ಮುಖ್ಯ ಸುದ್ದಿ
Court: ಮುರುಘಾ ಶರಣರಿಗೆ ಜಾಮೀನು ಮಂಜೂರು | ಚಿತ್ರದುರ್ಗ ನ್ಯಾಯಾಲಯದಿಂದ ಆದೇಶ
CHITRADURGA NEWS | 07 OCTOBER 2024
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಎರಡನೇ ಬಾರಿಗೆ ಬಂಧಿಯಾಗಿದ್ದ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಗೆ ಜಾಮೀನು ಮಂಜೂರಾಗಿದೆ.
ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸಂಜೆ ವೇಳೆಗೆ ಮುರುಘಾ ಶರಣರು ಜೈಲಿನಿಂದ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಶ್ರೀಗಳ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಎರಡು ಪೋಕ್ಸೋ ಪ್ರಕರಣದಲ್ಲಿ 13 ಸಾಕ್ಷ್ಯಗಳ ವಿಚಾರಣೆ ಇಂದು ಮುಗಿದಿರುವುದನ್ನು ಸಿ.ವಿ.ನಾಗೇಶ್ ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ನ್ಯಾಯಾಲಯ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ಚಿತ್ರದುರ್ಗ ಪ್ರವೇಶಿಸದಂತೆ ಷರತ್ತು ವಿಧಿಸಿ ಹೈಕೋರ್ಟ್ 2023 ನವೆಂಬರ್ ತಿಂಗಳಲ್ಲಿ ಜಾಮೀನು ಮಂಜೂರು ಮಾಡಿತ್ತು.
ಇದನ್ನು ಪ್ರಶ್ನಿಸಿ ನೊಂದ ಬಾಲಕಿಯರ ಪರವಾಗಿ ಒಡನಾಡಿ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯ, ಸಾಕ್ಷ್ಯ ವಿಚಾರಣೆಗೆ ಗಡುವು ವಿಧಿಸಿ ಜಾಮೀನು ರದ್ದುಪಡಿಸಿತ್ತು.
ಅದರಂತೆ ಇಂದು ಎರಡೂ ಪ್ರಕರಣಗಳ ಎಲ್ಲ ಸಾಕ್ಷ್ಯಗಳ ವಿಚಾರಣೆ ಮುಗಿದಿದ್ದು, ಹೈಕೋರ್ಟಿನ ಷರತ್ತಿನ ಅನ್ವಯವೇ ಶ್ರೀಗಳಿಗೆ ಜಾಮೀನು ಮಂಜೂರಾಗಿದೆ ಎಂದು ಹಿರಿಯ ನ್ಯಾಯವಾದಿ ಕೆ.ಎನ್.ವಿಶ್ವನಾಥಯ್ಯ ಮಾಹಿತಿ ನೀಡಿದ್ದಾರೆ.
ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಇಬ್ಬರು ಬಾಲಕಿಯರು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ 2022 ಆಗಸ್ಟ್ 26 ರಂದು ದೂರು ದಾಖಲಿಸಿದ್ದರು.
ಸದರಿ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ, 2022 ಸೆಪ್ಟಂಬರ್ 1 ರಂದು ಶ್ರೀಗಳನ್ನು ಬಂಧಿಸಲಾಗಿತ್ತು.