ಮುಖ್ಯ ಸುದ್ದಿ
ಚಿತ್ರದುರ್ಗ ಜಿಲ್ಲೆಗೆ ಕಾಗೇರಿ ನೇತೃತ್ವದಲ್ಲಿ ಬರ ಅಧ್ಯಯನ ತಂಡ
ಚಿತ್ರದುರ್ಗ ನ್ಯೂಸ್.ಕಾಂ: ಹಿಂದೆಂದೂ ಕಾಣಷದಷ್ಟು ಭೀಕರ ಬರದ ಹೊಡೆತಕ್ಕೆ ಸಿಕ್ಕಿ ತತ್ತರಿಸಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಬಿಜೆಪಿ ಬರ ಅಧ್ಯಯನ ತಂಡ ನವೆಂಬರ್ 7 ರಂದು ಆಗಮಿಸಲಿದೆ.
ರಾಜ್ಯಾದ್ಯಂತ ಹಲವು ತಂಡಗಳಾಗಿ ಬರ ಅಧ್ಯಯನಕ್ಕೆ ತೆರಳುತ್ತಿರುವ ಬಿಜೆಪಿ ನಾಯಕರು, ಇಲ್ಲಿನ ಸಾಕ್ಷಾತ್ ವರದಿಯನ್ನು ಪಕ್ಷದ ವರಿಷ್ಟರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೂ ತಲುಪಿಸಲಿದ್ದಾರೆ.
ವಿಧಾನಸಭೆ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಬರ ಅಧ್ಯಯನಕ್ಕಾಗಿ ಆಗಮಿಸಲಿದೆ.
ಈ ತಂಡದಲ್ಲಿ ಕೇಂದ್ರದ ಮಾಜಿ ಸಚಿವ, ದಾವಣಗೆರೆ ಸಂಶದ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸೇರಿದಂತೆ ಎರಡೂ ಜಿಲ್ಲೆಗಳ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಶಾಸಕ ವೀರೇಂದ್ರ(ಪಪ್ಪಿ) ಮನೆ ಮುಂದೆ ತಡರಾತ್ರಿ ಗಲಾಟೆ
ಬಿಜೆಪಿ ಬರ ಅಧ್ಯಯನ ತಂಡ ನವೆಂಬರ್ 6 ರಂದು ದಾವಣಗೆರೆ ಜಿಲ್ಲೆಯಲ್ಲಿ ಅಧ್ಯಯನ ನಡೆಸಿ, ನವೆಂಬರ್ 7ಕ್ಕೆ ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿದ್ದಾರೆ.
ದಾವಣಗೆರೆಯಿಂದ ಜಿಲ್ಲೆಯನ್ನು ಪ್ರವೇಶಿಸುತ್ತಲೇ ಭರಮಸಾಗರ ಹೋಬಳಿಯಲ್ಲಿ ಅಧ್ಯಯನ ನಡೆಸಿ ಅಲ್ಲಿಂದ ಚಿತ್ರದುರ್ಗಕ್ಕೆ ಆಗಮಿಸಲಿದೆ. ಚಿತ್ರದುರ್ಗ ಕಸಬಾ, ನಾಯಕನಹಟ್ಟಿ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗದಲ್ಲಿ ಸಂಚರಿಸಿ ರೈತರ ಅಹವಾಲು ಆಲಿಸಲಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಇಡೀ ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ತಕ್ಷಣಕ್ಕೆ ಆಗಬೇಕಾದ ಕೆಲಸಗಳಿಗೆ ಜಿಲ್ಲಾಧಿಕಾರಿ ಖಾತೆಯಲ್ಲಿ ಹಣವನ್ನೂ ಇಟ್ಟಿದೆ.
ಇದರೊಟ್ಟಿಗೆ ಕೇಂದ್ರದಿಂದ ಬರ ಅಧ್ಯಯನ ತಂಡ ಆಗಮಿಸಿ ಜಿಲ್ಲೆಯಲ್ಲಿ ಸಂಚರಿಸಿ, ವರದಿ ಸಂಗ್ರಹ ಮಾಡಿಕೊಂಡು ತೆರಳಿದೆ. ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿ ಅಲ್ಲಿಂದಲೂ ಪರಿಹಾರ ನಿರೀಕ್ಷೆ ಮಾಡಲಾಗುತ್ತಿದೆ.
ಒಟ್ಟಾರೆ, ಬರದ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೆರವಿಗೆ ಧಾವಿಸಬೇಕಾಗಿದೆ. ತಕ್ಷಣಕ್ಕೆ ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಮೇವು ನೀರಿನ ಆಸರೆ ಕಲ್ಪಿಸಬೇಕಾಗಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದ್ದೂ ಅಲ್ಲಿಗೂ ತಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.