ಮುಖ್ಯ ಸುದ್ದಿ
ಹಕ್ಕಿ ಗೂಡಿಗೆ ಆಹಾರ ಕಲ್ಪಿಸಿದ ಶ್ರೀಗಳು | ಹೊಸದುರ್ಗ ತಾಲೂಕಿನ ಮಠಾಧೀಶರಿಂದ ವಿನೂತನ ಕಾರ್ಯ
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲ ಬಂದಿದ್ದು, ಜನ ಕಂಗಾಲಾಗಿದ್ದಾರೆ. ಅನೇಕ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ವರ್ಷ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಎಲ್ಲ ಬೆಳೆಗಳು ಕೈ ಚೆಲ್ಲಿವೆ. ತೆನೆ, ಕಾಳು ಕಟ್ಟುವ ಮೊದಲೇ ಬಾಡಿ ಒಣಗೊ ಹೋಗಿವೆ. ರೈತರು ಈ ವರ್ಷ ಹಾಕಿದ ಬಂಡವಾಳ ಕೂಡಾ ಮಣ್ಣು ಪಾಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ನಗರ ಠಾಣೆ ಪೊಲೀಸ್ ಪೇದೆ ಮಹೇಂದ್ರ ನಿಧನ
ಹದವಾದ ಮಳೆಯಾಗಿ, ಕೆರೆ ಕಟ್ಟೆಗಳಲ್ಲಿ ನೀರು ತುಂಬಿ, ಹೊಲ, ಗದ್ದೆಗಳಲ್ಲಿ ಬೆಳೆಗಳು ತೂಗಾಡುತ್ತಿದ್ದರೆ ಇಡೀ ಪ್ರಕೃತಿ, ಪಶು ಸಂಕುಲ ನೆಮ್ಮದಿಯಾಗಿರುತ್ತದೆ. ಆದರೆ, ಈ ವರ್ಷ ಮಳೆಯಾದಗ ಕಾರಣ ಕೆರೆ ಕಟ್ಟೆಗಳು ಒಣಗಿ ನಿಂತಿವೆ. ಜಮೀನುಗಳಲ್ಲಿ ಒಂದೇ ಒಂದು ಕಾಳು ಸಿಗುತ್ತಿಲ್ಲ.
ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಿಗೆ ಎಷ್ಟಿದೆಯೋ ಪ್ರಾಣಿ, ಪಕ್ಷಿಗಳಿಗೂ ಅಷ್ಟೇ ಇದೆ. ಎಷ್ಟೋ ಪ್ರಾಣಿ, ಪಕ್ಷಿಗಳು ಆಹಾರವಿಲ್ಲದೆ ಸಾಯುತ್ತಿವೆ. ಅವುಗಳಿಗೆ ಆಹಾರ, ನೀರು ಇಟ್ಟು ಅನುಕೂಲ ಮಾಡಬೇಕು. ಪ್ರಾಣಿ ಪಕ್ಷಿಗಳಿದ್ದಷ್ಟು ಪರಿಸರ ಸುಂದರವಾಗಿರುತ್ತದೆ.
| ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ, ಹೊಸದುರ್ಗ
ಇದರಿಂದ ದನ, ಕರುಗಳಿಗೆ ಮೇವಿನ ಸಮಸ್ಯೆಯಾದರೆ, ಪ್ರಕೃತಿಯ ಕೊಡುಗೆಯಾಗಿ ನಮ್ಮ ಜೊತೆಗೆ ಇರುವ ಪಕ್ಷಿಗಳಿಗೆ ನೀರು, ಆಹಾರದ ಸಮಸ್ಯೆ ಎದುರಾಗಿದೆ.
ಈಗ ಪಕ್ಷಿಗಳಿಗೆ ಆಹಾರ, ನೀರು ಒದಗಿಸಬೇಕಾಗಿರುವುದು ಮನುಷ್ಯರಾದ ನಮ್ಮ ಕರ್ತವ್ಯ.
