ಕ್ರೈಂ ಸುದ್ದಿ
ರೈತರ ಮೇಲೆ ಪೊಲೀಸರ ದೌರ್ಜನ್ಯ ಆರೋಪ | ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ | ಎಸ್ಪಿ ಧಮೇಂದರ್ ಕುಮಾರ್ ಮೀನಾ ಸ್ಪಷ್ಟನೆ
ಚಿತ್ರದುರ್ಗ ನ್ಯೂಸ್.ಕಾಂ: ಜಮೀನಿನಲ್ಲಿ ವಿದ್ಯುತ್ ಪ್ಯಾನ್ ಲೈನ್ ಎಳೆಯುವ ವಿಚಾರವಾಗಿ ರೈತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾದ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸಿರಿಗೆರೆ ಸಮೀಪದ ಯಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಗೊಲ್ಲರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ರೈತನಾದ ರಹಮತ್ ಎಂಬುವವರನ್ನು ಮಂಗಳವಾರ ಭರಮಸಾಗರ ಪೊಲೀಸ್ ಠಾಣೆ ಪಿಎಸ್‍ಐ ರವಿನಾಯ್ಕ್ ಹಲ್ಲೆ ನಡೆಸಿ, ಜಮೀನಿನಲ್ಲಿ ಎಳೆದೊಯ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರೈತರ ಜಮೀನಿನಲ್ಲಿ ರಿನ್ಯೂ ಕಂಪನಿ ಅಕ್ರಮವಾಗಿ ವಿಂಡ್ ಟರ್ಬೈನ್ ಕಂಬ ಅಳವಡಿಸಿದ್ದರಿಂದ, ಕುಸಿದು ಬಿದ್ದು, ವಿದ್ಯುತ್ ವೈಯರ್ ಕೂಡಾ ಜಮೀನಿನಲ್ಲಿ ಬಿದ್ದಿತ್ತು. ಇದರಿಂದ ಕೆರಳಿದ ರೈತರು ಯಾರಿಗಾದರೂ ಇದರಿಂದ ಜೀವ ಹಾನಿ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: KSRTC ಬಸ್ ಬೈಕ್ ನಡುವೆ ಭೀಕರ ಅಪಘಾತ
ಈ ಸಂಬಂಧ ಗ್ರಾಮ ಪಂಚಾಯಿತಿಯಿಂದ ಎನ್‍ಒಸಿ ಪಡೆಯಿರಿ, ನಮ್ಮ ಜಮೀನಿನಲ್ಲಿ ಹೈಟೆನ್ಶನ್ ವೈಯರ್ ಹಾಕಿದ್ದಕ್ಕೆ ದೃಢೀಕರಣ ಕೊಡಿ ಎಂದು ರೈತ ರಹಮತ್ ಕಂಪನಿಯವರನ್ನು ಪ್ರಶ್ನಿಸಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯಲಾಗಿದೆಯೇ ಎಂದು ಕೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಂಪನಿಯವರು ಪೊಲೀಸರಿಗೆ ದೂರು ನೀಡಿ ರೈತರ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ದೂರಿದ್ದಾರೆ. ವೀಡಿಯೋ ನೋಡಿದ ಜಿಲ್ಲೆಯ ರೈತರು ಹಾಗೂ ಗ್ರಾಮಸ್ಥರು ಪೊಲೀಸರ ವರ್ತನೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾದ ರಹಮತ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಲು ತೂರಿದ ವೀಡಿಯೂ ವೈರಲ್:
ಪೊಲೀಸರು ರೈತರನ್ನು ಎಳೆದೊಯ್ಯುತ್ತಿರುವುದು ಹಾಗೂ ತಳ್ಳಾಟ ನೂಕಾಟ ನಡೆಸುತ್ತಿರುವ ವೀಡಿಯೋ ಮಂಗಳವಾರ ವೈರಲ್ ಆಗಿದ್ದರೆ, ಬುಧವಾರ ಬೆಳಗ್ಗೆ ರೈತ ರಹಮತ್ ಕಾರಿನಲ್ಲಿ ಬಂದು ವಿದ್ಯುತ್ ಕಂಬದ ಮೇಲಿದ್ದ ಸಿಬ್ಬಂದಿ ಮೇಲೆ ಕಲ್ಲು ತೂರಿರುವ ವೀಡಿಯೋ ವೈರಲ್ ಆಗಿದೆ.
ಆರಂಭದಲ್ಲಿ ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಸಾರ್ವಜನಿಕರು, ರಹಮತ್ ಕಲ್ಲು ತೂರಿರುವ ವಿಡಿಯೋ ನೋಡಿ ರೈತನ ಮೇಲೂ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಎಸ್ಪಿ ಏನಂದ್ರು..
ಇನ್ನೂ ಈ ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅಡವಿಗೊಲ್ಲರಹಳ್ಳಿಯಲ್ಲಿ ವಿದ್ಯುತ್ ಲೈನ್ ಕೆಲಸ ಮಾಡುವಾಗ ಜನ ಕಲ್ಲಿನಿಂದ ಹಲ್ಲೆ ನಡೆಸಿದ್ದರು ಎಂದು ಕಂಪನಿಯವರು ದೂರು ನೀಡಿದ್ದರು.
ಇದನ್ನು ತಡೆಯಲು ಪಿಎಸ್‍ಐ ರವಿನಾಯ್ಕ್ ತೆರಳಿದ್ದ ವೇಳೆ ತಳ್ಳಾಟ, ನೂಕಾಟ ನಡೆದಿದೆ. ಈ ಬಗ್ಗೆ ಸ್ಥಳೀಯರು ಹಾಗೂ ಪೊಲೀಸರು ಬೇರೆ ಬೇರೆ ಕಾರಣ ಹೇಳುತ್ತಿದ್ದು, ಈ ಕುರಿತು ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲು ಸೂಚಿಸಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.