ್ಎಸ್‌ಎಲ್‌ಸಿ ಮುಗಿಸಿದ್ದ ಜನಾರ್ದನ್ ಅವರನ್ನು ಡಾ.ಉದಯ ಶೆಟ್ಟಿ ಪಟ್ಟಣದ ವಿಜಯಾ ಬ್ಯಾಂಕ್ ನಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಸಿದರು.

ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ಜನಾರ್ದನ್ ಯುವಕರ ಗುಂಪು ಕಟ್ಟಿಕೊಂಡು ನಾಟಕ ಆಡುತ್ತಿದ್ದರು. ಮೊದಲು ಗಣೇಶನ ಪೆಂಡಾಲ್‌ನಲ್ಲಿ ನಾಟಕ ಆಡುತ್ತಿದ್ದ ಜನಾರ್ದನ್‌ಗೆ ಸಿದ್ದೇಶ್ವರ ನಾಟಕ ಕಂಪನಿಯಲ್ಲಿ ಅವಕಾಶ ಸಿಕ್ಕಿತು. ಆಗ ಪಟ್ಟಣಕ್ಕೆ ಬಂದಿದ್ದ ಧೀರೇಂದ್ರ ಗೋಪಾಲ್ ಅವರು ಜನಾರ್ದನ್ ನಟನೆ ಕಂಡು ಬೆಂಗಳೂರಿಗೆ ಕರೆಸಿಕೊಂಡು ಸಿನಿಮಾದಲ್ಲಿ ಪಾತ್ರ ಕೊಟ್ಟರು.

ಜನಾರ್ದನ್ ಕುಟುಂಬ ಹಲವು ವರ್ಷ ಹೊಳಲ್ಕೆರೆಯಲ್ಲೇ ವಾಸವಿದ್ದರೂ. ನಟರಾದ ನಂತರವೂ ಅವರು ಪಟ್ಟಣದ ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಹಾಕಿ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದರು. ಇಲ್ಲಿ ವಾಸವಿದ್ದುಕೊಂಡೇ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರ ತಂದೆಯ ನಿಧನದ ನಂತರ ಇಲ್ಲಿ ಅವರಿಗಿದ್ದ 2 ಎಕರೆ ಜಮೀನು, ಮನೆ ಮಾರಾಟ ಮಾಡಿ ಬೆಂಗಳೂರಿಗೆ ಹೋದರು.

ಬ್ಯಾಂಕ್‌ನಲ್ಲಿ ತಿಂಗಳಿಗೆ ರೂ.50 ಸಂಬಳ

ಪಟ್ಟಣದ ವಿಜಯಾ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದಾಗ ಜನಾರ್ದನ್ ತಿಂಗಳಿಗೆ ರೂ.50 ಸಂಬಳ ಪಡೆಯುತ್ತಿದ್ದರು. ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿರುವಂತೆ ಆಗಿನ ಕಾಲಕ್ಕೆ ಇದು ದೊಡ್ಡ ಮೊತ್ತವಾಗಿತ್ತು. ಇದರ ಜತೆಗೆ ಭಾನುವಾರ ಹಾಗೂ ರಜಾ ದಿನಗಳಲ್ಲಿ ಡಾ.ಶಂಕರ ಶೆಟ್ಟಿ ತೋಟಕ್ಕೆ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಅವರು ವಾರಕ್ಕೊಮ್ಮೆ ಕೂಲಿ ಕೊಡುತ್ತಿದ್ದರು. ಆ ಹಣದಲ್ಲಿ ಸಂತೆ ಮಾಡಿಕೊಂಡು ಮನೆಗೆ ಹೋಗುತ್ತಿದ್ದೆ. ರಾತ್ರಿ ಪಟ್ಟಣದ ಮಲ್ಲಿಕಾರ್ಜುನ್ ಟೂರಿಂಗ್ ಟಾಕೀಸ್‌ನಲ್ಲಿ ರೀಲ್ ಸುತ್ತುವ ಕೆಲಸ ಮಾಡುತ್ತಿದ್ದೆ. ಅವರು ದಿನಕ್ಕೆ ರೂ. 1 ಎರಡು ಟೀ ಒಂದು ಬನ್ ನೀಡುತ್ತಿದ್ದರು. ನಾಟಕ ಕಂಪನಿಯಲ್ಲಿ ಅವಕಾಶ ಸಿಕ್ಕಿದ ನಂತರ ಹಣ ಕೂಡಿಸಿ ಕಪ್ಪು ಹೆಂಚಿನ ಮನೆ ಖರೀದಿಸಿದೆ ಎಂದು ಅವರು ಸಂಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಸಿನಿ ಜೀವನ 

ಬ್ಯಾಂಕ್ ಜನಾರ್ಧನ್ 1985ರಲ್ಲಿ ತೆರೆಕಂಡ ಪಿತಾಮಹ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಪಾಪಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಶಿವರಾಜ್‌ಕುಮಾರ್, ರವಿಚಂದ್ರನ್, ಶಂಕರ್ ನಾಗ್, ಅನಂತ್ ನಾಗ್ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸಿದ್ದಾರೆ. ದೊಡ್ಡಮಟ್ಟಕ್ಕೆ ಅವಕಾಶಗಳು ಸಿಗದೇ ಇದ್ದರೂ ಸಿಕ್ಕ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿ ಗೆದ್ದಿದ್ದರು. ಶಾಲಾ ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಹಾಗಾಗಿ ಕೊನೆಗೆ ಚಿತ್ರರಂಗ ಪ್ರವೇಶಿಸಿದರು. ಉಪೇಂದ್ರ ಹಾಗೂ ಕಾಶಿನಾಥ್ ಸಿನಿಮಾಗಳಲ್ಲಿ ಒಳ್ಳೆ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version