ಇದನ್ನೂ ಓದಿ: ಬಾಳೆ ದಿಂಡಿನಿಂದ ನಾರು ಸಂಸ್ಕರಣೆ ತರಬೇತಿ
ಇಂಥದ್ದೊಂದು ಕರ್ತವ್ಯವನ್ನು ಎಲ್ಲರಿಗೂ ನೆನಪು ಮಾಡುವ ಕೆಲಸವನ್ನು ಹೊಸದುರ್ಗ ತಾಲೂಕಿನ ಮಠಾಧೀಶರು ಸದ್ದಿಲ್ಲದೆ ನೆರವೇರಿಸಿದ್ದಾರೆ.
ಹೊಸದುರ್ಗ ಪಟ್ಟಣದಲ್ಲಿರುವ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ನೂರಾರು ಗಿಡ, ಮರಗಳಲ್ಲಿ ಈಗ ಪಕ್ಷಿಗಳ ಕಲರವ ಕೇಳುವಂತೆ ಮಾಡಲಾಗಿದೆ.
ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಸ್ವಾಮೀಜಿ ‘ಹಕ್ಕಿ ಗೂಡಿಗೆ ಆಹಾರ’ ಎನ್ನುವ ವಿಶಿಷ್ಟ ಕಾರ್ಯಕ್ರಮ ರೂಪಿಸಿದ್ದು, ಆನ್‍ಲೈನ್ ಮೂಲಕ ಪುಟ್ಟ ಗೂಡು, ಆಹಾರ ಹಾಗೂ ನೀರು ಹಾಕುವ ಬಟ್ಟಲುಗಳನ್ನು ತರಿಸಿ ಮಠದ ಆವರಣದಲ್ಲಿರುವ ಮರ, ಗಿಡಗಳಿಗೆ ಕಟ್ಟಿಸಿದ್ದಾರೆ.
ಮೊದಲ ಪ್ರಯತ್ನವಾಗಿ ನೀರು ಹಾಗೂ ಆಹಾರ ಹಾಕುವ 30 ಗೂಡು, ತಟ್ಟೆಗಳನ್ನು ತರಿಸಿ ಕಟ್ಟಿಸಿದ್ದು, ಇನ್ನೂ 100 ಗೂಡು, ತಟ್ಟೆಗಳಿಗೆ ಆರ್ಡರ್ ಕೊಡಲಾಗಿದೆ.
ಒಂದು ಗೂಡು, ತಟ್ಟೆ, ನೀರಿನ ಬಟ್ಟಲು ಹಾಗೂ ಸುಮಾರು ಕಾಲು ಕೆಜಿಯಷ್ಟು ಆಹಾರಕ್ಕೆ 170 ರೂ. ವೆಚ್ಚವಾಗಿದೆ.
ಹೊಸದುರ್ಗದಲ್ಲಿ ಹಕ್ಕಿಗಳ ಚಿಲಿಪಿಲಿ ಹೆಚ್ಚಿಸಲು ತಾಲೂಕಿನ ಮಠಾಧೀಶರ ಜೊತೆಗೆ ಸಾರ್ವಜನಿಕರು ಕೈ ಜೋಡಿಸಿದರೆ ಪ್ರಕೃತಿ ಸುಂದರವಾಗಿರುತ್ತದೆ.
| ಶ್ರೀ ಶಾಂತವೀರ ಸ್ವಾಮೀಜಿ, ಕುಂಚಿಟಿಗ ಮಠ, ಹೊಸದುರ್ಗ.
