ಹೊಸದುರ್ಗ
Agricultural : ರೈತನೆಂಬ ಕೃಷಿ ವಿಜ್ಞಾನಿಯನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ | ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
CHITRADURGA NEWS | 23 SEPTEMBER 2024
ಚಿತ್ರದುರ್ಗ: ಪಂಚಭೂತಗಳು ಮಾನವನ ಜೀವನಕ್ಕೆ ಬೇಕಾದ ಎಲ್ಲ ಆಹಾರವನ್ನು ಕೊಡುತ್ತವೆ. ಆದರೆ ಮಾನವ ದುರಾಸೆಯಿಂದ ಪಂಚಭೂತಗಳನ್ನು ನಾಶ ಮಾಡಿದ್ದಾನೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿಯ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಸರ್ವೋದಯ ಕೃಷಿ ಘಟಕ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಸಾಧಕ ರೈತರ ಸಮ್ಮಿಲನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು.
ಮನುಷ್ಯನ ದಾಹ ಹೆಚ್ಚಾದಂತೆ ತನ್ನ ಸುಖವನ್ನು ಹಾಳು ಮಾಡಿಕೊಳ್ಳುವನು. ದುರಾಸೆಯನ್ನು ದೂರ ತಳ್ಳಿದರೆ ನೆಮ್ಮದಿ ಜೀವನ ಮಾಡಲಿಕ್ಕೆ ಸಾಧ್ಯ. ನಾವೆಲ್ಲ ಬೇರೆ ಬೇರೆ ಸಮಸ್ಯೆಗಳನ್ನು ತೆಗೆದುಕೊಂಡು ತಲೆಮೇಲೆ ಹಾಕಿಕೊಂಡಿದ್ದೇವೆ. ಸಮಸ್ಯೆಗಳನ್ನು ತಲೆಮೇಲೆ ಹಾಕಿಕೊಳ್ಳುವುದರ ಬದಲು ದುರಾಸೆಯನ್ನು ದೂರ ಮಾಡಿಕೊಂಡು ಸರಳಜೀವನ ನಡೆಸಿದರೆ ಯಾವ ಸಮಸ್ಯೆ ಸೃಷ್ಟಿಯಾಗಲು ಸಾಧ್ಯವಿಲ್ಲ ಎಂದರು.
ಕ್ಲಿಕ್ ಮಾಡಿ ಓದಿ: ಕೃಷಿ ಪಂಪ್‌ಸೆಟ್ ಆಧಾರ್ ಜೋಡಣೆಗೆ ಡೆಡ್‌ಲೈನ್ | ಎದುರಾಗಿದೆ ಆರ್ಥಿಕ ಸಂಕಷ್ಟ
ನಿಜವಾದ ರೈತ ಆನಂದಿಂದ, ಸ್ವಾಭಿಮಾನದಿಂದ ಬದುಕುತ್ತಾನೆ. ನಿಜವಾದ ಕೃಷಿ ವಿಜ್ಞಾನಿ ರೈತ. ಓದಿ ಪದವಿ ಪಡೆದ ಕೃಷಿ ವಿಜ್ಞಾನಿ ನಮ್ಮನ್ನು ದಾರಿ ತಪ್ಪಿಸಬಹುದು. ಆದರೆ ರೈತನೆಂಬ ಕೃಷಿ ವಿಜ್ಞಾನಿ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅನೇಕರು ರಾಜಕೀಯವಾಗಿ ಮೇಲೆ ಹೋದಂತೆ ರೈತರ ಮಗ, ಒಕ್ಕಲಿಗ ಮಗನೆಂದು ಹೇಳಿಕೊಳ್ಳುವರು. ಆದರೆ ಅವರಾರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವವರನ್ನು ಕಾಣುತ್ತೇವೆ ಎಂದು ತಿಳಿಸಿದರು.
