ಮುಖ್ಯ ಸುದ್ದಿ
ಸಚಿವ ಡಿ.ಸುಧಾಕರ್ ರಾಜಿನಾಮೆಗೆ ಬಿಜೆಪಿ-ಜೆಡಿಎಸ್ ಆಗ್ರಹ
ಚಿತ್ರದುರ್ಗ ನ್ಯೂಸ್.ಕಾಂ: ದಲಿತರ ಭೂ ಕಬಳಿಕೆ ಆರೋಪದಲ್ಲಿ ಸಿಲುಕಿರುವ ಹಿರಿಯೂರು ಶಾಸಕ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರಾಜಿನಾಮೆಗೆ ಒತ್ತಡ ಹೆಚ್ಚಾಗಿದೆ.
ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಸಚಿವರ ರಾಜಿನಾಮೆಗೆ ಆಗ್ರಹ ಮಾಡಿದ್ದು, ದಲಿತರ ಮೇಲೆ ದೌರ್ಜನ್ಯ ಹಾಗೂ ಗೂಂಡಾಗಿರಿ ಮಾಡಿ ಭೂ ಕಬಳಿಕೆ ಮಾಡಿರುವ ಸಚಿವರಾದ ಡಿ.ಸುಧಾಕರ್ ಅವರಿಂದ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ಪಡೆದು ತನಿಖೆ ನಡೆಸಲು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಟ್ಯಾಗ್ ಮಾಡಿ ಒತ್ತಾಯ ಮಾಡಿರುವ ಅವರು, ಸಚಿವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದುರುದ್ದೇಶದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ : ಸಚಿವ ಡಿ.ಸುಧಾಕರ್ ಸ್ಪಷ್ಟನೆ
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯ್ಯಣ್ಣ ಅವರಿಂದ ರಾಜಿನಾಮೆಗೆ ಒತ್ತಾಯ:
ಇನ್ನೂ ಜೆಡಿಎಸ್ ಕೂಡಾ ಸಚಿವ ಡಿ.ಸುಧಾಕರ್ ರಾಜಿನಾಮೆಗೆ ಒತ್ತಾಯಿಸಿದ್ದು, ಜಿಲ್ಲಾಧ್ಯಕ್ಷ ಎಂ.ಜಯ್ಯಣ್ಣ ‘ಚಿತ್ರದುರ್ಗ ನ್ಯೂಸ್’ ಜೊತೆ ಮಾತನಾಡಿ, ಸಚಿವರ ರಾಜಿನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವರಾದ ಸುಧಾಕರ್ ಹಿರಿಯೂರು ಕ್ಷೇತ್ರದಿಂದ ದಲಿತರು, ಹಿಂದುಳಿದವರ ಮತಗಳನ್ನು ಪಡೆದು ಮೂರನೇ ಸಲ ಶಾಸಕರಾಗಿ ಆಯ್ಕೆಯಾಗಿ ದಲಿತ ಮಹಿಳೆಯರ ವಿರುದ್ಧವೇ ಮಾ
ತನಾಡಿರುವುದು ಖಂಡನೀಯ. ಕೂಡಲೇವ ರಾಜಿನಾಮೆ ನೀಡಬೇಕು. ನೊಂದ ಮಹಿಳೆಯ ಕ್ಷಮೆ ಕೇಳಬೇಕು. ಆ ಮಹಿಳೆಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಸುಧಾಕರ್ ರಾಜಿನಾಮೆಗೆ ಭಾರ್ಗವಿ ದ್ರಾವಿಡ್ ಒತ್ತಾಯ:
ಮತ್ತೊಂದೆಡೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೂಡಾ ಸಚಿವ ಡಿ.ಸುಧಾಕರ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದು, ದಲಿತರು, ಜನಸಾಮಾನ್ಯರ ಬಳಿ ಮಚ್ಚು, ಲಾಂಗು, ರೌಡಿಸಂ ಎಂದು ಮಾತನಾಡುವ ಇಂತಹ ಸಚಿವರಿಂದ ಜನಸಾಮಾನ್ಯರು ನ್ಯಾಯ ನಿರೀಕ್ಷೆ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ.
ಡಿ.ಸುಧಾಕರ್ ಕಾರಣಕ್ಕೆ ಒಂದು ದಲಿತ ಕುಟುಂಬ ಪ್ರಾಣಭಯದಿಂದ ಬದುಕುವಂತಾಗಿದೆ. ಸುಧಾಕರ್ ವಿರುದ್ಧ ದಲಿತರ ಮೇಲೆ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರೂ ಈವರೆಗೆ ಅವರನ್ನು ಬಂಧಿಸದಿರುವುದು ಸರ್ಕಾರದ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ. ಈ ಸರ್ಕಾರದಿಂದ ದಲಿತರ ಮಾನ, ಪ್ರಾಣಗಳಿಗೆ ಬೆಲೆ ಇಲ್ಲ ಎನ್ನುವುದು ಖಚಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ರೌಡಿಗಳಿಗೆ ಸಚಿವ ಸ್ಥಾನ ನೀಡಿದ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆ ಉತ್ತಮ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಅತೀ ಹೆಚ್ಚು ಸಚಿವರು, ಶಾಸಕರು ಪರಿಶಿಷ್ಟ ಜಾತಿಯವರಿದ್ದು ಅದರಲ್ಲೂ ಗೃಹಮಂತ್ರಿ ದಲಿತರಾಗಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿದೆ. ತಕ್ಷಣ ಡಿ.ಸುಧಾಕರ್ ರಾಜಿನಾಮೆ ಪಡೆಯಬೇಕು ಎಂದು ಭಾರ್ಗವಿ ದ್ರಾವಿಡ್ ಒತ್ತಾಯಿಸಿದ್ದಾರೆ.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.
https://chat.whatsapp.com/J6cH6HirXqYERmT1X09kSk)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