ಮುಖ್ಯ ಸುದ್ದಿ
ಹೆತ್ತ ಕಂದನ ಕೊಂದು ನಿರ್ಭಾವುಕಳಾಗಿ ಕಾರು ಹತ್ತಿದ ತಾಯಿ | ಮಗನ ಶವದೊಂದಿಗೆ 395 ಕಿ.ಮೀ ಸಾಗಿದ ನಂತರ ಅರೆಸ್ಟ್
CHITRADURGA NEWS | 9 JANUARY 2024
ಚಿತ್ರದುರ್ಗ (CHITRADURGA): ಕೈ ತುತ್ತು ತಿನ್ನಿಸಿ 4 ವರ್ಷ ಬೆಳೆಸಿದ್ದ ಮಗನನ್ನು ಕೊಂಚವೂ ಭಾವುಕವಿಲ್ಲದೆ ಕೊಲೆ ಮಾಡಿದ ತಾಯಿ ಬ್ಯಾಗ್ನಲ್ಲಿ ಬಟ್ಟೆಯಂತೆ ಶವವಿಟ್ಟು ನಿರಾಳ ಭಾವನೆಯಲ್ಲಿ ಭಾವಶೂನ್ಯದ ಪಯಣ ಬೆಳೆಸಿದ್ದು ಬರೋಬ್ಬರಿ 395 ಕಿ.ಮೀ.!.
ಸೋಮವಾರ ಬೆಳಿಗ್ಗೆ ಶುರುವಾದ ಕಾರಿನ ಪಯಣ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (artificial intelligence) ಸ್ಟಾರ್ಟ್ ಅಪ್ ಮೈಂಡ್ಫುಲ್ ಎಐ ಲ್ಯಾಬ್ಸ್ನ ಸಹ ಸಂಸ್ಥಾಪಕಿ, ಸಿಇಒ ಸುಚನಾ ಸೇಠ್ (39) ಅವರಿಗೆ ಸಂಜೆ ವೇಳೆಗೆ ಹೊರ ಜಗತ್ತಿನ ಕೊನೆಯ ಪಯಣವಾಯಿತು.
ಮೂಲತಃ ಕೋಲ್ಕತ್ತ ಮೂಲದ ಸುಚನಾ ಸೇಠ್ ಬಾಲ್ಯದಿಂದಲೇ ಕಲಿಕೆ ವಿಚಾರದಲ್ಲಿ ಅತೀ ಬುದ್ಧಿವಂತೆ. ಕೋಲ್ಕತ್ತದ ಭವಾನಿಪುರ ಎಜುಕೇಶನ್ ಸೊಸೈಟಿ ಕಾಲೇಜಿನಲ್ಲಿ ಭೌತ ವಿಜ್ಞಾನ, ಗಣಿತ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 2003–2006 ರಲ್ಲಿ ಪದವಿ ಪಡೆದು, ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ 2006–2008ರಲ್ಲಿ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಈ ನಡುವೆ 2005–2008ರಲ್ಲಿ ರಾಮಕೃಷ್ಣ ಮಿಷನ್ನಲ್ಲಿ ಸಂಸ್ಕೃತದಲ್ಲಿ ಪಿಜಿ ಡಿಪ್ಲೊಮಾದಲ್ಲಿ ಮೊದಲ ರ್ಯಾಂಕ್ಗಳಿಸಿದ್ದಳು.