ನಮ್ಮ ಸರ್ಕಾರ ರೈತರಿಗೆ ಬೇಕಾದ ವಿದ್ಯುತ್, ನೀರು, ಗೊಬ್ಬರದ ಸೌಲಭ್ಯಗಳನ್ನು ಒದಗಿಸುವುದರ ಕಡೆ ಗಮನಹರಿಸಬೇಕು. ಆಗ ರೈತನ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ. ಇಲ್ಲಿ ನಡೆದ ಕಾರ್ಯಕ್ರಮ ರೈತರಿಗೆ ಹೊಸ ಬೆಳಕನ್ನು ಕಾಣುವಂತಾಗಬೇಕು. ಈ ವರ್ಷದ ನಮ್ಮ ನಾಟಕೋತ್ಸವ ಕಾರ್ಯಕ್ರಮದಲ್ಲಿ ಕೃಷಿಗೆ ಹೆಚ್ಚು ಒತ್ತು ಕೊಡಬೇಕೆಂದೆನಿಸಿದೆ. ನಮ್ಮ ಸುತ್ತಮುತ್ತ ಅನೇಕ ರೈತ ಸಾಧಕರಿದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕು. ನಿಜವಾದ ರಕ್ಷಕರು ನಮ್ಮ ರೈತರು ಎಂದರು.
ಕ್ಲಿಕ್ ಮಾಡಿ ಓದಿ: ನೀತಿವಂತರಾಗಿರುವ ರೈತರಲ್ಲಿ ಎದುರಾಗಿದೆ ಸಂಘಟನೆ ಕೊರತೆ | ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ದಿವ್ಯ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ನಿಜವಾದ ಪ್ರತಿಭಾನ್ವಿತರು ರೈತರು. ಅಂಥವರನ್ನು ಪುರಸ್ಕರಿಸಬೇಕು. ಭೂಮಿಯಲ್ಲಿ ರಾಸಾಯನಿಕ ಹೆಚ್ಚಾಗಿ ಭೂಮಿ ಸತ್ವವನ್ನೇ ಕಳೆದುಕೊಂಡಿದೆ. ಉತ್ಪಾದಕರ ವರ್ಗ ರೈತರ ವರ್ಗ. ನಿಜವಾದ ಸಾಧಕ ವರ್ಗ ರೈತರ ವರ್ಗವೇ ಎಂದು ತಿಳಿಸಿದರು.
ರಂಗಶಂಕರವನ್ನು ಸಾಣೇಹಳ್ಳಿಯಲ್ಲಿ ನೋಡುತ್ತಿದ್ದೇವೆ. ಸಾಣೇಹಳ್ಳಿಯನ್ನು ಎಲೆಕ್ಟ್ರಾನಿಕ್ ಸಿಟಿಯನ್ನಾಗಿ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಮಾಡಿದ್ದಾರೆ ಎಂದರು.
ಸರ್ಕಾರದಿಂದ ಕೃಷಿ ಮೇಳಕ್ಕೆ ಲಕ್ಷಗಟ್ಟಲೆ ಹಣ ಖರ್ಚು ಮಾಡುವರು. ಯಾವ್ಯಾವುದಕ್ಕೆ ಖರ್ಚು ಮಾಡುತ್ತಾರೆ ಎನ್ನುವುದು ಅರಿಯದಾಗಿದೆ. ಯಾವುದೇ ಮೇಳ ಮಾಡಿದರೂ ಅದು ಸಾರ್ಥಕ ಮೇಳವಾಗಬೇಕು. ಶ್ರೀಗಳು ವೈಚಾರಿಕವಾಗಿ ಕೆಲಸ ಮಾಡುತ್ತಿದ್ದಾರೆ. ಬಸವತತ್ವವೇ ತಮ್ಮ ಉಸಿರಾಗಿಸಿಕೊಂಡವರು. ನಮ್ಮಂಥ ಯುವಕರಿಗೆ ಮಾರ್ಗದರ್ಶಕರಾಗಿ ನಮ್ಮ ಮಧ್ಯೆ ಇರುವುದೇ ದೊಡ್ಡ ಹೆಮ್ಮೆ ಎಂದು ತಿಳಿಸಿದರು.