ಬೇಸಿಗೆ ಬರುತ್ತಿರುವುದರಿಂದ ಮುಂದಿನ ನಾಲ್ಕು ತಿಂಗಳು ಬಹಳ ಕಠಿಣವಾಗಿರುತ್ತವೆ. ಈ ನಾಲ್ಕು ತಿಂಗಳು ನಾವು ನಮ್ಮ ಸುತ್ತಮುತ್ತಲಿನ ಪಕ್ಷಿಗಳನ್ನು ಕಾಪಾಡಿಕೊಂಡರೆ ಮುಂದೆ ಮಳೆಯಾದರೆ, ಅವು ಜೀವನ ಮಾಡಿಕೊಳ್ಳುತ್ತವೆ ಎನ್ನುವ ಕಾರಣಕ್ಕೆ ಸಕಾಲಕ್ಕೆ ಇಂಥದ್ದೊಂದು ಚಿಂತನೆ ಮಾಡಿರುವುದಾಗಿ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದ್ದಾರೆ.
ಮಠದಲ್ಲಿ ಬಳಕೆ ಮಾಡುವ ರಾಗಿ, ನವಣೆ ಹಾಗೂ ಸಾವೆಯನ್ನು ಪ್ರತಿ ದಿನ ಬೆಳಗ್ಗೆ ಹಕ್ಕಿಯ ಗೂಡಿಗೆ ಹಾಕಲಾಗುತ್ತದೆ. ಸುಮಾರು ಒಂದೂ ಕಾಲು ಲೀಟರ್ ಹಿಡಿದುವ ನೀರಿನ ಬಟ್ಟಲುಗಳಿದ್ದು, ಬೆಳಗ್ಗೆ ನೀರು ಹಾಕಿದರೆ ಸಂಜೆವರೆಗೆ ಇರುತ್ತದೆ. ದಿನಕ್ಕೆ ಒಮ್ಮೆ ಗಮನಿಸಿದರೆ ಸಾಕಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ.
ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ
ಹಕ್ಕಿ ಗೂಡಿಗೆ ಆಹಾರ ಕಾರ್ಯಕ್ರಮದಲ್ಲಿ ಭಾಗಿಯಾದ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಾಗೂ ಮತ್ತೋಡು ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಕೂಡಾ ಮಠಗಳ ಆವರಣದಲ್ಲಿ ಹಕ್ಕಿಗಳಿಗೆ ಆಹಾರ ನೀರು ಒದಗಿಸಲು ತಲಾ 100 ಗೂಡು, ಆಹಾರ ಮತ್ತು ನೀರಿನ ತಟ್ಟೆಗಳಿಗೆ ಆರ್ಡರ್ ಮಾಡಿದ್ದಾರೆ.
ಮಠಾಧೀಶರು ಮಾಡಿರುವ ಈ ಕಾರ್ಯವನ್ನು ಪ್ರತಿಯೊಬ್ಬರು ತಮ್ಮ ಮನೆ, ಕಚೇರಿ, ಶಾಲೆ ಸೇರಿದಂತೆ ಸಾಧ್ಯವಾದ ಕಡೆಗಳಲ್ಲಿ ಮಾಡಿದರೆ ಪಕ್ಷಿ ಸಂಕುಲವನ್ನು ಕಠಿಣ ಪರಿಸ್ಥಿತಿಯಲ್ಲಿ ಉಳಿಸಿದ ಪುಣ್ಯ ಲಭಿಸುತ್ತದೆ.
ಮನೆಗಳ ಬಳಿ ಗೂಡುಗಳನ್ನೇ ಕಟ್ಟಬೇಕೆಂದಿಲ್ಲ. ಅಂಗಳದಲ್ಲಿ ಕಾಳು ಚೆಲ್ಲಿ, ಎಲ್ಲೋ ಒಂದು ಕಡೆ ನೀರಿಟ್ಟರೆ ಕುಡಿದು ಹೋಗುತ್ತವೆ.
ಹಸಿದವರಿಗೆ ಅನ್ನ ಇಟ್ಟು ತಾನು ಊಟ ಮಾಡಬೇಕು. ಈ ಮಾನವೀಯ ಮೌಲ್ಯ ಹಾಗೂ ಸಂಸ್ಕøತಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು.
| ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಭಗೀರಥ ಗುರುಪೀಠ, ಮಧುರೆ.***********