ಇದನ್ನೂ ಓದಿ: ಮಗುವನ್ನು ಕೊಂದ ತಾಯಿ ಪ್ರಕರಣ | ಬಂಧನಕ್ಕೆ ನೆರವಾದ ಐಮಂಗಲ ಪೊಲೀಸ್
ಬಂಗಾಳಿ, ಇಂಗ್ಷೀಷ್, ಫ್ರೆಂಚ್, ಹಿಂದಿ, ಸಂಸ್ಕೃತ ಹಾಗೂ ತಮಿಳು ಭಾಷೆ ಮಾತನಾಡುತ್ತಿದ್ದಳು. ಯುಎಸ್, ನ್ಯೂಯಾರ್ಕ್, ಬೂಸ್ಟನ್ ಹಾಗೂ ಬೆಂಗಳೂರಿನಲ್ಲಿ ವಿವಿಧ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದಾಳೆ. 2008 ರಲ್ಲಿ ಬೆಂಗಳೂರಿಗೆ ಬಂದ ವೇಳೆ ತಮಿಳುನಾಡಿನ ವೆಂಕಟರಮಣ ಪರಿಚಯವಾಗಿದ್ದು, 2010ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: ಗೋವಾದಲ್ಲಿ ಮಗನನ್ನು ಕೊಂದ ತಾಯಿ ಚಿತ್ರದುರ್ಗದಲ್ಲಿ ಬಂಧನ | ಬ್ಯಾಗ್ನಲ್ಲಿ ಶವದೊಂದಿಗೆ ಕಾರಿನಲ್ಲಿ ಪ್ರಯಾಣ
9 ವರ್ಷದ ಬಳಿ ಅಂದರೆ 2019 ರಲ್ಲಿ ಮಗ ಚಿನ್ಮಯ್ ಜನಿಸಿದ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಈ ವೇಳೆ ದಂಪತಿಗಳಿಬ್ಬರು ಪರಸ್ಪರ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರತಿ ಭಾನುವಾರ ಮಗನೊಂದಿಗೆ ತಂದೆ ಮಾತನಾಡಲು ಕೋರ್ಟ್ ಅವಕಾಶ ನೀಡಿತ್ತು. ಆದರೆ ಇದು ಸುಚನಾ ಸೇಠ್ಗೆ ಇಷ್ಟವಿರಲಿಲ್ಲ ಎನ್ನುತ್ತವೆ ಪೊಲೀಸ್ ಮೂಲಗಳು.
ಸಿಇಒ ಸುಚನಾ ಸೇಠ್ ಮಗನೊಂದಿಗೆ ಶನಿವಾರ ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆ ಅರ್ಪಾಟ್ಮೆಂಟ್ಗೆ ಬಂದಿದ್ದರು. ಎರಡು ದಿನ ಕೊಠಡಿಯಲ್ಲಿದ್ದ ಸುಚನಾ ಸೇಠ್ ಭಾನುವಾರ ಅರ್ಪಾಟ್ಮೆಂಟ್ ಸಿಬ್ಬಂದಿಗೆ ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸಲು ಹೇಳಿದ್ದಾಳೆ. ಈ ವೇಳೆ ಸಿಬ್ಬಂದಿ ವಿಮಾನದಲ್ಲಿ ತೆರಳಲು ಸಲಹೆ ನೀಡಿದರೂ ಸಹ ಟ್ಯಾಕ್ಸಿಯಲ್ಲಿ ಹೋಗುವುದಾಗಿ ತಿಳಿಸಿದ್ದಳು.
ಸೋಮವಾರ ಬೆಳಿಗ್ಗೆ ಟ್ಯಾಕ್ಸಿ ಬರುತ್ತದ್ದಂತೆ ಬ್ಯಾಗ್ನ್ನು ಕಾರಿನಲ್ಲಿಟ್ಟು ಬೆಂಗಳೂರಿಗೆ ಪಯಣ ಬೆಳೆಸಿದ್ದಳು. ‘ಗೋವಾದ ಸೋಲ್ ಬನಿಯನ್ ಗ್ರಾಂಡೆ ಅರ್ಪಾಟ್ಮೆಂಟ್ನಲ್ಲಿ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಸುಚನಾ ಸೇಠ್ ಬಳಿಕ ಕೈ ಕೊಯ್ದುಕೊಂಡಿದ್ದಳು. ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿ ನಿರ್ಧಾರದಿಂದ ಹಿಂದೆ ಸರಿದು ಬೆಂಗಳೂರಿಗೆ ಮರುಳುತ್ತಿದ್ದಳು’ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಂಡ್ಫುಲ್ ಎಐ ಲ್ಯಾಬ್ಸ್ನ ಲಿಂಕ್ಡ್ ಇನ್ ಪುಟದ ಪ್ರಕಾರ, ‘2021 ರ ಎಐ ಎಥಿಕ್ಸ್ನಲ್ಲಿ 100 ಅದ್ಭುತ ಮಹಿಳೆಯರಲ್ಲಿ ಸುಚನಾ ಸೇಠ್ ಅಗ್ರಸ್ಥಾನದಲ್ಲಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದ ಬರ್ಕ್ಮನ್ ಕ್ಲೈನ್ ಸೆಂಟರ್ನಲ್ಲಿ ಸಹವರ್ತಿ ಮತ್ತು ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ 12 ವರ್ಷದ ಅನುಭವ ಹೊಂದಿದ್ದರು’ ಎಂದು ತಿಳಿದು ಬಂದಿದೆ.