ನಾಡೋಜ ಗೊರು ಚನ್ನಬಸಪ್ಪ ಮಾತನಾಡಿ, ನಮ್ಮ ಹಿರಿಯರ ಮೌಲ್ಯಗಳನ್ನು ಗುಡಿಸಿ ನಾಶ ಮಾಡುವ ಕಾಲದಲ್ಲಿ ನಾವಿದ್ದೇವೆ. ರೈತರ ಅನುಭವ ಪ್ರತ್ಯಕ್ಷ ಅನುಭವ. ಕನಿಷ್ಟ ಭೂಮಿಯಲ್ಲಿ ಗರಿಷ್ಟ ಆದಾಯ ತರುವ ರೈತರು ಇಲ್ಲಿ ಬಂದಿರುವುದು ತುಂಬಾ ಸಂತೋಷ ಎಂದರು.
ಕಮ್ಯುನಿಸಂ ಎನ್ನುವ ಸಿದ್ಧಾಂತ ಪ್ರಖ್ಯಾತಿಯಾಗಿದ್ದು ಸೋಯಲಿಸಂ ಎನ್ನುವ ಸಂಘಟಿತ ಶಕ್ತಿಯಿಂದ. ಆದ್ದರಿಂದ ಎಲ್ಲ ರೈತರು ಸಂಘಟಿತ ರೈತರಾಗಬೇಕು. ಗ್ರಾಮೀಣರ ಬದುಕು ಬೆಡಗು ಭಿನ್ನಾಣವಲ್ಲ. ಸಹಜ ಬದುಕು ಅವರದು. ಸಣ್ಣ ಹಿಡುವಳಿದಾರರಿಗೆ ನೈಸರ್ಗಿ ಕ ಕೃಷಿ ತುಂಬ ಲಾಭಕಾರಿ. ರೈತರ ಬದುಕು ಪಂಚಭೂತಗಳನ್ನಾಧರಿಸಿದ್ದು ಎಂದು ತಿಳಿಸಿದರು.
ಸಕಲಜೀವರಾಶಿಗೆ ಮಣ್ಣು ಮಹತ್ವ ಸ್ಥಾನ ಪಡೆದುಕೊಂಡಿದೆ. ಮಾನವನ ಬದುಕಿಗೆ ನೆಲ ಬಿಟ್ಟರೆ ಬೇರೆ ಆಶ್ರಯವಿಲ್ಲ. ನೆಲ ಇದ್ದವನು ಕುಲಕೇಳಬೇಡ ಎನ್ನುವ ಭಾವನೆ ನಮ್ಮ ಹಳ್ಳಿಗರಲ್ಲಿದೆ. ಶಾಶ್ವತ ಮಣ್ಣಿನ ಸತ್ವವನ್ನು ಅಲಕ್ಷ್ಯತೆ ಮಾಡಿದ್ದೇವೆ. ಕೃಷಿ ಲಾಭಕರವಲ್ಲ ಎನ್ನುವ ಧೋರಣೆ ಸರಕಾರದ್ದಾಗಿದೆ. ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಸರಕಾರ ಮಾಡಿಕೊಂಡಿರುವುದು ಕೃಷಿಕರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಆಧುನಿಕ ಕೃಷಿ ಬಗೆಗೆ, ಕೃಷಿ ನೀತಿಯ ಬಗೆಗೆ ಸರಕಾರ ಪುನರ್ ಚಿಂತನೆ ಮಾಡಬೇಕು. ರೈತರು ಬೆಳೆದ ಬೆಲೆಗೆ ಸರಕಾರ ಸೂಕ್ತ ಬೆಲೆಯನ್ನು ನಿಗದಿ ಮಾಡಬೇಕು. ರೈತರ ಬದುಕು ಸ್ವಾಭಿಮಾನದ ಬದುಕಾಗಬೇಕು. ರೈತರ ಭವಿಷ್ಯವನ್ನು ರೈತರೇ ರೂಪಿಸಿಕೊಳ್ಳಬೇಕು. ರೈತರಲ್ಲಿರುವ ಅರಿವಿನ ಕೊರತೆ ಮತ್ತು ಬದ್ಧತೆ ಮೂಡಿಸುವ ಕಾರ್ಯನಕ್ರಮಗಳು ತುರ್ತಾಗಿ ಹಮ್ಮಿಕೊಳ್ಳಬೇಕು. ಸಂಸ್ಕೃತಿ, ಸಂಸ್ಕಾರ, ಬದ್ಧತೆಯ ಕೆಲಸವನ್ನು ಮಾಡುವಂಥವರು ನಮ್ಮ ರೈತರೇ ಎಂದರು.