ಮುಖ್ಯ ಸುದ್ದಿ
ಬೋರ್‍ವೆಲ್ ಕೊರೆಯಿಸುವುದು ಕೊನೆಯ ಆಯ್ಕೆಯಾಗಿರಲಿ | ಮೂರು ಜನ ಜಿಯಾಲಜಿಸ್ಟ್ ನೇಮಕಕ್ಕೆ ಬಿ.ಜಿ.ಗೋವಿಂದಪ್ಪ ಸೂಚನೆ

CHITRADURGA NEWS | 20 FEBRUARY 2024
ಚಿತ್ರದುರ್ಗ: ಫೆಬ್ರವರಿ 2 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರು ನಡೆಸಿದ ಸಭೆಯಲ್ಲಿ ಬೋರ್‍ವೆಲ್ ಕೊರೆಯಿಸುವುದು ಕೊನೆಯ ಆಯ್ಕೆಯಾಗಿರಬೇಕು. ಅತ್ಯಂತ ತುರ್ತು ಸಂದರ್ಭದಲ್ಲಿ ಮಾತ್ರ ಕೊಳವೆ ಬಾವಿ ಕೊರೆಯಿಸಲು ಸೂಚಿಸಿಲಾಗಿದೆ.
ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬರ ಹಾಗೂ ಕುಡಿಯುವ ನೀರು ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇದನ್ನೂ ಓದಿ: ಫೆಬ್ರವರಿ 20 ರಿಂದ 1 ತಿಂಗಳ ಕಾಲ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು
ರಾಜ್ಯ ಮಟ್ಟದ ಸಭೆಯ ನಡಾವಳಿ ಕುರಿತು ಚರ್ಚಿಸಿದ ಶಾಸಕರು, ಸಚಿವರಿ, ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯ ನಡಾವಳಿಯನ್ನು ಆಧರಿಸಿ, ಹೊಸ ಬೋರ್‍ವೆಲ್‍ಗಳನ್ನು ಅಗತ್ಯಕ್ಕೆ ಅನುಗುಣವಾಗಿ ತುರ್ತು ಅವಶ್ಯವಿರುವೆಡೆ ಕೊರೆಯಿಸುವ ಬಗ್ಗೆ ಮಾರ್ಗಸೂಚಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಜಿಲ್ಲೆಯ ಆರು ತಾಲ್ಲೂಕುಗಳಿಗೆ ಕೇವಲ ಒಬ್ಬರೇ ಜಿಯಾಲಾಜಿಸ್ಟ್(ಅಂತರ್ಜಲ) ಇದ್ದಾರೆ. ಬೇಸಿಗೆ ಕಾಲವಾಗಿರುವುದರಿಂದ, ವಿವಿಧೆಡೆ ಹೊಸ ಬೋರ್‍ವೆಲ್ ಕೊರೆಯಿಸಬೇಕಾಗುತ್ತದೆ, ಹೀಗಾಗಿ ತುರ್ತಾಗಿ ನೀರಿನ ಪಾಯಿಂಟ್ ಮಾಡಬೇಕಾಗುತ್ತದೆ. ಆದರೆ ಜಿಲ್ಲೆಯಲ್ಲಿ ಜಿಯಾಲಾಜಿಸ್ಟ್ ಕೊರತೆ ಇದ್ದು, ಎರಡು ತಾಲ್ಲೂಕಿಗೆ ಒಬ್ಬರಂತೆ ಕನಿಷ್ಟ ಮೂರು ಮಂದಿ ಜಿಯಾಲಾಜಿಸ್ಟ್‍ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಸರ್ಕಾರಿ ಮೆಡಿಕಲ್ ಕಾಲೇಜಿಗೆ 500 ಕೋಟಿ ರೂ. ಕೊಟ್ಟಿದ್ದು ಬೊಮ್ಮಾಯಿ ಬಜೆಟ್‍ನಲ್ಲಿ
ಸಭೆಯಲ್ಲಿ ಶಾಸಕರಾದ ಟಿ.ರಘುಮೂರ್ತಿ, ಎಂ.ಚಂದ್ರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ತಹಶೀಲ್ದಾರ್‍ಗಳು, ತಾಲ್ಲೂಕು ಪಂಚಾಯಿತಿ ಇಒಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಬೋರ್‍ವೆಲ್ ಇರುವ ರೈತರಿಗೆ ಮೇವು ಬೀಜದ ಕಿಟ್;
ಜಿಲ್ಲೆಯಲ್ಲಿ ಈಗಾಗಲೆ ತಾಲ್ಲೂಕಿನ ತುರುವನೂರು ಹೋಬಳಿ, ಚಳ್ಳಕೆರೆ ತಾಲ್ಲೂಕಿನ ಚೌಳೂರು ಗೇಟ್ ಹಾಗೂ ಅಜ್ಜನಗುಡಿ ಗ್ರಾಮದಲ್ಲಿ ಗೋಶಾಲೆ ತೆರೆಯಲಾಗಿದೆ. ಗೋಶಾಲೆಯಲ್ಲಿ ಈವರೆಗೆ 11564 ಜಾನುವಾರುಗಳಿಗೆ 67.550 ಟನ್ ಮೇವು ಪೂರೈಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ತಿಳಿಸಿದರು.
ಇದನ್ನೂ ಓದಿ: ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವುದು ಹೇಗೆ ಗೊತ್ತಾ
ಬೋರ್‍ವೆಲ್ ಹೊಂದಿರುವ ರೈತರಿಗೆ ಮೇವು ಬೆಳೆಸಿಕೊಳ್ಳಲು ಮೇವಿನ ಬೀಜದ ಕಿಟ್ ನೀಡಲು ಕೂಡ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಶಾಸಕ ರಘುಮೂರ್ತಿ ಮಾತನಾಡಿ, ಅಗತ್ಯಕ್ಕೆ ಅನುಗುಣವಾಗಿ ಹಾಗೂ ಬೇಡಿಕೆಯಾನುಸಾರ ಗೋಶಾಲೆ ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು. ಗೋಶಾಲೆಗಳಿಗೆ ಖರೀದಿಸುವ ಮೇವಿನಲ್ಲಿ ಶೇ.50 ರಷ್ಟು ಭತ್ತದ ಹುಲ್ಲು, ಶೇ.25 ರಷ್ಟು ರಾಗಿ, ಜೋಳದ ದಂಟು ಉಳಿದ ಪ್ರಮಾಣದಲ್ಲಿ ಇತರೆ ಮೇವು ಖರೀದಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
26.86 ಕೋಟಿ ಬೆಳೆನಷ್ಟ ಪರಿಹಾರ ಪಾವತಿ: ಮಳೆಯ ಕೊರತೆಯಿಂದ ಬೆಳೆನಷ್ಟ ಉಂಟಾದ ಜಿಲ್ಲೆಯ 1,38,226 ರೈತರಿಗೆ 26.86 ಕೋಟಿ ರೂ. ಗಳನ್ನು ಬೆಳೆನಷ್ಟ ಪರಿಹಾರ ಪಾವತಿ ಮಾಡಲಾಗಿದ್ದು, ಈ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾಹಿತಿ ನೀಡಿದರು.
ಇದನ್ನೂ ಓದಿ: ಕುಡಿಯುವ ನೀರಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮದ ಎಚ್ಚರಿಕೆ
ಇದೇ ಸಂದರ್ಭದಲ್ಲಿ ಫೆ.27 ಮತ್ತು 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ನಡೆಯುವ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದ ಪೋಸ್ಟರ್‍ನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಿಡುಗಡೆ ಮಾಡಿದರು.
