Connect with us

    ಗಾಳಿಯಲ್ಲಿ ಹಾರಿಹೋದ ಬಸ್ ಟಿಕೆಟ್‌ | ನಡು ರಸ್ತೆಯಲ್ಲೇ ಮಹಿಳೆಯನ್ನು ಇಳಿಸಿದ ನಿರ್ವಾಹಕ

    ಮುಖ್ಯ ಸುದ್ದಿ

    ಗಾಳಿಯಲ್ಲಿ ಹಾರಿಹೋದ ಬಸ್ ಟಿಕೆಟ್‌ | ನಡು ರಸ್ತೆಯಲ್ಲೇ ಮಹಿಳೆಯನ್ನು ಇಳಿಸಿದ ನಿರ್ವಾಹಕ

    CHITRADURGA NEWS | 14 JUNE 2024
    ಚಿತ್ರದುರ್ಗ:‌ ಬಸ್‌ ಟಿಕೆಟ್‌ ಗಾಳಿಯಲ್ಲಿ ಹಾರಿಹೋದ ಕಾರಣ ನಡು ರಸ್ತೆಯಲ್ಲೇ ಮಹಿಳೆಯನ್ನು ನಿರ್ವಾಹಕ ಬಸ್‌ನಿಂದ ಇಳಿಸಿದ ಘಟನೆ ಹುಳಿಯಾರು ಬಳಿ ನಡೆದಿದೆ. ಘಟನೆಯಿಂದ ನೊಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯು.ಚೈತ್ರಾ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಿದ್ದಾರೆ.

    ಬುಧವಾರದಂದು ಸಾಲಕಟ್ಟೆ ಗ್ರಾಮದ ಗೇಟ್‌ನಿಂದ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ (ಕೆಎ-06-ಎಫ್ 1194) ಹತ್ತಿದೆ. ಸಂಜೆ 4.30 ಆಸುಪಾಸಿನಲ್ಲಿ ಹುಳಿಯಾರು ಬಸ್ ನಿಲ್ದಾಣದ ಬಳಿ ಕೈಯಲ್ಲಿದ್ದ ಟಿಕೆಟ್ ಕೈತಪ್ಪಿ ಗಾಳಿಯಲ್ಲಿ ಹಾರಿದೆ. ಇದನ್ನು ಬಸ್ ನಿರ್ವಾಹಕರು ನೋಡಿದ್ದಾರೆ. ಅಷ್ಟರಲ್ಲಾಗಲೇ ಬಸ್ ಹುಳಿಯಾರು ಪಟ್ಟಣ ಬಿಟ್ಟು ಮುಂದೆ ಬಂದಿದೆ.

    ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಕಾರು ಚಾಲಕ ರವಿ ಪೊಲೀಸರಿಗೆ ಶರಣಾಗತಿ

    ಇನ್ನೊಂದು ಟಿಕೆಟ್ ಕೊಡಿ ಎಂದು ಮನವಿ ಮಾಡಿದೆ. ಅದಕ್ಕೆ ನಿರ್ವಾಹಕ ಕೊಡಲು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಹಣ ಪಾವತಿಸುತ್ತೇನೆ ಕೊಡಿ ಎಂದರೂ ಮತ್ತೊಂದು ಟಿಕೆಟ್ ನೀಡಿಲ್ಲ ಎಂದು ಚೈತ್ರಾ ಅವರು ದೂರಿನಲ್ಲಿ ತಿಳಿಸಿದ್ದಾರೆ.

    ಕೋಪಗೊಂಡ ನಿರ್ವಾಹಕ ಅವಾಚ್ಯವಾಗಿ ನಿಂದಿಸಿದ್ದಾರೆ. ಏಕಾಏಕಿ ಬಸ್ ನಿಲ್ಲಿಸಿ, ನಡುರಸ್ತೆಯಲ್ಲಿಯೇ ಕೆಳಗಿಳಿಸಿ ಬಸ್ ಚಲಾಯಿಸಿಕೊಂಡು ಹೋದರು ಎಂದು ಆರೋಪಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: ರೇಣುಕಸ್ವಾಮಿ ಕೊಲೆ ಕೇಸ್‌ | ತಡರಾತ್ರಿ ನಡೆಯಿತು ಸ್ಥಳ ಮಹಜರು

    ಈ ಘಟನೆಯಿಂದ ಮನಸ್ಸಿಗೆ ಬಹಳ ಘಾಸಿಯಾಗಿದೆ. ಕಿಂಚಿತ್ತೂ ಗೌರವ ಕೊಡದೆ, ಸೌಜನ್ಯದಿಂದ ವರ್ತಿಸದೇ ನಿಂದಿಸಿದ್ದಾರೆ. ವ್ಯವಸ್ಥೆಯ ಮೇಲೆ ಅಸಹ್ಯ ಉಂಟಾಗುವಂತೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ನಿಗಮದ ಮುಖ್ಯಸ್ಥರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಲ್ಲಿ ಪ್ರಯಾಣಿಸುವಾಗ, ಪ್ರಯಾಣಿಕರು ಟಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ, ಬಸ್ ನಿರ್ವಾಹಕರ ಗಮನಕ್ಕೆ ತಂದು ಮತ್ತೊಂದು ಟಿಕೆಟ್ ಪಡೆಯಲು ಅವಕಾಶವಿದೆ. ಯಾವುದೇ ಕಾರಣಕ್ಕೂ ನಡು ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಒತ್ತಾಯ ಪೂರ್ವಕವಾಗಿ ಬಸ್‌ನಿಂದ ಕೆಳಗಿಳಿಸುವಂತಿಲ್ಲ. ಪ್ರಯಾಣಿಕರ ಬಳಿ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ತುಮಕೂರು ಡಿಪೋಗೆ ಸೇರಿದ ಬಸ್ ಇದಾಗಿದ್ದು, ವರದಿ ಲಗತ್ತಿಸಿ, ದೂರನ್ನು ತುಮಕೂರು ಘಟಕ ವ್ಯವಸ್ಥಾಪಕರಿಗೆ ವರ್ಗಾಯಿಸಲಾಗಿದೆ ಎಂದು ಹೊಸದುರ್ಗ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರು ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top