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 23 | ಉದ್ಯೋಗದಲ್ಲಿ ಪ್ರಗತಿ,ಹಠಾತ್ ಆರ್ಥಿಕ ಲಾಭ, ಹೊಸ ವಾಹನ ಯೋಗ
ಮಾಜಿ ಶಾಸಕ ಮಹಿಮಾ ಜೆ.ಪಾಟೀಲ್ ಮಾತನಾಡಿ, ಮಠಗಳು ರೈತರಲ್ಲಿರುವ ಪ್ರತಿಭೆಗಳನ್ನು ಹೊರ ತರುವ ಕೆಲಸ ಮಾಡುತ್ತಾ ಬಂದಿವೆ. ಕಲೆ, ಸಾಹಿತ್ಯ ಸಂಸ್ಕೃತಿಗೆ ಹೆಚ್ಚಿನ ಬೆಲೆಯನ್ನು ಕೊಡುತ್ತಾ ಬಂದಿರುವುದು ಕರ್ನಾಟಕದಲ್ಲಿ. ಈ ಹಿಂದೆ ಏನಾಗಿತ್ತು ಎನ್ನುವುದನ್ನು ಮಾತನಾಡುತ್ತೇವೆ. ಆದರೆ ಈಗ ಎಲ್ಲವೂ ಕೆಟ್ಟೋಗಿದೆ ಎಂದು ಬಹಳ ಆಕ್ರೋಶವಾಗಿ ಮಾತನಾಡುತ್ತೇವೆ. ಆದರೆ ಮುಂದೆ ಏನಾಗಬೇಕೆಂದು ಮಾತನಾಡುವವರ ಸಂಖ್ಯೆ ತುಂಬಾ ವಿರಳ ಎಂದು ತಿಳಿಸಿದರು.
ಹೊಸ ಪರಿವರ್ತನೆ ಪ್ರಾರಂಭವಾಗುವುದು ಕೆಲವೇ ಕೆಲವು ಜನಗಳಿಂದ. ಸಮೂಹದ ಮೂಲಕ ಹೋದಾಗ ಹುಮ್ಮಸ್ಸು ಹೆಚ್ಚುತ್ತೆ. ನಮ್ಮ ಭೂಮಿ ಪ್ರಸವ ವೇದನೆಯ ಮೂಲಕ ಹೋಗ್ತಾ ಇದೆ. ನಮ್ಮ ಹಿರಿಯರ ಏನು ಬೆಳೆಯುತ್ತಿದ್ದರೋ ಅದನ್ನು ಊಟ ಮಾಡ್ತಾ ಇದ್ದರು. ಏನು ಊಟ ಮಾಡುತ್ತಿದ್ದರೋ ಅದನು ಬೆಳೆಯುತ್ತಿದ್ದರು. ಈಗ ಹಣದ ಭೂತದಿಂದ ಓಡಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಕೃಷಿ ಸಾಧಕರಾದ ಚಂದ್ರಶೇಖರ್ ನಾರಾಯಣಪುರ, ಶಿವಪ್ರಸಾದ್, ಮಂಜುನಾಥ, ವಿಶ್ವೇಶ್ವರ ಸಜ್ಜನ್, ಹೊಯ್ಸಳ ಅಪ್ಪಾಜಿ, ಡಾ.ಗಿರೀಶ್, ಡಾ.ಸೋಮಶೇಖರ್ ಇದ್ದರು.