ಹೊಸದುರ್ಗ
Kunchitiga Matha: ತಪ್ಪದ ಕರಡಿ ಕಾಟ | ರಸ್ತೆಗೆ ಬಂದ ಕರಡಿ ಕಂಡು ವಾಯುವಿಹಾರಿಗಳು ದಿಕ್ಕುಪಾಲು
CHITRADURGA NEWS | 17 OCTOBER 2024
ಹೊಸದುರ್ಗ: ಹೊಸದುರ್ಗ ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ (Kunchitiga Matha) ಕರಡಿ ಕಾಟ ತಪ್ಪುತ್ತಿಲ್ಲ. ಈ ಬಗ್ಗ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.
ಅರಣ್ಯ ಇಲಾಖೆಯವರು ಬೋನ್ ಇಟ್ಟಾಗ ಜಾಣ ಕರಡಿಗಳು ಬೀಳುತ್ತಿಲ್ಲ. ಇದರಿಂದ ಮಠಕ್ಕೆ ಬರುವ ಭಕ್ತರು, ಸುತ್ತಮುತ್ತಲಿನ ನಿವಾಸಿಗಳು, ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಇಲ್ಲಿಗೆ ವಾಯು ವಿಹಾರಕ್ಕಾಗಿ ಬರುವವರಿಗೂ ಪೀಕಲಾಟವಾಗಿದೆ.
ಇದನ್ನೂ ಓದಿ: 123 ಅಡಿ ದಾಟಿದ ವಿವಿ ಸಾಗರ ಜಲಾಶಯ | ಭರ್ತಿಯಾಗಲು 7 ಅಡಿ ಬಾಕಿ
ಬೆಳಗ್ಗೆ, ಸಂಜೆ, ರಾತ್ರಿ ವೇಳೆಯಲ್ಲಿ ಹಲವು ಸಲ ಕರಡಿಗಳು ಮಠದ ಸುತ್ತಲೂ ಓಡಾಡುವ ದೃಶ್ಯಗಳನ್ನು ಅನೇಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ಇಂದು ಅ.17 ಸಂಜೆ 7 ಗಂಟೆ ಸುಮಾರಿಗೆ ಕರಡಿಯೊಂದು ಮಠಕ್ಕೆ ಹೋಗುವ ಸಿ.ಸಿ.ರಸ್ತೆ ಮೇಲೆ ನಡೆದು ಬಂದಿದೆ. ಏಕಾಏಕಿ ಕರಡಿ ರಸ್ತೆಗೆ ಬಂದಿದ್ದನ್ನು ಕಂಡು ಸ್ಥಳದಲ್ಲಿ ವಾಯುವಿಹಾರ ಮಾಡುತ್ತಿದ್ದವರು ಓಡಿ ಹೋಗಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಮನೆ ಗೋಡೆ ಕುಸಿತ | ಮನೆಯಲ್ಲಿದ್ದ ವೃದ್ಧೆ ಸಾವು
ಮಠದ ಆವರಣ ಹಾಗೂ ಸುತ್ತಮುತ್ತಲಿನ ವಾತಾವರಣ ಪ್ರಶಾಂತವಾಗಿರುವುದರಿಂದ ಸಾಕಷ್ಟು ಜನ ಬೆಳಗ್ಗೆ ಮತ್ತು ಸಂಜೆ ಇಲ್ಲಿ ವಾಯು ವಿಹಾರಕ್ಕೆ ಬರುತ್ತಾರೆ. ಅನೇಕ ಸಲ ತಾಯಂದಿರು, ಮಕ್ಕಳನ್ನು ಕರೆತರುತ್ತಾರೆ. ವಯಸ್ಕರು ವಾಕಿಂಗ್ ಮಾಡುತ್ತಾರೆ.
ಇಂತಹ ಜಾಗದಲ್ಲಿ ಪದೇ ಪದೇ ಕರಡಿ ಕಾಣಿಸಿಕೊಳ್ಳುತ್ತಿರುವುದರಿಂದ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಎದುರಾಗಿದೆ. ಶ್ರೀ ಶಾಂತವೀರ ಸ್ವಾಮೀಜಿ ಅವರು ಅನೇಕ ಸಲ ಅರಣ್ಯ ಇಲಾಖೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಾರ್ಚ್ ಅಂತ್ಯದೊಳಗೆ ದುರ್ಗೋತ್ಸವ | ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಭರವಸೆ