ಲೋಕಸಮರ 2024
ಅಂಬೇಡ್ಕರರನ್ನು ಪ್ರಧಾನಿ ಮಾಡಬಹುದಿತ್ತು | ಎಂಎಲ್ಸಿ ರವಿಕುಮಾರ್
CHITRADURGA NEWS | 14 APRIL 2024
ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಈ ದೇಶದ ಪ್ರಧಾನಿ ಮಾಡಬಹುದಿತ್ತು. ಆದರೆ, ಕಾಂಗ್ರೆಸ್ ಅವರನ್ನು ಸಂಸದರನ್ನಾಗಿಯೂ ಮಾಡಲಿಲ್ಲ ಎಂದು ಬಿಜೆಪಿ ಮುಖಂಡ ಎಂಎಲ್ಸಿ ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1952 ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರನ್ನು ಅಮಾನವೀಯವಾಗಿ ಸೋಲಿಸಿದ ಕಾಂಗ್ರೆಸ್, ಆನಂತರ ಸೋಲಿಸಿದ ವ್ಯಕ್ತಿ ನಾರಾಯಣ್ ಸರೋಬಾ ಕಾಜ್ರೋಲ್‍ಗೆ ಪದ್ಮವಿಭೂಷಣ ಕೊಟ್ಟಿದೆ ಎಂದರು.
ಇದನ್ನೂ ಓದಿ: ಕೋಟೆನಾಡಿಗೆ ಮೊದಲ ಮಳೆಯ ಸಿಂಚನ | ಶನಿವಾರ ಎಲ್ಲೆಲ್ಲಿ ಮಳೆ ಸುರಿದಿದೆ ನೋಡಿ..
ದೇಶಕ್ಕೆ ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದು, ಅಟಲ್ ಬಿಹಾರಿ ವಾಜಪೇಯಿ ಸರ್ಕಾರ. ಆದರೆ, ಕಾಂಗ್ರೆಸ್ ಅಂಬೇಡ್ಕರರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು.
ಬಾಬಾ ಸಾಹೇಬರು ತೀರಿಕೊಂಡ ದಿನ ಕಾಂಗ್ರೆಸ್ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಆದರೆ, ನೆಹರು ಅವರ ಅಂತ್ಯಕ್ರಿಯೆಗೆ 52.6 ಎಕರೆ ಜಾಗ ನೀಡಿ ಶಾಂತಿವನ ನಿರ್ಮಿಸಲಾಗಿದೆ. ಇಂದಿರಾಗಾಂಧಿ ಅಂತ್ಯಕ್ರಿಯೆಗೆ 42 ಎಕರೆ ಜಾಗ ಬಳಸಿಕೊಂಡು ಶಕ್ತಿ ಸ್ಥಳ ಎನ್ನಲಾಗಿದೆ, ರಾಜೀವ್ ಗಾಂಧಿ ಅವರ ಅಂತ್ಯಕ್ರಿಯೆ ಮಾಡಲು 15 ಎಕರೆ ಜಾಗ ಪಡೆದು ವೀರಭೂಮಿ ಎಂದು ಹೆಸರಿಸಲಾಗಿದೆ. ನೆಹರು ಅವರ ಕುಟುಂಬಕ್ಕೆ ದೆಹಲಿಯಲ್ಲಿ 110 ಎಕರೆಗಿಂತ ಹೆಚ್ಚು ಭೂಮಿ ಕೊಡಲಾಗಿದೆ. ಆದರೆ, ಅಂಬೇಡ್ಕರರಿಗೆ 6/3 ಅಡಿ ಜಾಗ ಕೊಡಲಿಲ್ಲ. ಅಷ್ಟೇ ಏಕೆ, ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಮುಂಬೈಗೆ ತರಲು ವಿಮಾನದ ವೆಚ್ಚವನ್ನೂ ಕಾಂಗ್ರೆಸ್ ಕೊಡಲಿಲ್ಲ. ಕಾಂಗ್ರೆಸ್ ದೇಶದಲ್ಲಿ ದಲಿತರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡು ಅಧಿಕಾರ ನಡೆಸಿದೆ ಎಂದು ದೂರಿದರು.
ಇದನ್ನೂ ಓದಿ: ಕೋಟೆನಾಡಿನಲ್ಲಿ ರಾಜಾಹುಲಿ ಮತ ಶಿಖಾರಿ | ಒಂದೇ ದಿನ ಮೂರು ಸಮಾವೇಶಗಳಲ್ಲಿ ಭಾಗವಹಿಸಿದ ಬಿಎಸ್‍ವೈ
ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚತೀರ್ಥ ಎನ್ನುವ ಹೆಸರಿನಲ್ಲಿ ಅಂಬೇಡ್ಕರ್ ಅವರ ಜನ್ಮಭೂಮಿಯನ್ನು ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ. ಅವರು ಅಧ್ಯಯನ ನಡೆಸಿದ್ದ ಲಂಡನ್‍ನಲ್ಲಿರುವ ಸ್ಥಳವನ್ನು 800 ಕೋಟಿ ರೂ.ಗಳಿಗೆ ಖರೀಧಿಸಿ ಮ್ಯೂಸಿಯಂ ಮಾಡಲಾಗಿದೆ. ಅಂತ್ಯವಾದ ನಾಗಪುರದ ಧೀಕ್ಷಾ ಭೂಮಿಯನ್ನು 280 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ದೆಹಲಿಯಲ್ಲಿ 2500 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.
ಅಂಬೇಡ್ಕರರು ಕಾಂಗ್ರೆಸ್ ಒಂದು ಉಡಿಯುವ ಮನೆ, ಎಂದಿಗೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿದ್ದರು. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದೇ ಅಂಬೇಡ್ಕರರಿಗೆ ನೀಡುವ ನಿಜವಾದ ಗೌರವ ಎಂದರು.
ಇದನ್ನೂ ಓದಿ: ಮತ್ತೆ 50 ಸಾವಿರದ ಗಡಿ ತಲುಪಿದ ಅಡಿಕೆ ರೇಟ್
ಹಿಂದೂ ಕೋಡ್ ಬಿಲ್ ಸೋಲಿಸಿದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಬಾಬಾ ಸಾಹೇಬರು ಮಂತ್ರಿ ಸ್ಥಾನ, ಅಧಿಕಾರ ನನ್ನ ಕನಸಲ್ಲ. ಸಮಾನತೆ, ಅಸ್ಪøಶ್ಯತೆ ನಿವಾರಣೆ ನನ್ನ ಕನಸು ಎಂದಿದ್ದರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಬಾಬು ಜಗಜೀವನರಾಂ ಅವರಿಗೂ ಅಪಮಾನ ಮಾಡಿದೆ. ಹಸಿರಿನ ಹರಿಕಾರ, ಅವರನ್ನೂ ಪ್ರಧಾನಿ ಆಗಲು ಬಿಡಲಿಲ್ಲ. ಕರ್ನಾಟಕದಲ್ಲಿ ಕೆ.ಎಚ್.ಮುನಿಯಪ್ಪ, ಪರಮೇಶ್ವರ, ಶ್ರೀನಿವಾಸ ಪ್ರಸಾದ್ ಅವರನ್ನು ಮುಖ್ಯಮಂತ್ರಿ ಹುದ್ದೆಗಳಿಂದ ತಪ್ಪಿಸಿದ ಸಿಎಂ ಸಿದ್ದರಾಮಯ್ಯ ನಿಜವಾದ ದಲಿತ ವಿರೋಧಿ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕಿದೆ | ಸಚಿವ ಕೆ. ಹೆಚ್. ಮುನಿಯಪ್ಪ
ಸ್ವತಃ ಅಂಬೇಡ್ಕರರೇ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯ ಇಲ್ಲ. ಸಂವಿಧಾನಕ್ಕೆ ಗೌರವ ಕೊಡುವ ಪಕ್ಷ ಬಿಜೆಪಿ ಎಂದ ಅವರು, ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದ ಅನಂತಕುಮಾರ ಹೆಗಡೆ ಅವರಿಗೆ ಸಂಸತ್ತಿನಲ್ಲೇ ಕ್ಷಮೆ ಕೇಳಿಸಿಲಾಗಿದೆ. ಈ ಬಗ್ಗೆ ದಾಖಲೆಯಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ಶಿವಣ್ಣಾಚಾರ್ ಇದ್ದರು.