ಮುಖ್ಯ ಸುದ್ದಿ
ಬೀದಿ ನಾಯಿಗೆ ಬಾಲಕ ಬಲಿ; ಪಾಲಕರ ಆಕ್ರಂದನ
ಚಿತ್ರದುರ್ಗನ್ಯೂಸ್.ಕಾಂ
ನಾಯಿ ದಾಳಿಗೆ ಬಾಲಕ ಮೃತಪಟ್ಟ ಘಟನೆ ನಗರದ ಹೊರವಲಯದ ಮೇದೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಗನನ್ನು ಕಳೆದು ಕೊಂಡ ಪಾಲಕರ ಆಕ್ರಂದಕ್ಕೆ ನೆರೆದವರು ಮರುಗಿದರು.
ಗ್ರಾಮದ ರಾಮಪ್ಪ, ಲಕ್ಷ್ಮಿ ದಂಪತಿಯ ಪುತ್ರ ತರುಣ್ (10) ಮೃತ ಬಾಲಕ. ಕಳೆದ 15 ದಿನಗಳ ಹಿಂದೆ ಶಾಲೆಗೆ ಹೋಗುವ ಸಮಯದಲ್ಲಿ ನಾಯಿ ದಾಳಿ ನಡೆಸಿ ತೀವ್ರವಾಗಿ ಕಚ್ಚಿ ಗಾಯಗೊಳಿಸಿತ್ತು.
ಗಾಯಗೊಂಡ ಬಾಲಕನನ್ನು ಕುಟುಂಬದವರು ಕೂಡಲೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪ ಪಡೆದಿದ್ದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆಗೆ ಸೋಂಕು ತೀವ್ರವಾಗಿ ದೇಹದಲ್ಲಿ ಹರಡಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
‘ನಾಯಿ ಕಡಿದ ಕೂಡಲೇ ಮಗನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದೇವು. ಬಳಿಕ ಮಣಿಪಾಲ್ ಆಸ್ಪತ್ರೆಗೆ ಕರಕ್ಕೊಂಡು ಹೋದ್ರು ನನ್ನ ಮಗ ಬದುಕಲಿಲ್ಲ’ ಎಂದು ಕಣ್ಣಿರಾದರು ತಾಯಿ ಲಕ್ಷ್ಮಿ.
‘ಗ್ರಾಮದಲ್ಲಿ ಐವರಿಗೆ ನಾಯಿ ಕಡಿದಿದೆ. ನನ್ನ ಮಗ ನಾಲ್ಕನೇಯನು. ಜಿಲ್ಲಾ ಆಸ್ಪತ್ರೆಯಲ್ಲಿ ಜೀವ ಉಳಿಸೋದು ಕಷ್ಟ ಅಂದ್ರು ಅದಕ್ಕೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಎಲ್ಲ ಥರಾ ಚಿಕಿತ್ಸೆ ಮಾಡಿದ್ರು ಬದುಕಲಿಲ್ಲ. ಬೀದಿ ನಾಯಿ ಜಾಸ್ತಿಯಾಗಿವೆ. ಇವನ್ನು ಹಿಡಿಸುವ ಮೂಲಕ ಮಕ್ಕಳ ಪ್ರಾಣ ಕಾಪಾಡಬೇಕಿದೆ’ ಎನ್ನುತ್ತಾರೆ ತರುಣ್ ದೊಡ್ಡಮ್ಮ ರೇಣುಕಾ.